ಸ್ಟ್ರೋಕ್ ಜಾಗೃತಿಗಾಗಿ ಅಪೋಲೋ ವಾಕ್ & ರನ್

ವಿಶ್ವ ಸ್ಟ್ರೋಕ್ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜನೆ
Union Minister H.D. Kumaraswamy, MP Tejasvi Surya, MLA C.K. Ramamurthy, Dr. Chinmay Nagesh, and others participated in an event organized by Apollo Hospital, Jayanagar, on the occasion of World Stroke Day.
ವಿಶ್ವ ಸ್ಟ್ರೋಕ್ ದಿನಾಚರಣೆ ಹಿನ್ನೆಲೆಯಲ್ಲಿ ಜಯನಗರದ ಅಪೋಲೋ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ.ರಾಮಮೂರ್ತಿ, ಡಾ.ಚಿನ್ಮಯ್ ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಪಾರ್ಶ್ವವಾಯು (ಸ್ಟ್ರೋಕ್) ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ರೋಗಿಯ ಚೇತರಿಕೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸು ಉದ್ದೇಶದಿಂದ ಜಯನಗರದ ಅಪೋಲೋ ಆಸ್ಪತ್ರೆ ವತಿಯಿಂದ ವಿಶ್ವ ಸ್ಟ್ರೋಕ್ ದಿನಾಚರಣೆ ಅಂಗವಾಗಿ ಅಪೋಲೋ ವಾಕ್ ಆ್ಯಂಡ್ ರನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಯನಗರದ ಮಾಧವನ್ ಉದ್ಯಾನವನದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭಾಗವಹಿಸಿದ್ದರು.

‘ನಿಮ್ಮ ಮೆದುಳಿಗಾಗಿ ಓಡಿರಿ ಮತ್ತು ನಡೆಯಿರಿ’ ಎಂಬ ಧ್ಯೇಯದಡಿ 5 ಕಿ.ಮೀ. ನಡಿಗೆ ಹಾಗೂ 10 ಕಿ.ಮೀ. ಓಟ ಆಯೋಜಿಸಲಾಗಿತ್ತು. ಇದೇ ವೇಳೆ ಕಾರ್ಯಕ್ರಮದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ನರರೋಗ ತಜ್ಞ ಹಾಗೂ ನಿಮ್ಹಾನ್ಸ್ ಮಾಜಿ ಉಪಕುಲಪತಿ ಡಾ. ಪಿ. ಸತೀಶಚಂದ್ರ, ಹಿರಿಯ ನರರೋಗ ತಜ್ಞ ಡಾ. ಜಿ.ಆರ್.ಕೆ. ಶರ್ಮಾ, ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಚಿನ್ಮಯ್ ನಾಗೇಶ್ ಮತ್ತಿತರರು ಪಾಲ್ಗೊಂಡು ಮಾತನಾಡಿದರು.

Thousands of people participated in the ‘Apollo Walk & Run for Stroke Awareness’ event organized by Apollo Jayanagar.
ಅಪೋಲೋ ಜಯನಗರ ಆಯೋಜಿಸಿದ್ದ ‘ಸ್ಟ್ರೋಕ್ ಜಾಗೃತಿಗಾಗಿ ಅಪೋಲೋ ವಾಕ್ & ರನ್’ ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

ಪಾರ್ಶ್ವವಾಯು ಬಗ್ಗೆ ಜಾಗೃತಿ ಅಗತ್ಯ

ಮುಖ, ಕೈ ಅಥವಾ ಕಾಲಿನಲ್ಲಿ ಹಠಾತ್ ದೌರ್ಬಲ್ಯ, ಮಾತಿನಲ್ಲಿ ತೊಂದರೆ, ದೃಷ್ಟಿ ಸಮಸ್ಯೆ ಹಾಗೂ ಸಮತೋಲನ ಕಳೆದುಕೊಳ್ಳುವುದು ಪಾರ್ಶ್ವವಾಯುವಿನ ಪ್ರಮುಖ ಲಕ್ಷಣಗಳಾಗಿವೆ. ಇವು ಕಂಡುಬಂದ ತಕ್ಷಣ ಆಸ್ಪತ್ರೆಗೆ ತೆರಳಬೇಕು. ಕೆಲವೇ ನಿಮಿಷಗಳಲ್ಲಿ ಲಕ್ಷಣಗಳು ಮಾಯವಾದರೂ ನಿರ್ಲಕ್ಷಿಸಬಾರದು. ಇದು ಮುಂದಿನ ಪಾರ್ಶ್ವವಾಯುವಿನ ಮುನ್ಸೂಚನೆಯಾಗಿರಬಹುದು.

ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು ಹಾಗೂ ದೈಹಿಕ ಚಟುವಟಿಕೆಯ ಕೊರತೆ ಪಾರ್ಶ್ವವಾಯುವಿನ ಅಪಾಯಕಾರಿ ಅಂಶಗಳಾಗಿವೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ವ್ಯಾಯಾಮ ಹಾಗೂ ತಂಬಾಕು ಸೇವನೆ ತ್ಯಜಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈದ್ಯರು ಸಲಹೆ ನೀಡಿದರು.