ದೇವರಹಿಪ್ಪರಗಿ ತಾಲೂಕಿನ ಕಡ್ಲೇವಾಡ ಪಿಸಿಎಚ್ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ಕೆರೆಯಲ್ಲಿ ಕುಳಿತು ವಿನೂತನ ಪ್ರತಿಭಟನೆ ನಡೆಸಿದರು. ಸಾಹೇಬಗೌಡ ರೆಡ್ಡಿ, ಶಂಕರಗೌಡ ಹಿರೇಗೌಡ, ಶ್ರೀಶೈಲ ಕಬಾಡಗಿ, ಪಿಟ್ಟಪ್ಪ ಗಣಜಲಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧಿಕಾರಿಗಳ ವಿರುದ್ಧ ಆಕ್ರೋಶ
ಶೀಘ್ರ ಕಾಲುವೆಗಳಿಗೆ ನೀರು ಹರಿಸಿ
ದೇವರಹಿಪ್ಪರಗಿ: ಈ ವರ್ಷ ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳಾದರೂ, ಮಳೆಯಿಲ್ಲದೆ ಜನ-ಜಾನು ವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ತಕ್ಷಣವೇ ಕಾಲುವೆಗಳ ಮೂಲಕ ನೀರು ಬಿಟ್ಟು ಕೆರೆಗಳನ್ನು ತುಂಬಿಸಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ತಮ್ಮ ಜಾನುವಾರುಗಳೊಂದಿಗೆ ಬತ್ತಿದ ಕೆರೆ ಮಧ್ಯೆ ಕುಳಿತು ವಿನೂತನ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಹತ್ತಿರದ ಕಡ್ಲೇವಾಡ ಕೆರೆಗೆ ಆಗಮಿಸಿದ ಮುಳಸಾವಳಗಿ, ಇಂಗಳಗಿ, ನಿವಾಳಖೇಡ, ಕಡೇವಾಡ ಪಿಸಿಎಚ್ ಹಾಗೂ ಚಿಕ್ಕರೂಗಿ ಸೇರಿ ವಿವಿಧ ಗ್ರಾಮಗಳ ರೈತರು, ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತ ಪ್ರತಿಭಟನೆ ಕುಳಿತರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಸಾಹೇಬಗೌಡ ರೆಡ್ಡಿ ಮಾತನಾಡಿ, ಜಾನುವಾರುವಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದ್ದು, ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸಬೇಕು. ಚಿಮ್ಮಲಗಿ ಕಾಲುವೆಗೆ ಬೇಸಿಗೆ ಸಮಯದಲ್ಲಿ ನೀರು ಹರಿಸಲಾಗಿದ್ದು, ಕೆರೆಗಳಲ್ಲಿ ಶೇ.60ರಷ್ಟು ನೀರಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಆದರೆ, ಕೆರೆಯಲ್ಲಿ ಶೇ.5ರಷ್ಟೂ ನೀರಿಲ್ಲ ಎಂದು ಆಗ್ರಹಿಸಿದರು.
ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪ ಕಾಲುವೆಗೆ ಕೆಬಿಜೆಎನ್‌ಎಲ್ ಅಧಿಕಾರಿಗಳು ತಕ್ಷಣ ನೀರು ಹರಿಸಿ, ಕೊನೆಯ ಭಾಗದವರೆಗೂ ತಲುಪಿಸಿ ಕೆರೆ ತುಂಬಿಸಬೇಕು. ತಕ್ಷಣ ಕೆರೆಗೆ ನೀರು ತುಂಬಿ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಅಧ್ಯಕ್ಷ ಶಂಕರಗೌಡ ಹಿರೇಗೌಡ, ಮುಖಂಡರಾದ ಶ್ರೀಶೈಲ ಕಬಾಡಗಿ, ಪಿಟ್ಟಪ್ಪ ಗಣಜಲಿ, ರಾಚಗೊಂಡ ಕಬಾಡಗಿ, ಲಿಂಗರಾಜ ಸಂಗೋಗಿ, ತಿಪ್ಪಣ್ಣ ತಳವಾರ, ನಾಗರಾಜ ಕಬಾಡಗಿ ಇತರರಿದ್ದರು.