ಶಿವಪುರ ಗ್ರಾಮ ಅರಣ್ಯ ಇಲಾಖೆಗೆ ಸೇರ್ಪಡೆ ವದಂತಿ

ಚಿತ್ರ ೨೮ ಕೆ.ಎಲ್.ಆರ್. ೦೧ : ಶಿವಪುರ ಗ್ರಾಮದಲ್ಲಿ ರೈತರ ಮುಖಂಡರೊAದಿಗೆ ಗ್ರಾಮಸ್ಥರು ಸಭೆ ನಡೆಸುತ್ತಿರುವುದು.
ಚಿತ್ರ ೨೮ ಕೆ.ಎಲ್.ಆರ್. ೦೧ : ಶಿವಪುರ ಗ್ರಾಮದಲ್ಲಿ ರೈತರ ಮುಖಂಡರೊAದಿಗೆ ಗ್ರಾಮಸ್ಥರು ಸಭೆ ನಡೆಸುತ್ತಿರುವುದು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಇಷ್ಟು ದಿನಗಳ ಕಾಲ ಸಂಘರ್ಷ ನಡೆಯುತ್ತಿತ್ತು. ಈಗ ಮತ್ತೊಂದು ವಿವಾದ ಬುಗಿಲೆದ್ದಿದ್ದು, ಕಸಬಾ ಹೋಬಳಿಯ ೪೦೦ ಮನೆಗಳು ಇರುವ ಶಿವಪುರ ಎಂಬ ಇಡೀ ಗ್ರಾಮ ಅರಣ್ಯ ಇಲಾಖೆಗೆ ಸೇರ್ಪಡೆಯಾಗುತ್ತದೆಂಬ ವದಂತಿ ಹಬ್ಬಿದ್ದು, ಇಡೀ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ.
ಶಿವಪುರ ಗ್ರಾಮ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಪಂಚಾಯ್ತಿಗೆ ಸೇರಿದ್ದು, ಗ್ರಾಮದಲ್ಲಿ ೩ ಸಾವಿರ ಜನಸಂಖ್ಯೆ ವಾಸಿಸುತ್ತಿದ್ದು, ಇಡೀ ಗ್ರಾಮದಲ್ಲಿ ಬೋವಿ ಸಮುದಾಯ ಬಿಟ್ಟರೆ ಬೇರೆ ಸಮುದಾಯದವರು ಇಲ್ಲ. ಈ ಗ್ರಾಮ ಕಟ್ಟಿ ೧೦೦ ವರ್ಷಗಳು ಆಗಿವೆ ಎಂಬುದು ಆ ಗ್ರಾಮದ ಹಿರಿಯರ ಮಾತಾಗಿದೆ. ಇದಕ್ಕೂ ಮೊದಲು ಈ ಗ್ರಾಮಸ್ಥರು ಪಕ್ಕದ ಮೊಗಿಲಹಳ್ಳಿ ಸಮೀಪ ಗುಡಿಸಲಿನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಆ ಜಾಗದಲ್ಲಿ ಸರಿಹೋಗಲಿಲ್ಲ ಎಂಬ ಕಾರಣಕ್ಕೆ ಈಗ ಇರುವ ಶಿವಪುರ ಪಕ್ಕದಲ್ಲಿಯೇ ವಾಸ ಮಾಡುತ್ತಿದ್ದು, ಅಲ್ಲಿ ಸಾವುಗಳ ಸಂಖ್ಯೆ ಹೆಚ್ಚಾದ ಕಾರಣ ಪಕ್ಕದಲ್ಲಿಯೇ ಇದ್ದ ಸರ್ಕಾರಿ ಜಮೀನಿನಲ್ಲಿ ಗಿಡಗಂಟೆಗಳನ್ನು ತೆರವುಗೊಳಿಸಿ ಊರನ್ನು ನಿರ್ಮಿಸಿಕೊಂಡು ಅದಕ್ಕೆ ಶಿವಪುರ ಎಂಬ ನಾಮಕರಣ ಮಾಡಿರುತ್ತಾರೆ. ಬೇರೆ ಊರುಗಳಿಂದ ಅವರದೇ ಆದ ಸಮುದಾಯದವರು ಬಂದು ಸೇರಿ ಈಗ ದೊಡ್ಡ ಗ್ರಾಮವಾಗಿ ಹೊರಹೊಮ್ಮಿದೆ.
ಕಳೆದ ೨ ವರ್ಷಗಳಿಂದ ಅರಣ್ಯ ಇಲಾಖೆಯವರು ತಾಲ್ಲೂಕಿನಲ್ಲಿ ಅರಣ್ಯ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಒತ್ತುವರಿ ಕಾರ್ಯಾಚರಣಕ್ಕೆ ಮುಂದಾಗಿ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷದ ನಡುವೆಯೂ ಶ್ರೀನಿವಾಸಪುರ ತಾಲ್ಲೂಕು ಒಂದರಲ್ಲಿಯೇ ೧೫೦೦ ಎಕರೆಯಷ್ಟು ಜಮೀನನ್ನು ಅರಣ್ಯ ಇಲಾಖೆಯವರು ರೈತರ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಜಾಗ ತಾಲ್ಲೂಕಿನಲ್ಲಿ ಇನ್ನೂ ಇದೆ ಎಂದು ಇತ್ತೀಚೆಗೆ ಮತ್ತೆ ಒತ್ತುವರಿ ಕಾರ್ಯಾಚರಣಕ್ಕೆ ಮುಂದಾಗಿದ್ದಾರೆ. ಇದಲ್ಲದೆ ಅರಣ್ಯ ಇಲಾಖೆಗೆ ಸೇರುವ ಗಡಿ ಗುರ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಕಳೆದ ೩ ದಿನಗಳ ಹಿಂದೆ ತಾಲ್ಲೂಕಿನ ದೊಡಮಲದಡ್ಡಿ ಗ್ರಾಮದ ಬಳಿ ರೈತರ ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಸಂಘರ್ಷ ನಡೆದು ೧೦ ಮಂದಿಯ ವಿರುದ್ಧ ಕೇಸು ದಾಖಲಾಗಿದೆ.
ಶಿವಪುರ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬಳಿ ಒತ್ತುವರಿ ಆಗಿದೆ ಎಂದು ಅರಣ್ಯ ಇಲಾಖೆಯವರು ಸ್ಯಾಟಲೈಟ್ ಮ್ಯಾಪ್ ಮೂಲಕ ಗಡಿ ಗುರ್ತಿಸಲು ಮುಂದಾದಾಗ ಎಚ್ಚೆತ್ತುಕೊಂಡ ಶಿವಪುರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಗ್ರಾಮಸ್ಥರಿಗೆ ತಿಳಿಸಿರುವ ಪ್ರಕಾರ ನಿಮ್ಮ ಗ್ರಾಮ ಸಂಪೂರ್ಣ ಅರಣ್ಯ ಇಲಾಖೆಗೆ ಸೇರ್ಪಡೆಯಾಗುತ್ತದೆಂದು ತಿಳಿಸಿರುವುದರಿಂದ ಹಾಗೂ ನಿಮ್ಮಗಳ ಜಮೀನುಗಳು ಸೇರಿದಂತೆ ಪಕ್ಕದ ಮೊಗಿಲಹಳ್ಳಿ, ಗಂಗಸAದ್ರ ಸೇರಿದಂತೆ ನಾಲ್ಕೆöÊದು ಊರುಗಳಿಗೆ ಸೇರಿದ ೯೦೦ ಎಕೆರೆ ಜಮೀನು ಅರಣ್ಯ ಇಲಾಖೆಗೆ ಸೇರ್ಪಡೆಯಾಗುತ್ತದೆಂದು ಮೌಖಿಕವಾಗಿ ತಿಳಿಸಿರುವ ಹಿನ್ನಲೆಯಲ್ಲಿ ಶಿವಪುರ ಗ್ರಾಮಸ್ಥರು ಅಲ್ಲದೆ ಇತರೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಶಿವಪುರ ಗ್ರಾಮದಲ್ಲಿ ಸಭೆ :
ಭಾನುವಾರ ಬೆಳ್ಳಿಗ್ಗೆ ಶಿವಪುರ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ರೈತ ಮುಖಂರು ಸಭೆ ನಡೆಸಿ ಯಾವುದೇ ಕಾರಣಕ್ಕೂ ಗ್ರಾಮ ತೆರವುಗೊಳಿಸಲು ಮತ್ತು ಜಮೀನುಗಳನ್ನು ತೆರವುಗೊಳಿಸಲು ಬಿಡುವುದಿಲ್ಲ. ಸೋಮವಾರ ಮೊದಲನೇ ಹಂತದಲ್ಲಿ ಶ್ರೀನಿವಾಸಪುರ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ೪೦೦ ಕುಟುಂಬಗಳ ಸಮೇತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತೀರ್ಮಾನಿಸಿದ್ದಾರೆ. ಅದಕ್ಕೆ ರೈತ ಸಂಘಟನೆಗಳವರು ಸಾಥ್ ನೀಡಿದ್ದಾರೆ.
ಆಗಿದ್ದು ಅನಾಹುತ ಏಣು ?
೨೦೨೦ರ ಕೋವಿಡ್ ಸಮಯದಲ್ಲಿ ಹಿಂದಿನ ಡಿಪಿಓ ಏಡುಕೊಂಡಲು ರವರು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೨೪ ಸಾವಿರ ಎಕರೆ ಜಮೀನು ಅರಣ್ಯ ಇಲಾಖೆಗೆ ಸೇರಬೇಕಾಗಿದೆ. ಮೈಸೂರು ರಾಜರ ಕಾಲದಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ಭೂಮಿಯನ್ನು ನೀಡಿದ್ದಾರೆ. ಅದನ್ನು ರೈತರು ಕಂದಾಯ ಇಲಾಖೆಯಲ್ಲಿ ದಾಖಲೆಗಳನ್ನು ಪಡೆದು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಜಮೀನುಗಳನ್ನು ಬಿಡುಗಡೆಗೊಳಿಸಬೇಕೆಂದು ಆಗಿನ ಜಿಲ್ಲಾಧಿಕಾರಿ ಸೆಲ್ವಮಣಿಯವರಿಗೆ ಪತ್ರ ಬರೆಯುತ್ತಾರೆ.
ಸದರಿ ಪತ್ರವನ್ನು ಆಗಿನ ಜಿಲ್ಲಾಧಿಕಾರಿ ಶ್ರೀನಿವಾಸಪುರ ತಾಲ್ಲೂಕಿನ ಆಗಿನ ತಹಶೀಲ್ದಾರ್ ಶ್ರೀನಿವಾಸ್ ರವರಿಗೆ ರವಾನೆ ಮಾಡುತ್ತಾರೆ. ತಹಶೀಲ್ದಾರ್ ಶ್ರೀನಿವಾಸ್ ಯಥಾವತ್ತಾಗಿ ಡಿಎಫ್‌ಓ ಕೇಳಿದ ಸರ್ವೇ ನಂಬರ್ ಜಮೀನುಗಳಿಗೆ ಇದ್ದ ದಾಖಲೆಗಳನ್ನು ರದ್ಧುಪಡಿಸಿ ಫಹಣಿಗಳಲ್ಲಿ ಅರಣ್ಯ ಎಂದು ನಮೂದಿಸಿ ಅರಣ್ಯ ಇಲಾಖೆಗೆ ನೀಡುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಅರಣ್ಯ ಇಲಾಖೆಯವರು ಈಗ ಜಮೀನು ನಮ್ಮದು ಎಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಕೋಟ್
ಆಗಿನ ಡಿಎಫ್‌ಓ ರವರು ನೀಡಿದ ಪತ್ರಕ್ಕೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಪರಿಶೀಲನೆ ನಡೆಸಬೇಕಾಗಿತ್ತು. ಕಂದಾಯ ಇಲಾಖೆಯವರೇ ನೀಡಿರುವ ದಾಖಲೆಗಳನ್ನು ರದ್ಧುಪಡಿಸುವ ಅವಶ್ಯಕತೆ ಏನಿತ್ತು. ಸ್ವಾಧೀನದಲ್ಲಿ ರೈತರು ಇದ್ದಾರೆಯೇ ಇಲ್ಲ ಎಂಬುದನ್ನು ಪರಿಶೀಲನೆ ಮಾಡಬೇಕಾಗಿತ್ತು. ತಹಶೀಲ್ದಾರ್ ರವರು ರಾತ್ರೋರಾತ್ರಿ ಕೈಗೊಂಡ ತೀರ್ಮಾನದಿಂದ ಇಂತಹ ಅನಾನುತಕ್ಕೆ ಕಾರಣವಾಗಿದೆ. ಈಗ ರೈತರು ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಪ್ರತಿದಿನ ಸಂಘರ್ಷ ನಡೆಯುವಂತಾಗಿದೆ. ಶಿವಪುರದಲ್ಲಿ ಬೋವಿ ಜನಾಂಗದವರೇ ಇರುವುದು. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆ ಊರನ್ನೇ ಖಾಲಿ ಮಾಡಲು ಅರಣ್ಯ ಇಲಾಖೆಯವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಮೌನವೇಕೆ? ತಕ್ಷಣ ಸ್ಪಂಧನೆ ಮಾಡದಿದ್ದರೆ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ.
-ಪಿ.ಆರ್.ಸೂರ್ಯನಾರಾಯಣ, ರೈತ ಮುಖಂಡ
ಕೋಟ್
ಶಿವಪುರ ಗ್ರಾಮಕ್ಕೆ ೧೦೦ ವರ್ಷಗಳ ಇತಿಹಾಸವಿದೆ. ನಾಲ್ಕೆöÊದು ಊರುಗಳ ಬಳಿ ನಮ್ಮ ಹಿರಿಯರು ಮನೆಗಳನ್ನು ನಿರ್ಮಿಸಿ ಆ ಜಾಗಗಳಲ್ಲಿ ಸರಿಹೋಗದ ಕಾರಣ ಈ ಜಾಗದಲ್ಲಿ ನೆಲಸಿದ್ದೇವೆ. ಇಡೀ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿರುವುದು. ಜಮೀನು ಕಡಿಮೆ ಇದೆ. ಇತ್ತೀಚೆಗೆ ಅರಣ್ಯ ಇಲಾಖೆಯವರು ಗ್ರಾಮದಲ್ಲಿ ಬಂದು ನಿಮ್ಮ ಗ್ರಾಮ ಅರಣ್ಯ ಇಲಾಖೆಗೆ ಸೇರ್ಪಡೆಯಾಗುತ್ತದೆ ಎಂದು ನಕ್ಷೆಯನ್ನು ತೋರಿಸಿ ವದಂತಿ ಹಬ್ಬಿಸಿ ಹೋಗಿದ್ದಾರೆ. ನಿಖರವಾದ ಮಾಹಿತಿ ತಿಳಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬೋವಿ ಸಮುದಾಯದವರೇ ಗ್ರಾಮದಲ್ಲಿ ಇರುವುದರಿಂದ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗವೇ ಉಪವಾಸ ಹಮ್ಮಿಕೊಳ್ಳುತ್ತೇವೆ.
-ಶಿವಪ್ಪ, ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net