ಜಿಲ್ಲೆಯಲ್ಲಿ ಅರಣ್ಯ ಮತ್ತು ರೈತರ ಮಧ್ಯೆ ಸಂಘರ್ಷ ಮುಂದುವರೆದಿದೆ

ಚಿತ್ರ ೦೩ ಕೆ.ಎಲ್.ಆರ್. ೦೧ : ಅರಣ್ಯ ಇಲಾಖೆಯವರು ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗುತ್ತಿರುವುದು.
ಚಿತ್ರ ೦೩ ಕೆ.ಎಲ್.ಆರ್. ೦೧ : ಅರಣ್ಯ ಇಲಾಖೆಯವರು ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗುತ್ತಿರುವುದು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯಲ್ಲಿ ಅರಣ್ಯ ಮತ್ತು ರೈತರ ಮಧ್ಯೆ ಸಂಘರ್ಷ ಮುಂದುವರೆದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಎಸ್.ಐ.ಟಿ. ರಚನೆಯಾಗಿದೆ. ಎಸ್.ಐ.ಟಿ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೇ ಮಾಡುವ ತನಕ ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯವರು ಪ್ರವೇಶ ಮಾಡಬಾರದು ಎಂದು ಸರ್ಕಾರ ಮತ್ತು ಜಿಲ್ಲಾಡಳಿತ ತಿಳಿಸುತ್ತಿದ್ದರೂ ಅರಣ್ಯ ಪ್ರದೇಶದ ಒತ್ತುವರಿ ತೆರವಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಪಪಡಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಪ್ರತಿದಿನ ಸಂಘರ್ಷ ಮುಂದುವರೆಯುತ್ತಲೇ ಇದೆ. ಕಳೆದ ೩ ವರ್ಷಗಳಿಂದ ಜಿಲ್ಲೆಯಲ್ಲಿ ೩೦೦೦ ಸಾವಿರಕ್ಕೂ ಹೆಚ್ಚು ಎಕರೆ ಜಮೀನನ್ನು ಅರಣ್ಯ ಇಲಾಖೆಯವರು ರೈತರಿಂದ ವಶಪಡಿಸಿಕೊಂಡಿದ್ದಾರೆ. ಇನ್ನು ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳಲ್ಲಿ ಜಂಟಿ ಸರ್ವೇ ಆಗುವ ತನಕ ಅರಣ್ಯ ಇಲಾಖೆಯವರು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಸೂಚನೆ ನೀಡುತ್ತಲೇ ಇದ್ದಾರೆ. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯವರಿಗೆ ಸೂಚನೆ ನೀಡುತ್ತಿದ್ದರೂ ಅರಣ್ಯ ಇಲಾಖೆಯವರು ಸದ್ದುಗದ್ದಲಿಲ್ಲದೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ರೈತರ ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಸಂಘರ್ಷ ನಡೆದು ರೈತರ ವಿರುದ್ಧ ಕೇಸುಗಳು ದಾಖಲಾಗುತ್ತಿವೆ.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಎಸ್.ಐ.ಟಿ. ತಂಡವನ್ನು ಎಲ್ಲಾ ಜಿಲ್ಲೆಗಳಲ್ಲಿ ರಚನೆ ಮಾಡಿದ್ದೇವೆ. ಎಸ್.ಐ.ಟಿ. ತಂಡ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ಅರಣ್ಯ ಸೇರಿದೆಯೇ ಅಥವಾ ಕಂದಾಯ ಇಲಾಖೆಗೆ ಸೇರಿದೆಯೇ ಎಂಬುದನ್ನು ಪತ್ತೆ ಹಚ್ಚಿದ ನಂತರ ತೀರ್ಮಾನಿಸಲಾಗುವುದು ಎಂದು ಅರಣ್ಯ ಇಲಾಖೆಗೆ ಆಯಾ ಜಿಲ್ಲಾಡಳಿತ ಸೂಚನೆ ನೀಡಿದೆ. ಅರಣ್ಯ ಇಲಾಖೆ ಇದಕ್ಕೂ ನಮಗೂ ಸಂಬAಧವಿಲ್ಲ. ನಮ್ಮ ಇಲಾಖೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿದೆ. ಅವುಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಸುತ್ತೋಲೆ :
ಈ ಕುರಿತು ಡಿಸೆಂಬರ್ ೨೦ ರಂದು ಅರಣ್ಯ ಇಲಾಖೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಸುತ್ತೋಲೆಯೊಂದನ್ನು ಹೊರಡಿಸಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಅರಣ್ಯ ಇಲಾಖೆ ಎಸ್.ಐ.ಟಿ ರಚಿಸಿದ್ದರೂ ಅರಣ್ಯ ಪ್ರದೇಶ ಒತ್ತುವರಿಗೆ ತೆರವಿಗೆ ಯಾವುದೇ ನಿರ್ಬಂಧ ಇರುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಅರಣ್ಯ ಒತ್ತುವರಿ ಪರಿಶೀಲನೆಗೆ ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದರೂ ಕೇವಲ ಅರಣ್ಯ ಜಮೀನನ್ನು ಅಕ್ರಮವಾಗಿ ಕಂದಾಯ ಇಲಾಖೆಯವರು ಮಂಜೂರು ಮಾಡಿರುವ ಪ್ರಕರಣಗಳ ಮಾಹಿತಿಯನ್ನು ಗುರ್ತಿಸಿ ಸರ್ಕಾರಕ್ಕೆ ವರದಿ ಕೊಡಲಿಕ್ಕೆ ಮಾತ್ರ ಎಂದು ವಿವರಿಸಿದ್ದಾರೆ.
ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಯಿಂದ ಅನಧಿಕೃತ ಮಂಜೂರಾತಿ ಪರಿಶೀಲನೆಗೆ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ತನಿಖಾ ತಂಡಗಳನ್ನು ರಚಿಸಲಾಗಿದೆ. ಇದರ ಮೂಲ ಗುರಿ ಅನಧಿಕೃತ ಭೂ ಮಂಜೂರಾತಿಗೆ ಸಂಬAಧಿಸಿದ್ದಾಗಿದ್ದು, ಅಂತಹ ಅರಣ್ಯ ಭೂಮಿಗಳನ್ನು ಅರಣ್ಯ ಇಲಾಖೆಗೆ ವಾಪಸ್ಸು ಪಡೆಯುವ ಬಗ್ಗೆ ನಿರ್ದೇಶನ ನೀಡಲಾಗಿದೆ ಎಂದು ನೇಗಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದ್ದರಿಂದ ಆದೇಶದಂತೆ ಅರಣ್ಯ ಭೂಮಿ ಒತ್ತುವರಿ ತೆರವು ಪ್ರಕ್ರಿಯೆ ಮುಂದುವರೆಸಲು ಸೂಚಿಸಿದ್ದಾರೆ.
ಇಷ್ಟು ದಿನಗಳ ಕಾಲ ಸರ್ಕಾರ ಮತ್ತು ಜಿಲ್ಲಾಡಳಿತ ಎಸ್.ಐ.ಟಿ. ರಚನೆಯಾಗಿದೆ. ಜಂಟಿ ಸರ್ವೇ ನಡೆಸುವ ತನಕ ಯಾವ ರೈತರು ಆತಂಕ ಪಡಬೇಕಾಗಿಲ್ಲ ಎಂದು ರೈತರಿಗೆ ಆಶ್ವಾಸನೆ ನೀಡುತ್ತಿದ್ದು, ಆದರೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಹೊರಡಿಸುವ ಸುತ್ತೋಲೆ ಪ್ರಕಾರ ಸುಪ್ರೀಂ ಕೋರ್ಟ್ ಆದೇಶವನ್ನು ರೈತರು ನಂಬುವAತಿಲ್ಲ ಎಂಬAತಾಗಿದ್ದು, ಸುಪ್ರೀಂಕೋರ್ಟ್ ದೊಡ್ಡದೋ ಅಥವಾ ಅರಣ್ಯ ಇಲಾಖೆಯವರೇ ಈ ದೇಶಕ್ಕೆ ಸುಪ್ರೀಮೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಆತಂಕದಲ್ಲಿ ರೈತರು :
ಸುಮಾರು ೫೦ ರಿಂದ ೬೦ ವರ್ಷಗಳ ಕಾಲ ರೈತರ ಅನುಭವದಲ್ಲಿದ್ದು, ಕಂದಾಯ ಇಲಾಖೆಯಿಂದ ಎಲ್ಲಾ ದಾಖಲೆಗಳನ್ನು ಪಡೆದಿದ್ದರೂ ಸಹ ಅರಣ್ಯ ಇಲಾಖೆಯವರು ನಮ್ಮದು ಎಂದು ಬರುತ್ತಿದ್ದಾರೆ. ಹಾಗೂ ಹೊಸದಾಗಿ ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಖರೀದಿ ಮಾಡಿರುವವರ ಗತಿಯೇನು? ನೂರಾರು ವರ್ಷಗಳಿಂದ ಗ್ರಾಮವಾಗಿ ನಿರ್ಮಿಸಿಕೊಂಡು ಕೋಟ್ಯಾಂತರ ರೂ.ಗಳ ಬಂಡವಾಳ ಹಾಕಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರು ಎಲ್ಲಿ ಹೋಗಬೇಕು. ನಮ್ಮ ಜಮೀನಿಗೆ ಕಂದಾಯವರು ನೀಡಿರುವ ಪತ್ರಗಳೇ ಮುಖ್ಯ. ಅರಣ್ಯ ಇಲಾಖೆಯವರಿಗೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ನಕ್ಷೆಯನ್ನು ಹಿಡಿದು ನಮ್ಮದು ಜಮೀನು ಎಂದು ರೈತರ ಮೇಲೆ ದಬ್ಬಾಳಿಕೆ ಮಾಡಿ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net