ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆ ಅರಿವು ಅಗತ್ಯ

Awareness of electrical safety among the public is essential.
Awareness of electrical safety among the public is essential.
Published on
ಮಾಗಡಿ :ವಿದ್ಯುತ್ ನಮ್ಮ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿದೆ. ಆದರೆ, ಅದರ ಬಳಕೆಯಲ್ಲಿ ಸಣ್ಣ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತವೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಮುಂಜಾಗ್ರತೆ ನಾಳಿನ ಸುರಕ್ಷತೆ ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ರೈತರು ವಿದ್ಯುತ್ ಲೈನ್‌ಗಳು ಮತ್ತು ಉಪಕರಣಗಳ ಬಳಕೆಯಲ್ಲಿ ಮುಂಜಾಗ್ರತೆ ವಹಿಸಬೇಕು.

ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಅಥವಾ ಅಡ್ಡದಾರಿ ಮೂಲಕ ವಿದ್ಯುತ್ ಸಂಪರ್ಕ ಪಡೆಯಲು ಮುಂದಾಗಬಾರದು. ಇಂದಿನ ಮುಂಜಾಗ್ರತೆಯೇ ನಾಳಿನ ಸುರಕ್ಷತೆಗೆ ಬುನಾದಿ ಎಂದರು.

ಮನೆಯ ವೈರಿಂಗ್ ವ್ಯವಸ್ಥೆಯನ್ನು ಕಾಲಕಾಲಕ್ಕೆ ಪರವಾನಗಿ ಪಡೆದ ಇಂಜಿನಿಯರ್‌ಗಳಿಂದ ತಪಾಸಣೆ ಮಾಡಿಸಬೇಕು. ಒದ್ದೆ ಕೈಯಿಂದ ಸ್ವಿಚ್ ಹಾಗೂ ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು. ವಿದ್ಯುತ್ ಕಂಬ ಅಥವಾ ಪರಿವರ್ತಕಗಳ ಹತ್ತಿರ ಜಾನುವಾರುಗಳನ್ನು ಕಟ್ಟಬಾರದು ಮತ್ತು ಕಸ ಕಡ್ಡಿಗಳಿಗೆ ಬೆಂಕಿಹಚ್ಚಬಾರದು. ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮುಟ್ಟದೆ ತಕ್ಷಣವೇ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾದಲ್ಲಿ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸುರಕ್ಷತೆಯ ಫಲಕ ಹಿಡಿದು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಎಒ ರವೀಂದ್ರ, ಶೇಷಾದ್ರಿ, ಮಲ್ಲಣ್ಣಗೌಡ, ರಾಮಣ್ಣಗೌಡ, ಮುನಿಸ್ವಾಮಿ, ನರಸಿಂಹಮೂರ್ತಿ, ಗಿರೀಶ್ ಸೇರಿ ಬೆಸ್ಕಾಂನ ಸಹಾಯಕ ಇಂಜಿನಿಯರ್‌ಗಳು, ಸೆಕ್ಷನ್ ಆಫೀಸರ್‌ಗಳು, ಲೈನ್‌ಮನ್‌ಗಳು, ಕಚೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net