ಕಸದ ತೊಟ್ಟಿಯಾದ ಎಪಿಎಂಸಿ ಆವರಣ

ಹುಣಸಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಂಗ್ರಹಗೊಂಡಿರುವ ಕಸದ ರಾಶಿ.
ಹುಣಸಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಂಗ್ರಹಗೊಂಡಿರುವ ಕಸದ ರಾಶಿ.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲೆಡೆ ರಾರಾಜಿಸುತ್ತಿರುವ ಮದ್ಯದ ಬಾಟಲ್-ಪ್ಲಾಸ್ಟಿಕ್
  • ಸ್ವಚ್ಛತೆ ನಿರ್ಲಕ್ಷಿಸಿದ ಅಧಿಕಾರಿಗಳು
  • ಶೀಘ್ರ ಕ್ರಮಕ್ಕೆ ರೈತರ ಆಗ್ರಹ
ಹುಣಸಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಎಲ್ಲೆಂದರಲ್ಲಿ ಕಸದ ಕಾಶಿ ತುಂಬಿದ್ದು, ಇಡೀ ಆವರಣ ಗಬ್ಬು ನಾರುವಂತಾಗಿದೆ. ಒಟ್ಟಿನಲ್ಲಿ ಕಸದ ತೊಟ್ಟಿಯಂತೆ ಭಾಸವಾಗುತ್ತಿದೆ.
ಆವರಣದ ಬಹುತೇಕ ಕಡೆಗಳಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳು ಹಾಗೂ ಅನಗತ್ಯ ಗಿಡ-ಗಂಟಿ ಬೆಳೆದು ಅವ್ಯವಸ್ಥೆಯ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಚರಂಡಿಯಲ್ಲಂತೂ ಕಸ ತುಂಬಿಕೊಂಡಿದ್ದರಿಂದ ಗಬ್ಬು ವಾಸನೆ ಹರಸುತ್ತಿದೆ.
ಹಲವು ದಿನಗಳಿಂದ ಕಸ ತೆರವುಗೊಳಿಸದಿರುವುದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ. ಪ್ರತಿನಿತ್ಯ ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆದರೆ ಆವರಣದ ಹಲವು ಭಾಗಗಳಲ್ಲಿ ಕಸದ ರಾಶಿ ಕಂಡು ಬರುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಪ್ಲಾಸ್ಟಿಕ್ ಚೀಲ, ಮದ್ಯದ ಬಾಟಲ್, ಕಾಗದ, ಆಹಾರ ತ್ಯಾಜ್ಯ ಸೇರಿ ವಿವಿಧ ರೀತಿಯ ಕಸ ಬಿದ್ದಿದ್ದು, ಕೆಲವೆಡೆ ಕಸದೊಂದಿಗೆ ಒಣಗಿದ ಗಿಡ-ಕಡ್ಡಿಗಳೂ ಸೇರಿಕೊಂಡಿವೆ. ಇದರಿಂದ ಆವರಣದಲ್ಲಿ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದೆ. ಒಟ್ಟಾರೆ ಎಪಿಎಂಸಿ ಪ್ರದೇಶದ ಸಂಪೂರ್ಣ ಕಸದ ತೊಟ್ಟಿಯಾಗಿದೆ.
ಇನ್ನೂ ಮಳೆಗಾಲದಲ್ಲಿ ಕಸದೊಂದಿಗೆ ನೀರು ಸೇರಿ ಕೊಳೆತು ದುರ್ವಾಸನೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಸೊಳ್ಳೆ, ನೊಣ ಸೇರಿ ವಿವಿಧ ಕೀಟಗಳ ಉತ್ಪತ್ತಿಗೆ ಇದು ಕಾರಣವಾಗಬಹುದು. ಇದರಿಂದ ರೈತರು ಹಾಗೂ ವ್ಯಾಪಾರಸ್ಥರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಮನೆ ಮಾಡಿದೆ.
ಪ್ರತಿನಿತ್ಯ ಸ್ವಚ್ಛತಾ ಕಾರ್ಯ ನಡೆಯುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಕಸವನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿ, ನಿಯಮಿತವಾಗಿ ತೆರವುಗೊಳಿಸುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಕಸ ಹಾಕಲು ಸೂಕ್ತ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಕಸದ ತೊಟ್ಟಿ ಅಳವಡಿಸುವುದು ಬಹಳ ಜರೂರಿ ಇದೆ.
ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸುವುದರ ಜತೆಗೆ, ನಿಯಮ ಉಲ್ಲಂöಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಎಪಿಎಂಸಿ ಆವರಣದ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ನಿತ್ಯವೂ ನಿರಂತರವಾಗಿ ನಡೆಯುವ ವ್ಯವಸ್ಥೆಯಾಗಬೇಕು ಎಂದು ರೈತರ ಒತ್ತಾಯವಾಗಿದೆ.
ಇದಕ್ಕೆ ಸಂಬAಽಸಿದ ಸ್ಥಳೀಯ ಆಡಳಿತದ ಅಽಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಕಸದ ಸಮಸ್ಯೆ ಇರುವ ಪ್ರದೇಶ ಪರಿಶೀಲಿಸಿ ಕಸದ ರಾಶಿ ತೆರವುಗೊಳಿಸಬೇಕು. ಅಲ್ಲದೆ ಗಿಡ-ಗಂಟಿಗಳನ್ನು ಕಡಿದು, ಚರಂಡಿಗಳನ್ನು ಸ್ವಚ್ಛಗೊಳಿಸಿ, ಆವರಣವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"

ಪಟ್ಟಣವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ. ಕಸ ಎಲ್ಲೆಂದರಲ್ಲಿ ಹಾಕುವುದು ತಪ್ಪು. ಕಸದಿಂದ ಅನೇಕ ರೋಗ ರುಜುನೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಎಪಿಎಂಸಿ ಸ್ವಚ್ಛತೆಯ ಕುರಿತು ಅಽಕಾರಿಗಳೊಂದಿಗೆ ತಕ್ಷಣ ಮಾತನಾಡಿ ಸ್ವಚ್ಛ ಮಾಡುವಂತೆ ತಿಳಿಸುವೆ.| ಚಂದ್ರಶೇಖರ ದಂಡಿನ್ಎಪಿಎಂಸಿ ಮಾಜಿ ಅಧ್ಯಕ್ಷ

"

ಎಪಿಎಂಸಿ ಆವರಣದಲ್ಲಿ ಸ್ವಚ್ಛತೆ ಎಂಬುದು ಹದಗೆಟ್ಟಿದೆ. ಎಲ್ಲೆಂದರಲ್ಲಿ ಕಸದ ರಾಶಿ ತುಂಬಿಕೊಂಡರು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿನಿತ್ಯ ರೈತರು ಹಾಗೂ ಸಾರ್ವಜನಿಕರು ಓಡಾಡುವ ಪ್ರಮುಖ ಸ್ಥಳದಲ್ಲೇ ಇಂತಹ ಅವ್ಯವಸ್ಥೆ ಇರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.| ಆನಂದ ಬಾರಿಗಿಡದತಾಲೂಕು ಬಿಜೆಪಿ ಕೋಶಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net