ಪೊಲೀಸರ ವಿಶ್ವಾಸಾರ್ಹತೆಗೆ ಮತ್ತೊಂದು ಕಳಂಕ

CID INSPECTOR
CID INSPECTOR
Published on

ಪ್ರಮುಖ ಮುಖ್ಯಾಂಶಗಳು

  • ಸಿಐಡಿ ಇನ್‌ಸ್ಟೆಕ್ಟರ್‌ನಿಂದ 20 ಲಕ್ಷ ದರೋಡೆ
  • ವಿಶೇಷ ತಂಡ ರಚನೆ ಮೂವರ ಬಂಧನ
ಬೆಂಗಳೂರು: ಬೆಂಗಳೂರಿಗೆ ಬಂದಿದ್ದ ಕೇರಳ ಮೂಲದ ವ್ಯಾಪಾರಿಗಳನ್ನು ಸಿಐಡಿ ಇನ್‌ಸ್ಪೆಕ್ಟರ್ ಖಾಸಗಿ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಬೆದರಿಸಿ 20 ಲಕ್ಷ ರೂ. ದರೋಡೆ ಮಾಡಿದ್ದಾರೆ.
ಮಡಿವಾಳ ಠಾಣೆ ಪೊಲೀಸರು ಸಿಐಡಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಸಾಮಾನ್ಯವಾಗಿ ಪೊಲೀಸರು ಅಥವಾ ತನಿಖಾ ಸಂಸ್ಥೆಗಳ ಅಧಿಕಾರಿಗಳು ದಾಳಿ ನಡೆಸಿದರೆ ಸಾರ್ವಜನಿಕರು ಪ್ರಶ್ನಿಸುವುದಿಲ್ಲ. ಇದೇ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಯೊಬ್ಬರು, ನಿನ್ನೆ ರಾತ್ರಿ ಮಡಿವಾಳದ ‘ವೆಸ್ಟರ್ನ್ ಕೀಯ್ಸ’ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ವ್ಯಾಪಾರಿಗಳಿಗೆ ಸಿಐಡಿ ಪೊಲೀಸರ ಗುರುತಿನ ಚೀಟಿ ತೋರಿಸಿ, ಅಕ್ರಮ ಟ್ರೇಡಿಂಗ್ ನಡೆಸುತ್ತಿದ್ದೀರಿ ಎಂದು ಬೆದರಿಸಿ ಲಕ್ಷಾಂತರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರ ಗುಂಪಿನ ವಿರುದ್ಧ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೂವರ ಬಂಧನ:

ಸಿಐಡಿ ವಿಭಾಗದ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಎಂಬುವರು ತನ್ನ ಸಹಚರರಾದ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ಇಪ್ಪತ್ತು ಲಕ್ಷ ರೂ.ದರೋಡೆ ಮಾಡಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಮಹೇಶ್ ಕನಕಗಿರಿ ಕೃತ್ಯಕ್ಕೆ ಉಪಯೋಗಿಸಿದ್ದ ಬೊಲೆರೊ ಪೊಲೀಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಗ್ಯಾಂಗಿನ ಕುಪೇಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ದರೋಡೆ ಮಾಡಿದ್ದ 20 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

ಸರ್ಕಾರಿ ವಾಹನ ಬಳಕೆ ಆರೋಪ:

ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿಕೊಂಡು ದರೋಡೆಗೆ ಸರ್ಕಾರಿ ವಾಹನ ಬಳಕೆ ಮಾಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಆಗ್ನೇಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ಪ್ರಮುಖ ಆರೋಪಿ ಎನ್ನಲಾಗಿರುವ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿಯನ್ನು ಬಂಧಿಸಿದ್ದಾರೆ.

ದರೋಡೆ ನಡೆದದ್ದು ಹೇಗೆ?

ಕೇರಳ ವ್ಯಾಪಾರಿಗಳ ತಂಡ ನಿನ್ನೆ ಮಧ್ಯಾಹ್ನ ಆಗಮಿಸಿ ಮಡಿವಾಳದ ಖಾಸಗಿ ಹೋಟೆನಲ್ಲಿ ಉಳಿದುಕೊಂಡಿದ್ದರು. ಈ ಮಾಹಿತಿ ಅರಿತ ಸಿಐಡಿ ಇನ್‌ಸ್ಪೆಕ್ಟರ್ ಹಾಗೂ ನಾಲ್ಕು ಮಂದಿ ದರೋಡೆಕೋರರು ಹೋಟೆಲ್ ಬಳಿಗೆ ಬಂದಿದ್ದಾರೆ. ಇನ್‌ಸ್ಪೆಕ್ಟರ ಜೀಪಿನಲ್ಲೆ ಕುಳಿತಿದ್ದಾಗ ಉಳಿದ ನಾಲ್ವರು ದರೋಡೆಕೋರರು ಇನ್‌ಸ್ಪೆಕ್ಟರ್ ಐಡಿ ಕಾರ್ಡ್‌ನೊಂದಿಗೆ ವ್ಯಾಪಾರಿಗಳು ತಂಗಿದ್ದ ಕೊಠಡಿಗೆ ಹೋಗಿ ನೀವು ಕಾನೂನುಬಾಹಿರವಾಗಿ ಟ್ರೆಡಿಂಗ್ ನಡೆಸುತ್ತಿದ್ದೀರಾ ಎಂದು ಬೆದರಿಸಿ ಅವರ ಬಳಿ ಇದ್ದ 20 ಲಕ್ಷ ರೂ.ಗಳನ್ನು ಪಡೆದುಕೊಂಡು ಹೊರ ಬಂದಿದ್ದಾರೆ. ನಂತರ ಸಿಐಡಿ ಪೊಲೀಸರ ತಂಡ ಜೀಪಿನಲ್ಲಿ ಪರಾರಿಯಾಗಿದೆ. ಆದರೆ, ದರೋಡೆಕೋರರ ವರ್ತನೆಯಿಂದ ಅನುಮಾನಗೊಂಡ ಕೇರಳ ವ್ಯಾಪಾರಿಗಳು ಸಮೀಪದ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
  • ತನಿಖೆಯಲ್ಲಿ ಪ್ರಮುಖ ಪ್ರಶ್ನೆಗಳು20 ಲಕ್ಷ ರೂ. ನಗದು ವ್ಯಾಪಾರಿಗಳ ಬಳಿ ಏಕೆ ಇತ್ತು?
  • ವ್ಯಾಪಾರಿಗಳ ಬಗ್ಗೆ ಮಾಹಿತಿ ಆರೋಪಿಗಳಿಗೆ ದೊರೆತಿದ್ದು ಹೇಗೆ?
  • ಹೋಟೆಲ್ ಸಿಬ್ಬಂದಿ ಅಥವಾ ಇತರ ಮಧ್ಯವರ್ತಿಗಳ ಪಾತ್ರ ಇದೆಯೇ?
  • ಇದೇ ತಂಡ ಈ ಹಿಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿತ್ತೇ?
  • ಸರ್ಕಾರಿ ವಾಹನ ಮತ್ತು ಗುರುತಿನ ಚೀಟಿಯನ್ನು ಹೇಗೆ ಬಳಸಲಾಯಿತು?
  • ಇದು ಸಂಘಟಿತ ಪೊಲೀಸ್-ಕ್ರಿಮಿನಲ್ ನೆಟ್‌ವರ್ಕ್ ಭಾಗವೇ? ಎಂಬ ವಿವಿಧ ಆಯಾಮದಲ್ಲಿ ತನಿಖೆ ನಡೆಯುತ್ತಿದೆ
"

ನಕಲಿ ಐಪಿಎಸ್, ಸಿಬಿಐ, ಇ.ಡಿ. ಅಧಿಕಾರಿಗಳು ಮತ್ತು ನಕಲಿ ಪೊಲೀಸ್ ತಂಡಗಳನ್ನು ರಚನೆ ಮಾಡಿಕೊಂಡು ಜನಸಾಮಾನ್ಯರುನ್ನು ಬೆದರಿಸಿ ಹಣ ದೋಚಿರುವ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಈ ಪ್ರಕರಣದಲ್ಲಿ ನಿಜವಾದ ಪೊಲೀಸ್ ಅಧಿಕಾರಿಯೇ ಗುಂಪು ಕಟ್ಟಿಕೊಂಡು ಸಿನಿಮಿಯ ರೀತಿಯಲ್ಲಿ ದೋರಡೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವುದು ಇಲಾಖೆಯಲ್ಲಿ ಚರ್ಚೆಯಾಗುತ್ತಿದೆ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net