ಸಹೋದರತ್ವ ಸಾರುವ ಶಾಶ್ವತ ಬಂಧ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ನಾಡಿನಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ ಹಾಗೂ ಅಧ್ಯಾತ್ಮಿಕ ಹಿನ್ನೆಲೆಯಿದೆ. ಆದ್ದರಿಂದಲೇ ಭಾರತೀಯ ಹಬ್ಬಗಳು ಕೇವಲ ಸಂಭ್ರಮದ ದಿನಗಳಲ್ಲ; ಅವು ನಮ್ಮ ಬದುಕಿಗೆ ಮೌಲ್ಯ, ಸಂಬಂಧಗಳಿಗೆ ಬೆಸುಗೆ ಮತ್ತು ಸಮಾಜಕ್ಕೆ ಸೌಹಾರ್ದವನ್ನು ನೀಡುವ ಸಂಸ್ಕೃತಿಯ ಪಾಠಗಳಾಗಿವೆ. ಅಂತಹ ಪವಿತ್ರ ಹಬ್ಬಗಳಲ್ಲಿ ರಕ್ಷಾಬಂಧನವೂ ಒಂದು.

ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ರಕ್ಷಾಬಂಧನವು ಸಹೋದರ ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಪರಸ್ಪರ ರಕ್ಷಣೆಯ ಪ್ರತೀಕ. ರಕ್ಷಾಬಂಧನದಂದು ಸಹೋದರಿ ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ, ಆರತಿ ಮಾಡಿ, ಅವನ ಕ್ಷೇಮ ಆರೋಗ್ಯ ದೀರ್ಘಾಯುಷ್ಯಕ್ಕಾಗಿ ಹಾರೈಸುತ್ತಾಳೆ. ಸಹೋದರನು ಸಹೋದರಿಯ ಪ್ರೀತಿ ಮತ್ತು ವಿಶ್ವಾಸವನ್ನು ಗೌರವಿಸಿ, ಅವಳಿಗೆ ಸದಾ ಬೆಂಬಲವಾಗಿ ನಿಲ್ಲುವ ಸಂಕಲ್ಪ ಮಾಡುತ್ತಾನೆ.

ಬಾಲ್ಯದಲ್ಲಿ ಒಂದೇ ಮನೆಯ ಅಂಗಳದಲ್ಲಿ ಆಡಿ ಬೆಳೆದ ಅಣ್ಣತಂಗಿಯರು, ಬೆಳೆದ ಮೇಲೆ ಬೇರೆ ಬೇರೆ ಊರುಗಳಲ್ಲಿ, ದೇಶಗಳಲ್ಲಿ ನೆಲೆಸಿರಬಹುದು. ಆದರೂ, ರಕ್ಷಾಬಂಧನದ ದಿನ ಬಂದಾಗ ಬಾಲ್ಯದ ಆ ಮಧುರ ಕ್ಷಣಗಳು ಮತ್ತೆ ಕಣ್ಣ ಮುಂದೆ ಬರುತ್ತವೆ. ತಂಗಿಯ ಕೈಯಿಂದ ಕಟ್ಟಿಸಿಕೊಳ್ಳುವ ರಾಖಿಗಾಗಿ ಅಣ್ಣ ಕಾತರನಾಗಿರುತ್ತಾನೆ; ಅಣ್ಣನ ಕೈಗೆ ರಾಖಿ ಕಟ್ಟುವ ಕ್ಷಣಕ್ಕಾಗಿ ತಂಗಿಯ ಮನಸ್ಸು ಕಾಯುತ್ತಿರುತ್ತದೆ. ಆ ಕ್ಷಣದಲ್ಲಿ ದೂರವೆಂಬುದು ದೂರವಾಗುತ್ತದೆ; ವಯಸ್ಸಿನ ಅಂತರ ಅಳಿದು ಹೋಗುತ್ತದೆ; ಉಳಿಯುವುದು ಒಂದೇ ಒಂದು ಭಾವನೆ- ಅಣ್ಣತಂಗಿಯ ಅಕ್ಷಯ ಪ್ರೀತಿ.

ರಕ್ಷಾಬಂಧನದ ಮಹತ್ವ: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶ್ರಾವಣ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯಂತ ಗೌರವದ ಸ್ಥಾನ ನೀಡಲಾಗಿದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬ ಮಾತಿನಂತೆ, ನಾರಿಯ ಗೌರವ ಮತ್ತು ಸುರಕ್ಷತೆ ಸಮಾಜದ ಜವಾಬ್ದಾರಿಯೆಂಬ ಸಂದೇಶ ನಮ್ಮ ಪರಂಪರೆಯಲ್ಲಿದೆ. ಹೀಗಾಗಿ ರಕ್ಷಾಬಂಧನದ ಅರ್ಥವನ್ನು ಕೇವಲ ಅಣ್ಣನು ತಂಗಿಯನ್ನು ರಕ್ಷಿಸಬೇಕು ಎಂಬ ಸೀಮಿತ ಅರ್ಥದಲ್ಲಿ ನೋಡುವುದಕ್ಕಿಂತ, ಪರಸ್ಪರರು ಸುಖದುಃಖಗಳಲ್ಲಿ ಬೆಂಬಲವಾಗಿ ನಿಲ್ಲಬೇಕು ಎಂಬ ವಿಶಾಲ ಅರ್ಥದಲ್ಲಿ ಗ್ರಹಿಸುವುದು ಸೂಕ್ತ. ರಾಖಿ ಕೇವಲ ರಕ್ಷೆಯ ದ್ಯೋತಕವಲ್ಲ; ಅದು ಪ್ರೀತಿ, ಮಮತೆ, ವಿಶ್ವಾಸ ಮತ್ತು ಜವಾಬ್ದಾರಿಯ ಸಂಕೇತ.

ಮಹಾಭಾರತದ ಹಿನ್ನೆಲೆ: ರಕ್ಷಾಬಂಧನದೊಂದಿಗೆ ಶ್ರೀಕೃಷ್ಣ ಮತ್ತು ದ್ರೌಪದಿಯ ಪ್ರಸಂಗವನ್ನು ಜೋಡಿಸಲಾಗುತ್ತದೆ. ಮಹಾಭಾರತದ ಕಥಾ ಪರಂಪರೆಯ ಪ್ರಕಾರ, ಒಂದು ಸಂದರ್ಭದಲ್ಲಿ ಕೃಷ್ಣನ ಕೈಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಕೃಷ್ಣನ ಕೈಗೆ ಕಟ್ಟಿದಳು. ದ್ರೌಪದಿಯ ಈ ಆತ್ಮೀಯ ಕಾಳಜಿಯಿಂದ ಸಂತುಷ್ಟನಾದ ಕೃಷ್ಣ, ಅವಳನ್ನು ಸದಾ ರಕ್ಷಿಸುವ ಸಂಕಲ್ಪ ಮಾಡಿದನೆಂದು ಕಥೆ ಹೇಳುತ್ತದೆ. ಮುಂದೆ ಕೌರವರ ಸಭೆಯಲ್ಲಿ ದ್ರೌಪದಿಗೆ ಅಪಮಾನವಾಗುವ ಸಂದರ್ಭದಲ್ಲಿ ಕೃಷ್ಣ ಅವಳ ಮಾನವನ್ನು ಕಾಪಾಡಿದ ಪ್ರಸಂಗ ಮಹಾಭಾರತದಲ್ಲಿದೆ.

ಜನಪ್ರಿಯ ದಂತಕಥೆಗಳು: ರಕ್ಷಾಬಂಧನಕ್ಕೆ ಸಂಬಂಧಿಸಿದಂತೆ ಇತಿಹಾಸ ಮತ್ತು ಜನಪದ ಪರಂಪರೆಯಲ್ಲಿ ಹಲವು ಕಥೆಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿ ಅಲೆಕ್ಸಾಂಡರ್ ಮತ್ತು ಪುರೂರವನ ಕಥೆಯೂ ಒಂದು. ಅಲೆಕ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದಾಗ ಅವನ ಪತ್ನಿಯು ಪುರೂರವನಿಗೆ ರಕ್ಷಾಸೂತ್ರವನ್ನು ಕಳುಹಿಸಿ, ತನ್ನ ಪತಿಗೆ ಹಾನಿ ಮಾಡದಂತೆ ವಿನಂತಿಸಿಕೊಂಡಳು. ರಾಖಿಯ ಗೌರವವನ್ನು ಕಾಪಾಡಿದ ಪುರೂರವನು ಅಲೆಕ್ಸಾಂಡರ್​ನ ಜೀವವನ್ನು ಉಳಿಸಿದನೆಂದು ಕಥೆ ಹೇಳುತ್ತದೆ. ಅದೇ ರೀತಿ ಚಿತ್ತೂರಿನ ರಾಣಿ ಕರ್ಣಾವತಿ ಮತ್ತು ಮೊಘಲ್ ಚಕ್ರವರ್ತಿ ಹುಮಾಯೂನ್​ಗೆ ಸಂಬಂಧಿಸಿದ ರಾಖಿಯ ಕಥೆಯೂ ಜನಪ್ರಿಯವಾಗಿದೆ. ಕರ್ಣಾವತಿ ಹುಮಾಯೂನ್​ಗೆ ರಾಖಿಯನ್ನು ಕಳುಹಿಸಿ ಸಹಾಯವನ್ನು ಕೋರಿದಳು ಎಂಬ ಪ್ರತೀತಿ ಇದೆ. ಈ ಕಥೆಗಳ ನಿಖರತೆಯ ಕುರಿತು ಭಿನ್ನಾಭಿಪ್ರಾಯಗಳಿದ್ದರೂ, ಅವುಗಳಲ್ಲಿರುವ ರಾಖಿಯ ಗೌರವ, ಮಹಿಳೆಯ ರಕ್ಷಣೆ, ಪರಸ್ಪರ ವಿಶ್ವಾಸ ಮತ್ತು ಮಾನವೀಯತೆಯ ಮೌಲ್ಯ ಇಂದಿಗೂ ಜನಮನವನ್ನು ರ್ಸ³ಸುತ್ತವೆ.

ರಕ್ಷಾಬಂಧನದ ಸಂದೇಶವನ್ನು ಇನ್ನಷ್ಟು ವಿಶಾಲಗೊಳಿಸಿದರೆ ಅದು ಕುಟುಂಬದ ಗಡಿಯನ್ನು ಮೀರಿ ಸಮಾಜದ ಎಲ್ಲ ಸಂಬಂಧಗಳಿಗೂ ಅನ್ವಯಿಸುತ್ತದೆ. ಸಹೋದರ ಸಹೋದರಿಯರ ನಡುವೆ ಮಾತ್ರವಲ್ಲ, ಸ್ನೇಹಿತರ ನಡುವೆ, ಗುರುಶಿಷ್ಯರ ನಡುವೆ, ಸಮಾಜದ ವಿವಿಧ ವರ್ಗಗಳ ನಡುವೆ ಪರಸ್ಪರ ಗೌರವ, ಸಹಕಾರ ಮತ್ತು ರಕ್ಷಣೆಯ ಮನೋಭಾವ ಬೆಳೆಯಬೇಕು.

ಹಬ್ಬದ ಸಂಭ್ರಮದ ಜತೆಗೆ ಪರಿಸರದ ಕಾಳಜಿಯೂ ಅಗತ್ಯ. ಪ್ಲಾಸ್ಟಿಕ್ ಮತ್ತು ಕೃತಕ ವಸ್ತುಗಳಿಂದ ತಯಾರಿಸಿದ ರಾಖಿಗಳ ಬದಲು ಹತ್ತಿ, ರೇಷ್ಮೆ, ನೈಸರ್ಗಿಕ ನಾರು, ಬೀಜ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ರಾಖಿಗಳನ್ನು ಬಳಸುವುದು ಒಳ್ಳೆಯದು. ಮಕ್ಕಳು ಸ್ವತಃ ರಾಖಿ ತಯಾರಿಸಿ ಕಟ್ಟುವುದರಿಂದ ಹಬ್ಬದ ಸಂಭ್ರಮದ ಜತೆಗೆ ಸೃಜನಶೀಲತೆ, ಸ್ವಾವಲಂಬನೆ ಮತ್ತು ಪರಿಸರಪ್ರಜ್ಞೆಯೂ ಬೆಳೆಯುತ್ತದೆ. ರಕ್ಷಾಬಂಧನವನ್ನು ಕೇವಲ ಸಂಪ್ರದಾಯವೆಂದು ಆಚರಿಸದೆ, ಅದರ ಹಿಂದಿರುವ ಮೌಲ್ಯವನ್ನು ಅರಿತು ಆಚರಿಸಬೇಕಾಗಿದೆ. ಸಹೋದರ-ಸಹೋದರಿಯರ ಪ್ರೀತಿ, ಪರಸ್ಪರ ವಿಶ್ವಾಸ, ಕುಟುಂಬದ ಒಗ್ಗಟ್ಟು, ಮಹಿಳೆಯ ಗೌರವ, ಸಮಾಜದ ಸೌಹಾರ್ದ ಮತ್ತು ಮಾನವೀಯತೆಯ ರಕ್ಷಣೆಯ ಸಂಕಲ್ಪ- ಇವೆಲ್ಲವೂ ಈ ಒಂದು ಪುಟ್ಟ ರಾಖಿಯಲ್ಲಿ ಅಡಗಿವೆ.

-

ಗವಿಸಿದ್ದೇಶ್ ಕೆ. ಕಲ್ಗುಡಿ

 (ಲೇಖಕರು ಅಧ್ಯಾಪಕರು, ವರ್ತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net