ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಅನುಪಮಾ ಪ್ರಶಸ್ತಿಗೆ ಲೇಖಕಿಯರಾದ ಎ.ಪಿ. ಮಾಲತಿ ಹಾಗೂ ಎಂ.ಎಸ್. ವೇದಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ 10 ಸಾವಿರ ನಗದು ಒಳಗೊಂಡಿದೆ. ಹೇಮಲತಾ ಮಹಿಷಿ, ಎಚ್.ಆರ್. ಸುಜಾತ ಹಾಗೂ ಸುಮಾ ಸತೀಶ್ ಅವರನ್ನು ಒಳಗೊಂಡ ಸಮಿತಿ 2025 ಮತ್ತು 2026ನೇ ಸಾಲಿಗೆ ಈ ಆಯ್ಕೆ ಮಾಡಿದೆ.
ವೃತ್ತಿಯಲ್ಲಿ ವೈದ್ಯರಾಗಿದ್ದ ಅನುಪಮಾ ನಿರಂಜನ ಅವರು, ಪ್ರವೃತ್ತಿಯಲ್ಲಿ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆಸೆಯಂತೆ ಮಕ್ಕಳು ಸಂಘದಲ್ಲಿ ದತ್ತಿ ಸ್ಥಾಪಿಸಿದ್ದು, ಜೀವಮಾನ ಸಾಧನೆಗೆ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿದೆ ಎಂದು ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ತಿಳಿಸಿದ್ದಾರೆ.