ಸ್ವಯಂಚಾಲಿತ ಮ್ಯುಟೇಶನ್ ಸೇವೆ ಆರಂಭ

ಸ್ವಯಂಚಾಲಿತ ಮ್ಯುಟೇಶನ್ ಸೇವೆಗೆ ಚಾಲನೆ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ.
ಸ್ವಯಂಚಾಲಿತ ಮ್ಯುಟೇಶನ್ ಸೇವೆಗೆ ಚಾಲನೆ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ.
Published on
ಬೆಂಗಳೂರು: ಭೂಮಿ ತಂತ್ರಾಂಶದ ಮೂಲಕ ಪಹಣಿಯಲ್ಲಿ ಹಕ್ಕು ಸೃಜನೆ ಮತ್ತು ಋಣ ತೆಗೆಯುವ ಸ್ವಯಂಚಾಲಿತ ಮ್ಯುಟೇಶನ್ ಸೇವೆಯನ್ನು ರಾಜ್ಯ ವ್ಯಾಪಿ ವಿಸ್ತರಣೆ ಮಾಡಲಾಗಿದೆ. ನಿಗದಿತ ದಿನದೊಳಗೆ ತಕರಾರು ಅರ್ಜಿ ಬರದಿದ್ದರೆ ಗ್ರಾಮ ಲೆಕ್ಕಿಗ (ವಿಎ) ಮತ್ತು ರಾಜಸ್ವ ನಿರೀಕ್ಷಕರ (ಆರ್‌ಐ) ಡಿಜಿಟಲ್ ಸಹಿಯೊಂದಿಗೆ ಸ್ವಯಂಚಾಲಿತ ಮ್ಯುಟೇಶನ್ ಸೃಜನೆ ಆಗಲಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಂಗಳವಾರ ವಿಧಾನಸೌಧದಲ್ಲಿ ಈ ಸೇವೆಗೆ ಚಾಲನೆ ನೀಡಿದರು. 2024ರ ಏಪ್ರಿಲ್‌ನಲ್ಲಿ ನೋಟೀಸು ರಹಿತ ಹಕ್ಕು/ಋಣ, ಭೂಪರಿವರ್ತನೆ, ಪೋಡಿ, ಭೂಸ್ವಾಧೀನ, ಕೋರ್ಟ್ ಆದೇಶ, ಕೋರ್ಟ್, ತಡೆ/ತಡೆ ಬಿಡುಗಡೆ, ಸರ್ಕಾರಿ ಆದೇಶ, ಸಾಗುವಳಿದಾರರು ಮತ್ತು ಪಹಣಿ ವರ್ಗಾವಣೆ ಸಂಬಂಧಪಟ್ಟ ಮ್ಯುಟೇಶನ್‌ಗಳು ಸ್ವಯಂಚಾಲಿತವಾಗಿ ಅನುಮೋದನೆ ಆಗುವಂತೆ ಭೂಮಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ. ಈ ಪ್ರಕಾರ 34 ಲಕ್ಷಕ್ಕೂ ಹೆಚ್ಚು ಮ್ಯುಟೇಶನ್‌ಗಳು ಸ್ವಯಂಚಾಲಿತವಾಗಿ ಅನುಮೋದನೆ ಮಾಡಲಾಗಿರುತ್ತದೆ.
ಇದೇ ರೀತಿಯಾಗಿ 2025ರ ಡಿಸೆಂಬರ್ 26ರಂತೆ ಎಲ್ಲ 7 ದಿನಗಳ (ನೋಂದಾಯಿತ) ಮತ್ತು 15 ದಿನಗಳ (ನೋಂದಾಯಿತವಲ್ಲದ) ನೋಟಿಸ್ ಅವಧಿ ಹೊಂದಿರುವ ಮ್ಯುಟೇಷನ್‌ಗಳನ್ನು ಅವಧಿ ಮುಕ್ತಾಯವಾದ ಆನಂತರ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ಆಗುವಂತೆ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ. ಈ ಮೊದಲು 7 ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಶನ್‌ಗಳನ್ನು ಅವಧಿ ಮುಗಿದ ಮೇಳೆ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡುವ ಅವಶ್ಯಕತೆ ಇತ್ತು. ಇದರಿಂದ ಮ್ಯುಟೇಶನ್ ಅನುಮೋದನೆಗೆ ಹೆಚ್ಚಿನ ಸಮಯ ತಗಲುತ್ತಿತ್ತು. ಜತೆಗೆ ಕಂದಾಯ ನಿರೀಕ್ಷಕರು ಕಚೇರಿಗೆ ಬಂದು ಅನುಮೋದನೆ ನೀಡಬೇಕಾಗಿತ್ತು.

ಏನೆಲ್ಲ ಬದಲಾವಣೆ?

* ನೋಟಿಸ್ ಅವಧಿ ಮುಕ್ತಾಯವಾಗಿದ್ದರೆ ಚಿಂತೆ ಇಲ್ಲ
* ತಂತ್ರಾಂಶದಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇರಲ್ಲ
* ಸರ್ವರ್ ಸಹಿಯಿಂದ ಸ್ವಯಂಚಾಲಿತ ಅನುಮೋದನೆ
* ನೋಟಿಸ್ ಅವಧಿಯಲ್ಲಿ ತಕರಾರು ಬಂದರೂ ಪರಿಹಾರ
* ಮ್ಯುಟೇಶನ್ ಆಗದಿದ್ರೆ ತಹಸೀಲ್ದಾರ್ ಕೋರ್ಟ್‌ಗೆ ವರ್ಗ
* ಇದಕ್ಕಾಗಿ ಆರ್‌ಸಿಸಿಎಂಎಸ್ ತಂತ್ರಾಂಶ ಬಳಸಲಾಗುತ್ತೆ
"

ಸ್ವಯಂಚಾಲಿತ ಮ್ಯುಟೇಶನ್ ಸೇವೆ ಆರಂಭಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕ್ರಮದ ಮೂಲಕ ಜನರಲ್ಲಿ ಜನಜಾಗೃತಿ ಮಾಡಬೇಕು.

ಎಲ್ಲರಿಗೂ ಲ್ಯಾಪ್‌ಟಾಪ್

ಎಲ್ಲ ರಾಜಸ್ವ ನಿರೀಕ್ಷಕರಿಗೆ ಮಾರ್ಚ್ ಅಂತ್ಯದೊಳಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ. ಈ ಮೂಲಕ ಇದ್ದಲ್ಲಿಯೇ ಮ್ಯುಟೇಶನ್‌ಗೆ ತಕರಾರು ಅರ್ಜಿಗಳ ಬಗ್ಗೆ ಮಾಹಿತಿ ಪಡೆದು ಅಪ್‌ಡೇಟ್ ಮಾಡಬಹುದು. 2024ರ ಏ.1 ರಿಂದ 2026ರ ೆ. 20ರವರೆಗೆ ನೋಟಿಸ್ ರಹಿತ 35.11 ಲಕ್ಷ ಮ್ಯುಟೇಶನ್‌ಗಳನ್ನು ಸ್ವಯಂಚಾಲಿತವಾಗಿ ಆರ್‌ಐಗಳ ಸಹಿ ಇಲ್ಲದೆ ಮಾಡಲಾಗಿದೆ. ಅದೇ ರೀತಿ 7 ಮತ್ತು 15 ದಿನಗಳ ನೋಟೀಸು ನೀಡುವ ಮ್ಯುಟೇಶನ್‌ಗಳಿಗೆ ಸ್ವಯಂಚಾಲಿತ ಸೇವೆಯನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಶೇ. 2 ಮಾತ್ರ ತಕರಾರು ಅರ್ಜಿ ಬಂದಿದ್ದು, ಸ್ವಯಂಚಾಲಿತವಾಗಿ ಖಾತಾ ವರ್ಗಾವಣೆಯಾಗಿದೆ. ಉಳಿದಂತೆ ಯಾವುದೇ ಗಂಭೀರ ಲೋಪಗಳು ಕಂಡುಬಂದಿಲ್ಲ. ಆದರಿಂದ ಸ್ವಯಂಚಾಲಿತ ಮ್ಯುಟೇಶನ್ ಸೇವೆಯನ್ನು ರಾಜ್ಯ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪಹಣಿಗೆ ಆಧಾರ್ ಲಿಂಕ್ ಮಾಡಿ

ಆಸ್ತಿಗಳಿಗೆ (ಪಹಣಿ) ಆಧಾರ್ ಜೋಡಣೆ ಮಾಡುವ ಮೂಲಕ ಅಕ್ರಮ ವರ್ಗಾವಣೆಗೆ ತಡೆ ನೀಡಬಹುದು. ಅಕ್ರಮವಾಗಿ ನೋಂದಣಿಯಾದರೆ ಅಥವಾ ಮ್ಯುಟೇಶನ್‌ಗೆ ಬಂದರೆ ತಕ್ಷಣ ಅಸಲಿ ವಾರಸುದಾರರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಆಗ ಎಚ್ಚೆತ್ತು ತಡೆಯಬಹುದು. ಈ ಕೂಡಲೇ ಆಧಾರ್ ಲಿಂಕ್ ಮಾಡುವಂತೆ ಸಾರ್ವಜನಿಕರಿಗೆ ಸಚಿವರು ಮನವಿ ಮಾಡಿದರು.

ತಕರಾರಿಗೆ ಕೆವೈಸಿ ಕಡ್ಡಾಯ

ಮ್ಯುಟೇಶನ್‌ಗೆ ಬರುವ ಮಾಹಿತಿಯನ್ನು ಇ-ಚಾವಡಿಯಲ್ಲಿ ಪ್ರಕಟ ಮಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಸಂಬಂಧಪಟ್ಟ ದಾಖಲೆ ಸಮೇತ, ಇ-ಕೆವೈಸಿ ಮೂಲಕ ತಕರಾರು ಅರ್ಜಿ ಸಲ್ಲಿಸಬೇಕು. ಮೂಕರ್ಜಿ ಪರಿಗಣಿಸುವುದಿಲ್ಲ. ತಕರಾರು ಅರ್ಜಿ ಸಲ್ಲಿಸಲು ಸೂಕ್ತ ದಾಖಲೆ ಸಮೇತ ನೀಡಿದರಷ್ಟೇ ಪರಿಗಣಿಸಿ ತಹಸೀಲ್ದಾರ್ ಕೋರ್ಟ್‌ಗೆ ವರ್ಗಾವಣೆ ಮಾಡಲಾಗುತ್ತದೆ. ಅಲ್ಲಿ 90 ದಿನಗಳ ಒಳಗೆ ಇತ್ಯರ್ಥ ಮಾಡಿ ಮತ್ತೆ ಸ್ವಯಂಚಾಲಿತ ಮ್ಯುಟೇಶನ್ ಮೂಲಕ ಖಾತಾ ವರ್ಗಾವಣೆ ಅಥವಾ ಋಣ ತೆಗೆಯುವ ಕೆಲಸ ಮಾಡಲಾಗುತ್ತದೆ. ನಿಗದಿತ ಅವಧಿಯಲ್ಲಿ ತಕರಾರು ಅರ್ಜಿ ಬರದೆ, ಸ್ವಯಂಚಾಲಿತವಾಗಿ ಮ್ಯುಟೇಶನ್ ಮೂಲಕ ಖಾತಾ ವರ್ಗಾವಣೆ ಆಗಿದ್ದರೆ ಅಂತಹ ಸಮಯದಲ್ಲಿ ನೇರವಾಗಿ ತಹಸೀಲ್ದಾರ್ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net