ಪ್ರೀತಿ ನಿರಾಕರಿಸಿದ್ದ ಯುವತಿಗೆ ಚಾಕು ಇರಿದು ಕೊಲೆಗೆ ಯತ್ನ

ಚಾಕು ಇರಿತಕ್ಕೆ ಒಳಗಾದ ಯುವತಿ, ಚಾಕು ಇರಿದ ಆರೋಪಿ
ಚಾಕು ಇರಿತಕ್ಕೆ ಒಳಗಾದ ಯುವತಿ, ಚಾಕು ಇರಿದ ಆರೋಪಿ
Published on

ಪ್ರಮುಖ ಮುಖ್ಯಾಂಶಗಳು

  • ಅದೇ ಚಾಕುವಿನಿಂದ ಯುವಕ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
  • ಪ್ರತ್ಯೇಕ ಆಸ್ಪತ್ರೆಯಲ್ಲಿ ಇಬ್ಬರ ಚಿಕಿತ್ಸೆ, ತನಿಖೆ
ಬೆಂಗಳೂರು: ಮೂರು ವರ್ಷದಿಂದ ಪ್ರೀತಿಸಿದ್ದ ಯುವಕನ ಪ್ರೀತಿಯನ್ನು ನಿರಾಕರಿಸಿದಕ್ಕೆ ಯುವತಿಗೆ ಚಾಕು ಇರಿದ ಬಳಿಕ ಪ್ರಿಯಕರ ಸಹ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ವರ್ತೂರು ಬಳಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ನಂದಿನಿ ದಾಸ್ (18) ಚಾಕು ಇರಿತಕ್ಕೆ ಒಳಗಾದ ಯುವತಿ. ಬಂದೆ ನವಾಜ್ (18) ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ತೀವ್ರ ಗಾಯಗೊಂಡ ಯುವತಿಯನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರೆ, ಆರೋಪಿಯನ್ನು ವೈದೆಹಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಘಟನೆ ನಡೆದಿದೆ. ಯುವತಿ ತಂದೆ ಯಾದವ್ ದಾಸ್ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಯುವತಿಯ ಕುಟುಂಬ ಪಶ್ಚಿಮ ಬಂಗಾಳದಿಂದ ಐದು ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ನಗರದ ರಾಮಗೊಂಡನಹಳ್ಳಿಗೆ ಬಂದು ನೆಲೆಸಿದ್ದರು. ಯುವತಿ ತಂದೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಮಾಡುತ್ತಿದ್ದರು. ಸಮೀಪದ ವಿದ್ಯಾಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಸಹಪಾಠಿಯಾಗಿದ್ದ ಆರೋಪಿ ಬಂದೆ ನವಾಜ್ ಮೂರು ವರ್ಷದಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಈ ಮಧ್ಯೆ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಿ ನಲ್ಲೂರಹಳ್ಳಿಯಲ್ಲಿ ಟಾಟಾ ಎಸಿ ಚಾಲಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ವಾರದ ಹಿಂದೆ ವಿವಾಹ ನಿಶ್ಚಯ:

ಯುವತಿಗೆ ಒಂದು ವಾರದ ಹಿಂದೆ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದಿದ್ದ ಆರೋಪಿ ಬೆಳಗ್ಗೆ ಯುವತಿ ಮನೆ ಬಳಿ ಬಂದಿದ್ದ. ತಂದೆ-ತಾಯಿ ಕೆಲಸಕ್ಕೆ ಹೋದ ಸಮಯ ನೋಡಿಕೊಂಡು ಮನೆಗೆ ನುಗ್ಗಿದ್ದ. ಇಬ್ಬರು ಸಹೋದರನನ್ನ ರೂಮ್ ವೊಂದರಲ್ಲಿ ಕೂಡಿಹಾಕಿದ್ದ. ಯುವತಿಯನ್ನ ಮನೆಯ ಹಾಲ್ನಲ್ಲಿ ಕೂರಿಸಿ ಬೇರೆಯವನೊಂದಿಗೆ ಮದುವೆಯಾಗಬೇಡ ಎಂದು ತಾಕೀತು ಮಾಡಿದ್ದ.
ಮನೆಯವರು ನೋಡಿದ ಹುಡುಗನೊಂದಿಗೆ ವಿವಾಹವಾಗುವುದಾಗಿ ಯುವತಿ ಹೇಳಿದ್ದಳು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಡುಗೆಮನೆಯಲ್ಲಿದ್ದ ಗ್ಯಾಸ್ ಆನ್ ಮಾಡಿದ್ದ. ಇದನ್ನು ನೋಡಿ ಆತಂಕಗೊಂಡ ಯುವತಿ ಜೋರಾಗಿ ಕಿರುಚಾಡಿದ್ದಳು. ಇದನ್ನು ಕೇಳಿಸಿಕೊಂಡು ನೆರೆಹೊರೆಮನೆಯವರು ಕದ ತಟ್ಟಿದ್ದರು. ಆತಂಕಕ್ಕೆಗೊಳಗಾದ ಆರೋಪಿಯು ತನ್ನ ಬಳಿಯಿದ್ದ ಚಾಕುವಿಂದ ಯುವತಿಯ ಕುತ್ತಿಗೆ, ಬೆನ್ನು ತೊಡೆ ಹಾಗೂ ಕೈ-ಕಾಲುಗಳಿಗೆ ಏಳೆಂಟು ಬಾರಿ ಇರಿದಿದ್ದಾನೆ. ಬಳಿಕ ತಾನು ಸಹ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಕೆಲ ಸಮಯ ಬಳಿಕ ಇಬ್ಬರಿಗೂ ರಕ್ತಸ್ರಾವವಾಗಿ ಕುಸಿದುಬಿದ್ದಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ದೌಡಾಯಿಸಿ ಇಬ್ಬರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net