ಬನ್ನೇರುಟ್ಟಕ್ಕೆ 4 ಆಫ್ರಿಕನ್​ ಚೀತಾಗಳ ಆಗಮನ / ANEKAL

ದಕ್ಷಿಣ ಆಫ್ರಿಕಾದಿಂದ  ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಫ್ರಿಕನ್​ ಚೀತಾ ಬಂದಿರುವುದು.
ದಕ್ಷಿಣ ಆಫ್ರಿಕಾದಿಂದ ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಫ್ರಿಕನ್​ ಚೀತಾ ಬಂದಿರುವುದು.
Published on
ಆನೇಕಲ್​ : ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನಾಲ್ಕು ಆಫ್ರಿಕನ್​ ಚೀತಾಗಳನ್ನು ತರಲಾಗಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳು ಬರಮಾಡಿಕೊಂಡರು.
ದಕ್ಷಿಣ ಆಫ್ರಿಕಾದ ಇಂಡುನಾ ಪೆಮೇಟ್​ ಮತ್ತು ಪ್ಯಾರೆಟ್​ ಪಾರ್ಕ್​ನಿಂದ ಶಿವಂಗಿ (ಚೀತಾ)ನಾಲ್ಕು (ಎರಡು ಗಂಡು ಮತ್ತು ಎರಡು ಹೆಣ್ಣು) ಚೀತಾಗಳನ್ನು ವನ್ಯಜಿವಿ ಸಂರಕ್ಷಣಾ ಕಾಯ್ದೆಯಡಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಯಿತು.
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ಹಾಗೂ ಆರೋಗ್ಯ ಸಮಸ್ಯೆ ಎದುರಾಗದಂತೆ ಸೂಕ್ತ ನಿಗಾ ವಹಿಸಲು ಕ್ವಾರಂಟೈನಲ್ಲಿ ಇಡಬೇಕು. 30ದಿನ ಗೊತ್ತುಪಡಿಸಿದ ಆಹಾರ ನೀಡಬೇಕು. ವಿದೇಶಿ ವನ್ಯಜಿವಿಗಳಿಗೆ ಸೋಂಕು ಇದೆಯೇ ಎಂದು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಹಿಂದೆ ಕರ್ನಾಟಕದಲ್ಲೇ ಶಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಆದರೆ, ಪ್ರಸ್ತುತ ಇವು ನಾಮಾವಶೇಷ ಆಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡಲು ಅವಕಾಶ ಆಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷಣೆೆಗೆ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಸುನೀಲ್​ ಪನ್ವಾರ್​ ಅವರಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಕೃತಜ್ಞತೆ ಸಲ್ಲಿಸಿದ ಜೈವಿಕ ಉದ್ಯಾನವನ : ಪ್ರಾಣಿ ವಿನಿಮಯದ ಮೊದಲು ಪಶು ಸಂಗೋಪನೆ ಇಲಾಖೆಯ ಮಾರ್ಗಸೂಚಿಯಂತೆ ಚೀತಾಗಳನ್ನು ನಿಗದಿತ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಆರೋಗ್ಯ ತಪಾಸಣೆ ನಂತರ ಸಾರ್ವಜನಿಕರ ವೀಕ್ಷಣೆಗೆ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಸದ್ಯ ಚಿತಾಗಳನ್ನು ಬನ್ನೇರುಘಟ್ಟದಲ್ಲಿ ಮೊದಲೇ ನಿಗದಿ ಮಾಡಿದ್ದ ಸ್ಥಳದಲ್ಲಿ ಬಿಡಲಾಗಿದ್ದು, ವೈದ್ಯರ ತಂಡ ಅವುಗಳ ಮೇಲೆ ನಿಗಾ ಇಟ್ಟಿದೆೆ.
ವಿನಿಯಮ ಕಾರ್ಯಕ್ರಮದಲ್ಲಿ ಬೆಂಬಲ ಮತ್ತು ಸಹಕಾರ ನೀಡಿದ ದಕ್ಷಿಣ ಆಫ್ರಿಕಾದ ಇಂಡುನಾ ಪೆಮೇಟ್​ ಮತ್ತು ಪ್ಯಾರೆಟ್​ ಪಾರ್ಕ್​ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕೃತಜ್ಞತೆ ಸಲ್ಲಿಸುತ್ತೇವೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಈ ಪ್ರಸ್ತಾವನೆಯನ್ನು ಅನುಮೋದಿಸಿದ ಎಲ್ಲ ಸಂಬಂಧಿತ ಇಲಾಖೆಗಳಿಗೆ ಹಾಗೂ ಚೀತಾಗಳನ್ನು ಸುರಕ್ಷಿತ ಮತ್ತು ಸುಗಮವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲು ಸಹಾಯ ಮಾಡಿದ ವಿಮಾನಯಾನ ತಂಡಕ್ಕೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಧನ್ಯವಾದ ತಿಳಿಸಿದರು.
ಹೆಚ್ಚಿನ ಆದ್ಯತೆ : ಭಾರತಕ್ಕೆ ಆಫ್ರಿಕನ್​ ಚೀತಾಗಳನ್ನು ತರುವುದು ಇದೇ ಮೊದಲಲ್ಲ. 2022ರಲ್ಲಿ ಕೇಂದ್ರದ "ಪ್ರಾಜೆಕ್ಟ್​ ಚೀತಾ' ಅಡಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ನ್ಯಾಷನಲ್​ ಪಾರ್ಕ್​ಗೆ ತರಲಾಗಿತ್ತು. ಆದರೆ, ಚರ್ಮದ ಸೋಂಕು, ತೀವ್ರ ಉಷ್ಣಾಂಶ ಮತ್ತು ಹವಾಮಾನ ವೈಪರೀತ್ಯ ಹಾಗೂ ಪರಸ್ಪರ ಕಾಳಗಗಳಿಂದಾಗಿ ಮರಿಗಳೂ ಸೇರಿ 10ಕ್ಕೂ ಹೆಚ್ಚು ಚೀತಾಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿಯೇ ವೈಫಲ್ಯಗಳಿಂದ ಪಾಠ ಕಲಿತಿರುವ ಕರ್ನಾಟಕ ಅರಣ್ಯ ಇಲಾಖೆ, ಬನ್ನೇರುಘಟ್ಟದಲ್ಲಿ ಚೀತಾಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net