

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ ಪಿ ರಂಗನಾಥ್ ಅವರು ಜಯಗಳಿಸಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಗೆಲುವಿನ ಬೆನ್ನಲ್ಲೇ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಪ್ರಮುಖ ಎನ್‌ಡಿಎ ನಾಯಕರು ನೂತನ ವಿಜೇತ ಅಭ್ಯರ್ಥಿಗೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಸತ್ಯಮೇವ ಜಯತೆ. ಸುಳ್ಳು, ದುರಾಡಳಿತ, ಹಣಬಲ, ತೋಳ್ಬಲಗಳು ಸೋತಿವೆ. ಈ ಚುನಾವಣೆ ಹೊಸ ಭರವಸೆಯ ಸೂರ್ಯೋದಯಕ್ಕೆ ನಾಂದಿ ಹಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಜಯಭೇರಿ ಸಾಧಿಸಿದ್ದು, ನಮ್ಮ ಒಮ್ಮತದ ಅಭ್ಯರ್ಥಿ ಎ ಪಿ ರಂಗನಾಥ್ ಅವರಿಗೆ ಅಭಿನಂದನೆಗಳು. ಉಳಿದ ಮೂರು ಕ್ಷೇತ್ರಗಳಲ್ಲಿಯೂ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಆಮಿಷ, ಅಧಿಕಾರದ ದರ್ಪವನ್ನು ದಿಕ್ಕರಿಸಿ ಮತ ಚಲಾಯಿಸಿದ ಶಿಕ್ಷಕರಿಗೆ ಧನ್ಯವಾದ ಅರ್ಪಿಸಿರುವ ಅವರು, ಈ ಗೆಲುವು 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಜನಾದೇಶವಾಗಿದೆ. ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದಿದ್ದಾರೆ.
ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭ, ಮುಂದಿನ ದೀಪಾವಳಿಗೆ ಕನ್ನಡ ನಾಡಿನಲ್ಲಿ ಮೈತ್ರಿಯ ಮುಂಬೆಳಕು ಮೂಡುವುದು ಖಚಿತ ಎನ್ನುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಜೆಡಿಎಸ್ ವರಿಷ್ಠರು, ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೆಗೌಡ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ವಿಜೇತ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಎನ್‌ಡಿಎ ಅಭ್ಯರ್ಥಿ ಎ ಪಿ ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.
ಕಾಂಗ್ರೆಸ್‌ನ ಹಣಬಲ ಮತ್ತು ಅಧಿಕಾರಬಲದ ನಡುವೆಯೂ ಶಿಕ್ಷಕ ಬಂಧುಗಳು ಎನ್‌ಡಿಎಯ ಅಭಿವೃದ್ಧಿಪರ ರಾಜಕಾರಣಕ್ಕೆ ನೀಡಿರುವ ಈ ಬೆಂಬಲ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಶಿಕ್ಷಕರ ಸಮಸ್ಯೆಗಳ ಪರಿಹಾರ ಮತ್ತು ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಎನ್‌ಡಿಎ ಸದಾ ಬದ್ಧವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೆ, ಪ್ರಚಾರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಚುನಾವಣಾ ಫಲಿತಾಂಶವನ್ನು ಸ್ವಾಗತಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಿಕ್ಷಕರ ವಿಶ್ವಾಸಕ್ಕೆ ಸಂದ ಜಯ, ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟಿನ ವಿಜಯ ಎಂದು ಬಣ್ಣಿಸಿದ್ದಾರೆ.
ಈ ಗೆಲುವು ಕೇವಲ ಒಬ್ಬ ಅಭ್ಯರ್ಥಿಯ ವಿಜಯವಲ್ಲ, ಶಿಕ್ಷಕರ ಹಿತಾಸಕ್ತಿಗಳ ಪರವಾಗಿ ನಿಂತ ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು, ಸಂಘಟಿತ ಹೋರಾಟ ಹಾಗೂ ಪ್ರಜ್ಞಾವಂತ ಮತದಾರರ ವಿವೇಚನಾಪೂರ್ಣ ನಿರ್ಧಾರಕ್ಕೆ ಸಂದ ಜಯ ಎಂದಿದ್ದಾರೆ. ರಾಜ್ಯದಲ್ಲಿ ಆಡಳಿತ ವೈಫಲ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಫಲಿತಾಂಶ ಸ್ಪಷ್ಟ ಎಚ್ಚರಿಕೆಯಾಗಿದೆ ಎಂದು ಟೀಕಿಸಿರುವ ಅವರು, ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಆಡಳಿತಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದಕ್ಕೆ ಇದು ಮುನ್ನುಡಿ ಎಂದು ತಿಳಿಸಿದ್ದಾರೆ.