ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಯಾತ್ರೆ ಇದು!...ಪಾದಯಾತ್ರೆಯ ಅನುಭವ ಹಂಚಿಕೊಳ್ಳುತ್ತಲೇ 2028ರ ಚುನಾವಣೆ ಪ್ಲಾನ್ ಬಿಚ್ಚಿಟ್ಟ ವಿಜಯೇಂದ್ರ! | Ballari Chalo

Ballari Chalo | ಬಳ್ಳಾರಿಯ ನೆಲಕ್ಕೆ ಶಿರಬಾಗಿ ನಮನ ಸಲ್ಲಿಸಿದ ಬಿ ವೈ ವಿ:
Ballari Chalo | ಬಳ್ಳಾರಿಯ ನೆಲಕ್ಕೆ ಶಿರಬಾಗಿ ನಮನ ಸಲ್ಲಿಸಿದ ಬಿ ವೈ ವಿ:
Published on
ಬಳ್ಳಾರಿ: ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಬಳ್ಳಾರಿ ಚಲೋ (Ballari Chalo) ಪಾದಯಾತ್ರೆ ಅಂತ್ಯವಲ್ಲ, ಇದು ನವ ಆಶಾಕಿರಣ ಮೂಡಿಸಿರುವ ಹೋರಾಟದ ಆರಂಭ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಣ್ಣಿಸಿದ್ದಾರೆ.
ಬಳ್ಳಾರಿ ನಗರದ ಹೊರವಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿವೈವಿ, ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ರಾಜ್ಯದ ಅನೇಕ ಶಾಸಕರು ಹಾಗೂ ಸಂಸದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಯಾತ್ರೆ ಇದು!

ಸಮಾರೋಪ ಸಮಾವೇಶಕ್ಕೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರವು ಕಾನೂನಿನ ನೆಪವೊಡ್ಡಿ ಕಾರ್ಯಕ್ರಮಕ್ಕೆ ಕಿರಿಕಿರಿ ಉಂಟುಮಾಡುತ್ತಿದೆ. ರಾತ್ರೋರಾತ್ರಿ ಬಿಜೆಪಿ ಬ್ಯಾನರ್‌ಗಳನ್ನು ಹರಿಯುತ್ತಿದ್ದು, ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪಾದಯಾತ್ರೆ ನನ್ನ ಜೀವನದಲ್ಲೇ ಮರೆಯಲಾಗದ ಹಾಗೂ ಹೃದಯಕ್ಕೆ ಅತ್ಯಂತ ಹತ್ತಿರವಾದ ಯಾತ್ರೆ ಎಂದ ವಿಜಯೇಂದ್ರ, ನಡೆದುಬರುವ ಹಾದಿಯಲ್ಲಿ ರೈತರು, ಮಹಿಳೆಯರು ಹಾಗೂ ಅಲೆಮಾರಿ ಸಮುದಾಯದ ಜನರೊಂದಿಗೆ ನಡೆಸಿದ ಸಂವಾದ ನನಗೆ ಅಪಾರ ತೃಪ್ತಿ ತಂದಿದೆ ಎಂದರು. ಮುಂಬರುವ 2028ರ ವಿಧಾನಸಭಾ ಚುನಾವಣೆಯು ಸಾಮೂಹಿಕ ನಾಯಕತ್ವದಲ್ಲಿ ನಡೆಯಲಿದೆ ಎಂದು ಘೋಷಿಸಿದ ಅವರು, ಕೇಂದ್ರ ನಾಯಕರಾದ ಅಮಿತ್ ಷಾ ಹಾಗೂ ನಿತಿನ್ ನವೀನ್ ಅವರ ಮಾರ್ಗದರ್ಶನದಲ್ಲಿ ಪಕ್ಷ ಚುನಾವಣೆಯನ್ನು ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.

ಇಡಿ ದಾಳಿ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು!..

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಮನೆ ಹಾಗೂ ಕಚೇರಿಯ ಮೇಲಿನ ಇ ಡಿ ದಾಳಿಯ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರು, ಯಾರ ಮೇಲಾದರೂ ಇ ಡಿ ದಾಳಿ ನಡೆಯಬಹುದು. ಆದರೆ, ಪ್ರತಿಯೊಂದಕ್ಕೂ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿದೆ. ಮಾಜಿ ಸಚಿವ ನಾಗೇಂದ್ರ ವಿಚಾರದಲ್ಲೂ ಹೀಗೆಯೇ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಅಥವಾ ಯಾವುದೇ ನಾಯಕರ ಮೇಲೆ ನಮಗೆ ವೈಯಕ್ತಿಕ ಟಾರ್ಗೆಟ್ ಮಾಡುವ ಅಗತ್ಯವಿಲ್ಲ. ರಾಜ್ಯದ ಕೆಲ ಸಚಿವರು ಸಚಿವ ಸ್ಥಾನದ ಆಕಾಂಕ್ಷಿಗಳಿಂದಾಗಿ ಕಾಂಗ್ರೆಸ್‌ನ ಹಿಟ್‌ಲಿಸ್ಟ್‌ನಲ್ಲಿದ್ದರೆ, ಇನ್ನು ಕೆಲವರು ಬಿಜೆಪಿಯ ಹಿಟ್‌ಲಿಸ್ಟ್‌'ನಲ್ಲಿದ್ದಾರೆ ಎಂಬ ಹೇಳಿಕೆ ನೀಡಿದರು.

ಬಳ್ಳಾರಿಯ ನೆಲಕ್ಕೆ ವಿಜಯನಮನ!...

ಬಿಜೆಪಿ ಹಮ್ಮಿಕೊಂಡಿದ್ದ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆಯು ಇಂದು ಬಳ್ಳಾರಿ ಜಿಲ್ಲೆಯ ಗಡಿ ತಲುಪಿದ್ದು, ಉಕ್ಕಿನ ನಗರಿ ಎಂದೇ ಕರೆಯಲ್ಪಡುವ ಬಳ್ಳಾರಿಯ ನೆಲಕ್ಕೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶಿರಬಾಗಿ ನಮಸ್ಕರಿಸಿದರು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net