

ಬೆಂಗಳೂರು : ಬಸವಣ್ಣ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಕನಸು ಕಂಡ ಸಮಸಮಾಜ ನಿರ್ಮಾಣವಾಗಬೇಕಾದರೆ ಜಾತೀಯತೆ, ಅಸಮಾನತೆ, ಮೂಢನಂಬಿಕೆ ಮತ್ತು ಕಂದಾಚಾರಗಳು ತೊಲಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆದ ಲೇಖಕ ಸಂಗಮೇಶ ಬಾದವಾಡಗಿ ಅವರ ಜೋಳರಾಜನ ಕಥೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ವಿದ್ಯಾವಂತರಲ್ಲಿಯೂ ಜಾತೀಯತೆ ಮುಂದುವರಿದಿರುವುದು ಆತಂಕಕಾರಿ. ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸಿಕೊಂಡು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ಬದುಕಬೇಕು. ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಣೆಯಾದಾಗ ಮಾತ್ರ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ. ಕಲ್ಯಾಣ ಕರ್ನಾಟಕದ ಜನಜೀವನ, ಶ್ರಮಿಕ ವರ್ಗದ ಆಹಾರ ಸಂಸ್ಕೃತಿ ಹಾಗೂ ಅಸಮಾನತೆಯ ವಿಚಾರಗಳನ್ನು ಕೃತಿಯ ಮೂಲಕ ಕಟ್ಟಿಕೊಟ್ಟಿರುವ ಸಂಗಮೇಶ ಬಾದವಾಡಗಿ ಅವರ ಪ್ರಯತ್ನ ಶ್ಲಾಘನೀಯ. ಕನಕದಾಸರ ರಾಮಧಾನ್ಯ ಚರಿತೆಯಂತೆ ಜೋಳರಾಜನ ಕಥೆ ಕೃತಿಯೂ ಆಹಾರ ಸಂಸ್ಕೃತಿಯ ಮೂಲಕ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯನ್ನು ಪರಿಣಾಮಕಾರಿಯಾಗಿ ಮುಂದಿಟ್ಟಿದೆ. ಇಂತಹ ಸಾಹಿತ್ಯಿಕ ಪ್ರಯತ್ನಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ಒಂದು ಕಾಲಕ್ಕೆ ಭತ್ತ ಶ್ರೀಮಂತರ ಆಹಾರವಾಗಿದ್ದರೆ; ರಾಗಿ ಮತ್ತು ಜೋಳ ಶ್ರಮಿಕರು ಹಾಗೂ ಬಡವರ ಆಹಾರವಾಗಿದ್ದವು. ಕನಕದಾಸರು ರಾಗಿಯ ಶ್ರೇಷ್ಠತೆಯನ್ನು ಪ್ರತಿಪಾದಿಸಿದಂತೆ ಈ ಕೃತಿಯಲ್ಲಿ ಜೋಳದ ಮಹತ್ವವನ್ನು ಸಾರಲಾಗಿದೆ. ಬಡವರಿಗೂ ಆಹಾರದ ಹಕ್ಕು ದೊರೆಯಬೇಕು ಎಂಬ ಆಶಯದಿಂದ ತಮ್ಮ ಆಡಳಿತದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿತ್ತು. ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಂವಿಧಾನದ 371(ಜೆ) ತಿದ್ದುಪಡಿ ಮಹತ್ವದ ಕೊಡುಗೆಯಾಗಿದೆ. ಆ ಭಾಗದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ದೊರೆತಿವೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂ. ಅನುದಾನ ನೀಡುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿತ್ತು ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಂಸದ ಸಾಗರ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರಷೋತ್ತಮ ಬಿಳಿಮಲೆ, ಗಾಂಧಿ ಭವನದ ಅಧ್ಯಕ್ಷ ವೂಡೆ ಪಿ. ಕೃಷ್ಣ, ಪ್ರೊ.ಹಿರೇಮಠ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.