

ಪ್ರಮುಖ ಮುಖ್ಯಾಂಶಗಳು
ರಬಕವಿ/ಬನಹಟ್ಟಿ: ತಾಲೂಕಿನ ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಿಸಬೇಕೆಂಬ ಬೇಡಿಕೆ ಇದೀಗ ಮತ್ತಷ್ಟು ಪ್ರಖರಗೊಂಡಿದ್ದು, ಶನಿವಾರ ಬನಹಟ್ಟಿಯಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ಸಂಪೂರ್ಣ ಬಂದ್ ಮೂಲಕ ಸರ್ಕಾರಕ್ಕೆ ಜನರು ತಮ್ಮ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದರಲ್ಲದೇ, ಬಸ್ ನಿಲ್ದಾಣದ ಹತ್ತಿರ ಸರದಿ ಸತ್ಯಾಗ್ರಹ ಪ್ರಾರಂಭಿಸಿದರು.
ಸಾವಿರಾರು ಜನರಿಂದ ವ್ಯಾಪಕ ಬೆಂಬಲ
ಬನಹಟ್ಟಿ ನಗರದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬನಹಟ್ಟಿ ನಗರದ ಬಂದ್‌ಗೆ ಶನಿವಾರ ಉತ್ತಮ ಬೆಂಬಲ ವ್ಯಕ್ತವಾಯಿತು. ಬೃಹತ್ ಮೆರವಣಿಗೆ ಮೂಲಕ ಸಾವಿರಾರು ಜನ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಬೆಳಗ್ಗೆಯಿಂದಲೇ ಶಾಲಾ-ಕಾಲೇಜು, ಅಂಗಡಿ ಮುಂಗಟ್ಟು, ಸಂತೆ, ಬಸ್ ಸೇರಿ ಎಲ್ಲವೂ ಸ್ವಯಂ ಪ್ರೇರಿತ ಬಂದ್ ಆಗಿದ್ದವು. ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು, ಮಠಾಧೀಶರು, ವ್ಯಾಪಾರಸ್ಥರು, ನೇಕಾರರು, ಯುವಕರು, ಮಹಿಳೆಯರು ಸೇರಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾಡಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಮೆರವಣಿಗೆಯುದ್ಧಕ್ಕೂ ಪ್ರಜಾಸೌಧ ಬನಹಟ್ಟಿಯಲ್ಲಿಯೇ ನಿರ್ಮಾಣವಾಗಬೇಕು ಎಂದು ಘೋಷಣೆಗಳು ಮೊಳಗಿದವು. ಮೆರವಣಿಗೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬನಹಟ್ಟಿ ಬಸ್ ನಿಲ್ದಾಣ ಸಮೀಪದ ಚನ್ನಮ್ಮ ವೃತ್ತದಲ್ಲಿರುವ ಸತ್ಯಾಗ್ರಹ ಸ್ಥಳ ತಲುಪಿತು.