‘ಹುಮನಾಬಾದ್ನಲ್ಲಿ ಭಾನುವಾರ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರನ್ನು ಭೇಟಿ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದರೂ ಕೂಲಿ ಪಾವತಿಯಾಗಿಲ್ಲ ಎಂದು ಇಟಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಿಕರು ಅಳಲು ತೋಡಿಕೊಂಡರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾಜಿ ಸಚಿವ ರಾಜಶೇಖರ ಪಾಟೀಲ್ರ ಮುಂದೆ ಕಾರ್ಮಿಕರ ಅಳಲು
ಹುಮನಾಬಾದ್: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ್ದರೂ ಹಾಜರಾತಿಯನ್ನು "0' ಎಂದು ನಮೂದಿಸಿ ಕೂಲಿ ಹಣ ವಂಚಿಸಲಾಗಿದೆ ಎಂದು ಆರೋಪಿಸಿ ಚಿಟಗುಪ್ಪ ತಾಲೂಕಿನ ಇಟಗಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಉದ್ಯೋಗ ಖಾತ್ರಿ ಕಾರ್ಮಿಕರು ಭಾನುವಾರ ಪಟ್ಟಣದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರನ್ನು ಭೇಟಿ ಮಾಡಿ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದರು.
2025-&26ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ 11 ಕಾಮಗಾರಿಗಳಲ್ಲಿ ಸುಮಾರು 610 ಕಾರ್ಮಿಕರು ಒಟ್ಟು 4,270 ಮಾನವ ದಿನಗಳಷ್ಟು ಕೆಲಸ ಮಾಡಿದ್ದು, ಸುಮಾರು 16,31,140 ರೂ. ಕೂಲಿ ಬಾಕಿಯಿದೆ ಎಂದು ಕಾರ್ಮಿಕರು ದೂರಿದ್ದಾರೆ.
ಆದರೆ ಎನ್ಎಂಆರ್ನಲ್ಲಿ ಎಲ್ಲ ಕಾರ್ಮಿಕರ ಹಾಜರಾತಿಯನ್ನು "0' ಎಂದು ನಮೂದಿಸಿರುವುದರಿಂದ ಕೂಲಿ ಪಾವತಿಯಾಗಿಲ್ಲ. ಕೂಡಲೇ ನ್ಯಾಯ ದೊರಕಿಸಿಕೊಡಿ, ಗ್ರಾಪಂ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂಬಂಧ ಈಗಾಗಲೇ ಚಿಟಗುಪ್ಪ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೂರು ಸಲ್ಲಿಸಿದ 15 ದಿನಗಳೊಳಗೆ ಸಮರ್ಪಕ ತನಿಖೆ ನಡೆಸಿ ನ್ಯಾಯ ಒದಗಿಸದಿದ್ದರೆ ಗ್ರಾಪಂ ಕಚೇರಿಗೆ ಬೀಗ ಹಾಕಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಮಾಜಿ ಸಚಿವರ ಗಮನಕ್ಕೆ ತಂದರು.
ಕೂಲಿ ಕಾರ್ಮಿಕರ ಅಹ್ವಾಲು ಆಲಿಸಿ ಮನವಿ ಸ್ವೀಕರಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ್, ಚಿಟಗುಪ್ಪ ತಾಪಂ ಇಒ ಲಿಂಗರಾಜ ಪಾಟೀಲ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿ, ಇಟಗಾ ಗ್ರಾಮದ ಬಡ ಕೂಲಿಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು. ತಪ್ಪಿತಸ್ಥರ ಮೇಲೆ ತಕ್ಷಣ ಕ್ರಮ ಜರುಗಿಸಬೇಕೆಂದು ಸೂಚಿಸಿದರು. ಅಲ್ಲದೆ ಕಾರ್ಮಿಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸಂಬಂಧಪಟ್ಟ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.