ಏ.3ರಂದು ತಾಯಲೂರು ಗ್ರಾಮದ ಬಿಎಸ್ಎನ್ಎಲ್ ಕಚೇರಿಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಲಾರ ರಹಮತ್ ನಗರದ ಶೌಕತ್ (22), ಫರೀನ್ ಖಾನ್ (23) ಬಂಧಿತರು. ಮೂರು ದ್ವಿಚಕ್ರ ವಾಹನ, 10 ಕೆಜಿ ಅಲ್ಯೂಮಿನಿಯಂ ಹಾಗೂ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಏ.3ರಂದು ರಾತ್ರಿ ಕಚೇರಿಯ ಕಿಟಕಿಯ ಕಂಬಿಗಳನ್ನು ಕಿತ್ತು ಒಳನುಗ್ಗಿದ್ದ ಕಳ್ಳರು ಡಿಸಿ ಪವರ್ ಕೇಬಲ್ ಹಾಗೂ ಬ್ಯಾಟರಿ ಸಾಮಗ್ರಿಗಳನ್ನು ಕಳವು ಮಾಡಿದ್ದರು. ಇದೇ ವ್ಯಾಪ್ತಿಯಲ್ಲಿ ನಂದಕಿರಣ್ ಅವರಿಗೆ ಸೇರಿದ ಬೈಕ್ ಕೂಡ ಕಳವಾಗಿತ್ತು. ಈ ಬಗ್ಗೆ ಬಿಎಸ್ಎನ್ಎಲ್ ಎಕ್ಸ್ಚೇಂಜ್ನ ಕಿರಿಯ ಟೆಲಿಕಾಂ ಅಧಿಕಾರಿ ಎಸ್.ನಂದಕಿರಣ್ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.