ಚಿರಪುರಾತನ ನಿತ್ಯನೂತನ ವೈಜ್ಞಾನಿಕ ಭಾಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಇಂದು ಶ್ರಾವಣಪೂರ್ಣಿಮೆ. ಈ ದಿನವನ್ನು ಸಂಸ್ಕೃತ ದಿನವೆಂದು ಕೇಂದ್ರ ಸರ್ಕಾರ ಘೊಷಣೆ ಮಾಡಿ, ಸಾಧ್ಯವಾದಲ್ಲೆಲ್ಲ ಅದನ್ನು ಆಚರಿಸುವಂತೆ ಸೂಚನೆಯನ್ನೂ ನೀಡಿ ಕೆಲವು ದಶಕಗಳೂ ಕಳೆದು ಹೋಗಿವೆ (1969ರಿಂದ). ಇತ್ತೀಚಿನ ಕೆಲವು ವರ್ಷಗಳಿಂದ ಅದು ಭಾರತದಲ್ಲಿ ಮಾತ್ರವಲ್ಲದೆ ಅನೇಕ ವಿದೇಶಗಳೂ ಸೇರಿದಂತೆ ಬಹಳಷ್ಟು ಕಡೆ ವಿಶ್ವ ಸಂಸ್ಕೃತ ದಿನವಾಗಿ ಆಚರಣೆಯಾಗುತ್ತಿದೆ.

ಹಾಗೆ ನೋಡಿದರೆ ಯಾವುದೋ ಒಂದು ವಿಷಯಕ್ಕೋ, ಒಂದು ಮೃಗಕ್ಕೋ, ಪಕ್ಷಿಗೋ, ವ್ಯಕ್ತಿಗೋ ಒಂದು ದಿನವನ್ನು ತಳುಕು ಹಾಕಿ ಅದರ ಹೆಸರಿನಲ್ಲಿ ಆ ದಿನವನ್ನು ಆಚರಿಸುವ ಸಂಪ್ರದಾಯ ಚಾಲ್ತಿಗೆ ಬಂದು ಅನೇಕ ವರ್ಷಗಳೇ ಆದವು. ಹಾಗಾಗಿ ಇಂದು ವರ್ಷದ 365 ದಿನಗಳೂ ಒಂದಿಲ್ಲೊಂದು ವಿಶೇಷ ದಿನವೇ ಆಗಿಹೋಗಿವೆ. ಹೀಗಿರುವಾಗ ಸಂಸ್ಕೃತ ದಿನದ ಹೆಚ್ಚುಗಾರಿಕೆ ಏನು ಎಂದು ಚಿಂತಿಸಹೊರಟರೆ ಹತ್ತಾರು ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ.

ಭಾಷೆಯ ವೈಜ್ಞಾನಿಕತೆ: ಮನುಷ್ಯನ ಬಾಯಲ್ಲಿ ಹುಟ್ಟಿನಿಂದಲೇ ಬಂದಿರುವ ಎಲ್ಲ ವಣೋತ್ಪತ್ತಿ ಸ್ಥಾನಗಳನ್ನೂ ಬಳಸಿಕೊಂಡು ಮಾತನಾಡಲ್ಪಡುವ ಜಗತ್ತಿನ ಅತ್ಯಂತ ವೈಜ್ಞಾನಿಕವಾದ ಭಾಷೆ ಸಂಸ್ಕೃತ ಎಂದು ಭಾಷಾವಿಜ್ಞಾನಿಗಳೇ ಪುರಾವೆ ಒದಗಿಸಿಕೊಟ್ಟಿದ್ದಾರೆ. ಅದರ ಫಲವಾಗಿ ಸಂಸ್ಕೃತವನ್ನು ಚೆನ್ನಾಗಿ ಉಚ್ಚರಿಸಬಲ್ಲಾತ ಜಗತ್ತಿನ ಯಾವುದೇ ಭಾಷೆಯನ್ನಾದರೂ ಸ್ವಲ್ಪವೇ ಪ್ರಯತ್ನದಿಂದ ಉಚ್ಚರಿಸಿಬಲ್ಲನಂತೆ. ಇನ್ನು ಸಂಸ್ಕೃತದ ಸ್ಪಷ್ಟವಾದ ಮತ್ತು ಶುದ್ಧವಾದ ಉಚ್ಚಾರದಿಂದ ಹೊರಹೊಮ್ಮುವ ತರಂಗಗಳು ಉಚ್ಚರಿಸುವವನಿಗೂ ಕೇಳುಗನಿಗೂ ಹಲವು ವಿಧದ ಪ್ರಯೋಜನಗಳನ್ನು ಉಂಟುಮಾಡುತ್ತವೆ ಎಂಬುದಕ್ಕೂ ಅನೇಕ ಉದಾಹರಣೆಗಳು ಸಿಗುತ್ತವೆ.

ಹಾಗಿದ್ದರೆ ಸಂಸ್ಕೃತ ಉಚ್ಚಾರಣೆಯ ರೂಪಕ್ಕೆ ಬಂದರೆ ಅದರಿಂದ ಪ್ರಯೋಜನವಿದೆಯೆಂದು ಹೇಳಿದ ಹಾಗಾಯ್ತು. ಆದರೆ ಸಂಸ್ಕೃತದ ಉಚ್ಚಾರಣೆ ಏನಿದ್ದರೂ ಶ್ಲೋಕಗಳ ರೂಪದಲ್ಲಿ, ಮಂತ್ರಗಳ ರೂಪದಲ್ಲಿ, ಸ್ತೋತ್ರಗಳ ರೂಪದಲ್ಲಿ ಮಾತ್ರ ತೋರಿಬರುವುದಲ್ಲವೇ? ಎಂದು ಆಕ್ಷೇಪಿಸಬಹುದು. ಕೆಲವು ದಶಕಗಳ ಹಿಂದೆ ಆ ಬಗೆಯ ಪರಿಸ್ಥಿತಿ ಇದ್ದದ್ದು ನಿಜವೇ ಆಗಿರಬಹುದೇನೋ. ಆದರೆ ಅದೀಗ ಬದಲಾಗಿದೆ. ಕನ್ನಡವೋ, ಇಂಗ್ಲೀಷೋ, ಮರಾಠಿಯೋ ಅಥವಾ ಇತರ ಯಾವುದೋ ಭಾಷೆಯಂತೆಯೇ ಅದು ಈಗ ಜನರ ಆಡುನುಡಿಯಾಗುತ್ತಿದೆ. ದಿನಬಳಕೆಯ ಭಾಷೆಯಾಗಿ ಅದನ್ನು ಬಳಸುವ ಲಕ್ಷಾಂತರ ಮಂದಿ ಇಂದು ದೇಶದಾದ್ಯಂತ ಕಾಣಸಿಗುತ್ತಾರೆ. ಅಷ್ಟೇ ಏಕೆ, ಹುಟ್ಟಿನಿಂದಲೇ ಜಗತ್ತಿನ ಪರಿಚಯವನ್ನು ಸಂಸ್ಕೃತ ಭಾಷೆಯ ಮೂಲಕವೇ ಪಡೆದುಕೊಂಡಿರುವ ಸಂಸ್ಕೃತ ಮಾತೃಭಾಷಿಗಳಾದ ಮಕ್ಕಳ ಪರಂಪರೆಯೊಂದು ಸೃಷ್ಟಿಯಾಗಿದ್ದು ಅದೀಗ ಮುಂದಿನ ಪೀಳಿಗೆಯತ್ತವೂ ಮುಂದುವರೆಯುತ್ತಿದೆ.

ಉಳಿದ ಭಾಷೆಗಳಿಗೆ ಸಮದಂಡಿ: ಸಂಸ್ಕೃತದ ಪುರಾತನತ್ವವನ್ನು ಹುಡುಕುತ್ತ ಹೋದರೆ ನಾವು ವೇದಕಾಲದ ಹಿಂದಿನವರೆಗೂ ಲೆಕ್ಕ ಹಾಕುತ್ತ ಹೋಗುವುದು ಅನಿವಾರ್ಯವಾಗುತ್ತದೆ. ವೇದಕಾಲದ ಬಗೆಗೆ ವಿವಾದಗಳೇನೇ ಇದ್ದರೂ ಅದೆಷ್ಟೋ ಸಹಸ್ರ ವರ್ಷಗಳ ಹಿಂದೆ ಎಂಬುದಂತೂ ನಿರ್ವಿವಾದ. ಅಷ್ಟು ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭಾಷೆ ಕಾಲದ ಅನಂತಪ್ರವಾಹದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ಮಾತ್ರವಲ್ಲದೆ ಇಂದಿನ ಅಗತ್ಯಗಳಿಗೆ ತಕ್ಕಂತೆ ತನ್ನನ್ನು ಸಜ್ಜುಗೊಳಿಸಿಕೊಂಡು ಉಳಿದ ಭಾಷೆಗಳಿಗೆ ಸಮದಂಡಿಯಾಗಿ ನಿಂತಿರುವುದು ವಿಸ್ಮಯದ ಸಂಗತಿ.

ಬಾಧಕವಲ್ಲ, ಪೂರಕ: ಭಾರತದ ಯಾವುದೇ ಭಾಷೆಯನ್ನು ತೆಗದುಕೊಂಡರೂ ಅದು ಸಂಸ್ಕೃತದಿಂದ ಪ್ರಭಾವಿತವಾಗಿರುವುದನ್ನು ಕಾಣಬಹುದು. ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದಾದರೂ ಸಂಸ್ಕೃತದ ಶಬ್ದಸಂಪತ್ತಿಯನ್ನು ತನ್ನದಾಗಿ ಮಾಡಿಕೊಳ್ಳದ ಭಾರತೀಯ ಭಾಷೆ ಯಾವುದೂ ಇಲ್ಲ. ಅಂದರೆ ಭಾರತದ ಪ್ರತಿಯೊಂದು ಭಾಷೆಯೂ ಸಂಸ್ಕೃತದಿಂದ ಪುಷ್ಟವಾಗಿರುವುದನ್ನು ಗುರುತಿಸಬಹುದು. ನಿಮ್ಮ ಭಾಷೆ ಯಾವುದೇ ಆಗಿರಲಿ, ಸಂಸ್ಕೃತ ಅದನ್ನು ಇನ್ನಷ್ಟು ಸಮೃದ್ಧಗೊಳಿಸುತ್ತದೆ, ಸತ್ತ್ವಪೂರ್ಣವನ್ನಾಗಿಸುತ್ತದೆ.

ಶಬ್ದನಿರ್ವಣ ಸಾಮರ್ಥ್ಯ: ಧಾತು ಮತ್ತು ಪ್ರತ್ಯಯಗಳನ್ನು ಪಾಣಿನಿಯ ನಿಯಮಗಳಿಗೆ ಅನುಸಾರವಾಗಿ ಜೋಡಿಸುವುದರ ಮೂಲಕ ಹೊಸಶಬ್ದಗಳನ್ನು ನಿರ್ವಿುಸುವ ಸೌಕರ್ಯ ಸಂಸ್ಕೃತದಲ್ಲಿದೆ. ಆಧುನಿಕ ಜಗತ್ತಿನಲ್ಲಿ ಪ್ರತಿದಿನವೆಂಬಂತೆ ಆವಿಷ್ಕಾರಗೊಳ್ಳುತ್ತಿರುವ ಹೊಸ ಹೊಸ ವಸ್ತುಗಳಿಗೆ ನಮ್ಮ ಭಾಷೆಯಲ್ಲಿ ಯಾವುದಾದರೊಂದು ಹೆಸರಿಡಬೇಕಲ್ಲವೆ! ಈ ಸಂದರ್ಭದಲ್ಲಿ ನಮಗೆ ಅತಿ ಹೆಚ್ಚು ಉಪಕಾರ ಮಾಡುವುದು ಸಂಸ್ಕೃತವೇ ಆಗಿದೆ. ಈಗ ಭಾರತದ ಪ್ರತಿಯೊಂದು ಭಾಷೆಯಲ್ಲೂ ಬಳಕೆಯಲ್ಲಿರುವ ಆಕಾಶವಾಣೀ, ದೂರದರ್ಶನ, ದೂರವಾಣೀ, ಸಂಗಣಕ, ಉಪಗ್ರಹ, ವಿಧಾನಸಭಾ, ವಿಧಾನಪರಿಷತ್, ನಗರಪಾಲಿಕಾ... ಹೀಗೆ ಲೆಕ್ಕಹಾಕುತ್ತಾ ಹೋದರೆ ಅಸಂಖ್ಯ ಶಬ್ದಗಳು ಸಂಸ್ಕೃತದಿಂದಲೇ ನಿರ್ವಿುತವಾದವು. ಪ್ರತಿಯೊಂದು ಭಾಷೆಗೂ ಸಂಸ್ಕೃತದ ಬೆಂಬಲ ಎಷ್ಟು ಸಿಕ್ಕಿದೆ ಎಂದು ಇದರಿಂದ ಅರ್ಥವಾಗುತ್ತದೆ.

ಕಬ್ಬಿಣದ ಕಡಲೆಯಲ್ಲ, ಸರಳವೇ: ‘ಸಂಸ್ಕೃತವು ಸಾಮಾನ್ಯರ ಎಟುಕಿಗೆ ನಿಲುಕುವಂಥದ್ದಲ್ಲ, ಕಬ್ಬಿಣದ ಕಡಲೆ’ ಎನ್ನುವವರಿಗೇನೂ ಕಡಿಮೆಯಿಲ್ಲ. ನೂರಾರು ವರ್ಷಗಳಿಂದ ಕುರುಡಾಗಿ ಅನುಸರಿಸಿಕೊಂಡು ಬಂದ ಶಿಕ್ಷಣ ಪದ್ಧತಿಯಿಂದಾಗಿ ಹಾಗೊಂದು ತಪ್ಪು ಕಲ್ಪನೆ ಬೆಳೆದಿದೆ. ಆದರೆ ಈಗ ಸಂಸ್ಕೃತವೂ ಬೇರೆ ಭಾಷೆಗಳಷ್ಟೇ ಸುಲಭವಾಗಿ ಕಲಿಯಬಹುದಾದ ಭಾಷೆ ಎಂಬುದು ಸಿದ್ಧವಾಗಿದೆ. ಮಾತ್ರವಲ್ಲದೆ ಅದು ಯಾವುದೋ ವರ್ಗವೊಂದರ ಭಾಷೆ, ದಿನಬಳಕೆ ಸಾಧ್ಯವೇ ಇಲ್ಲದ ಭಾಷೆ - ಮೊದಲಾದ ಮಿಥ್ಯಾರೋಪಗಳೆಲ್ಲ ಕಳೆದುಹೋಗಿವೆ. ಸಂಸ್ಕೃತ ಕ್ಷೇತ್ರದಲ್ಲಾಗಿರುವ ಈ ಮಹತ್ತ್ವದ ಪರಿವರ್ತನೆಗೆ ಮುಖ್ಯ ಕಾರಣ ‘ಸಂಸ್ಕೃತಭಾರತಿ’. ಅದೇ ಕಾರಣದಿಂದಾಗಿ ಇಂದು ಸಮಾಜದಲ್ಲಿ ಸಂಸ್ಕೃತದ ಬಗೆಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ಒಲವು ತೋರಿಬರುತ್ತಿದೆ. ವಿಶೇಷವಾಗಿ ಯುವಜನತೆ ಸಂಸ್ಕೃತವನ್ನು ಕಲಿಯುವತ್ತ ಉತ್ಸಾಹ ತೋರಿಸುತ್ತಿದೆ. ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳ ಔಪಚಾರಿಕ ಶಿಕ್ಷಣದ ಹೊರತಾಗಿಯೂ ಸಂಭಾಷಣ ಶಿಬಿರ, ಅಂಚೆ ಮೂಲಕ ಸಂಸ್ಕೃತ ಶಿಕ್ಷಣ, ಭಗವದ್ಗೀತಾ ಶಿಕ್ಷಣ ಕೇಂದ್ರ ಮೊದಲಾದ ಅನೌಪಚಾರಿಕ ವ್ಯವಸ್ಥೆಗಳ ಮೂಲಕ ಸಂಸ್ಕೃತ ಕಲಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಸ್ಕೃತ ಕಲಿಯುವುದು, ಮಾತನಾಡುವುದು ಒಂದು ಆಧುನಿಕ ಟ್ರೆಂಡ್ ಆಗುತ್ತಿದೆ. ಸಂಸ್ಕೃತದಲ್ಲಿ ಕಿರುಚಲನಚಿತ್ರಗಳು ಮತ್ತು ರೀಲ್ಸ್ ಸ್ಪರ್ಧೆಯೂ ಕೆಲವು ವರ್ಷಗಳಿಂದ ದೇಶಮಟ್ಟದಲ್ಲಿ ನಡೆಯುತ್ತಿದ್ದು ನೂರಾರು ಯುವತಿ-ಯುವಕರು ಅದರಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಂತೂ ಕೃತಕ ಬುದ್ಧಿಮತ್ತೆಯನ್ನು (ಎಐ) ಪರಿಣಾಮಕಾರಿಯಾಗಿ ಬಳಸಿಕೊಂಡು ಸಮೂಹ ಮಾಧ್ಯಮಗಳಲ್ಲಿ ಸಂಸ್ಕೃತದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.

ಜ್ಞಾನಭಂಡಾರದತ್ತ ಧ್ಯಾನಾಕರ್ಷಣೆ: ಜನರ ನಡುವೆ ಸಂವಹನಕ್ಕೆ ಸಾಧನವಾಗುವ ಒಂದು ಶಾಬ್ದಿಕ ಮಾಧ್ಯಮ ಎಂಬ ಭಾಷೆಯ ಸಾಮಾನ್ಯ ವ್ಯಾಖ್ಯೆಯನ್ನು ಮೀರಿದ ಮತ್ತಷ್ಟು ಮಹತ್ತ್ವ ಸಂಸ್ಕೃತಕ್ಕಿದೆ. ಅದು ಭಿನ್ನ ಭಿನ್ನ ರಾಜ್ಯಗಳಲ್ಲಿ ನೆಲೆಸಿರುವ, ವಿವಿಧ ಭಾಷೆಗಳನ್ನಾಡುವ ಎಲ್ಲ ಭಾರತೀಯರನ್ನೂ ಒಂದುಗೂಡಿಸಬಲ್ಲ, ಏಕಸೂತ್ರದಲ್ಲಿ ಬೆಸೆಯಬಲ್ಲ ಸಮರ್ಥ ಸಾಧನವೂ ಹೌದು. ಲಿಂಗ, ಭಾಷೆ, ಜಾತಿ, ಮತ, ಸಂಪ್ರದಾಯ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸ್ಥಾನಮಾನ ಇವೇ ಮೊದಲಾದ ಭೇದಭಾವಕ್ಕೆ ಕಾರಣವಾಗುವ ಅನೇಕ ಅಂಶಗಳನ್ನು ದೂರ ಮಾಡಿ ಎಲ್ಲರನ್ನೂ ಒಂದುಗೂಡಿಸಬಲ್ಲ ಸಾಮರ್ಥ್ಯ ಈ ಭಾಷೆಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಂಸ್ಕೃತ ‘ಜ್ಞಾನದ ವಾಹಕ’ ಎಂಬುದು ದೀರ್ಘಕಾಲದಿಂದ ತಿಳಿದಿರುವ ಸಂಗತಿ. ಸಾವಿರಾರು ವರ್ಷಗಳಿಂದ ಭಾರತದ ಋಷಿಮುನಿಗಳು, ಮನೀಷಿಗಳು ತಮ್ಮ ಜ್ಞಾನವನ್ನೆಲ್ಲ ವ್ಯಕ್ತಪಡಿಸಿದ್ದು ಈ ಭಾಷೆಯಲ್ಲಿಯೇ. ಭೂಗೋಳದಿಂದ ಖಗೋಳದವರೆಗೆ, ಅಣುವಿನಿಂದ ಬ್ರಹ್ಮಾಂಡದವರೆಗೆ ಎಲ್ಲ ವಿಷಯಗಳ ಬಗೆಗೂ ಅವರ ಚಿಂತನೆ ಮತ್ತು ಅದರ ಅಭಿವ್ಯಕ್ತಿ ನಡೆದಿರುವುದು ಪ್ರಧಾನವಾಗಿ ಸಂಸ್ಕೃತದಲ್ಲಿಯೇ. ಸಂಸ್ಕೃತದ ಅರಿವಿಲ್ಲದ ಕಾರಣ ಅವುಗಳಲ್ಲಿ ಎಷ್ಟೋ ಅಂಶಗಳು ಇಂದಿಗೂ ನಮಗೆ ಅಪರಿಚಿತವೇ ಆಗಿವೆ.

ಬದಲಾಗುತ್ತಿರುವ ಸನ್ನಿವೇಶದಲ್ಲಿ ಇಂದು ದೇಶದ ಯುವಜನತೆ ಮರೆತಿರಬಹುದಾದ ಭಾರತೀಯ ಜ್ಞಾನಪರಂಪರೆಯ (ಇಂಡಿಯನ್ ನಾಲೆಡ್ಜ್ ಸಿಸ್ಟಂ) ಬಗೆಗೆ ಆಸಕ್ತಿ ತೋರಿಸುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಅದಕ್ಕೆ ಅನುಕೂಲವಾಗಿದ್ದು ಅನೇಕ ಉಚ್ಚ ಶಿಕ್ಷಣ ಸಂಸ್ಥೆಗಳಲ್ಲೂ ಭಾರತೀಯ ಜ್ಞಾನಪರಂಪರೆಯನ್ನು ಬೋಧಿಸುವ ವ್ಯವಸ್ಥೆಯನ್ನು ಆರಂಭಿಸುವುದಕ್ಕೆ ಮುಂದಾಗಿವೆ. ಭಾರತೀಯ ಜ್ಞಾನ ಪರಂಪರೆಯ ಕೀಲಿಕೈ ಸಂಸ್ಕೃತವೇ ಆಗಿರುವುದರಿಂದ ಸಹಜವಾಗಿ ಸಂಸ್ಕೃತದತ್ತ ಅಂಥವರೆಲ್ಲರ ಚಿತ್ತ ಹೊರಳುತ್ತಿದೆ. ‘ಪುರಾಣಮಿತ್ಯೇವ ನ ಸಾಧು ಸರ್ವಂ’ ಎಂಬ ಕಾಳಿದಾಸನ ಮಾತಿನಂತೆ ಅತ್ಯಂತ ಪ್ರಾಚೀನವಾದ ಭಾಷೆ ಎಂಬ ಕಾರಣಕ್ಕಾಗಿ ಮಾತ್ರ ಸಂಸ್ಕೃತ ಗ್ರಾಹ್ಯವೆನಿಸಬೇಕಾಗಿಲ್ಲ. ಆಧುನಿಕ ಕಾಲಕ್ಕೂ ಅದು ಸಂಗತ ಎಂಬುದು ಮತ್ತೆಮತ್ತೆ ದೇಶ-ವಿದೇಶಗಳಲ್ಲೂ ಪ್ರಮಾಣಿತವಾಗುತ್ತಿರುವುದರಿಂದ ಭಾರತೀಯರೆಲ್ಲರೂ ಯಾವುದೇ ಹಿಂಜರಿಕೆಯಿಲ್ಲದೆ ಸಂಸ್ಕೃತವನ್ನು ಒಪ್ಪಿಕೊಳ್ಳಬಹುದಾಗಿದೆ, ಅಪ್ಪಿಕೊಳ್ಳಬಹುದಾಗಿದೆ. ಅದಕ್ಕೆ ಬೇಕಾದ ಪ್ರೇರಣೆಯನ್ನು ಸಂಸ್ಕೃತ ದಿನವಾದ ಶ್ರಾವಣಪೂರ್ಣಿಮೆ ಎಲ್ಲರಿಗೂ ಕೊಡಲಿ.

-

ಡಾ. ಎಚ್.ಆರ್. ವಿಶ್ವಾಸ

 (ಲೇಖಕರು ‘ಸಂಸ್ಕೃತಭಾರತಿ’ಯ ಹಿರಿಯ ಕಾರ್ಯಕರ್ತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net