ಸರ್ವ ದಿಕ್ಕುಗಳಲ್ಲೂ ಹಲವು ಮುಖಗಳಾಗಿ ಅಲ್ಲಮನ ಆರೋಗಣ

ಅಲ್ಲಮಪ್ರಭು
ಅಲ್ಲಮಪ್ರಭು
Published on

ವ್ಯೋಮರೂಪಿ ಅಲ್ಲಮನಿಗೆ ಬಸವಣ್ಣನು ಆರೋಗಣೆ ನೀಡಿದ್ದು ಸರಿಯಷ್ಟೆ. ನಾವು ಈ ಪ್ರಸಂಗವನ್ನು ಚಾಮರಸನ ಮೂಲಕ ಕಥನದ ಮಾದರಿಯಲ್ಲಿ ಗ್ರಹಿಸಿದೆವು. ಆದರೆ, ಇದೇ ಪ್ರಸಂಗವನ್ನು ಮಹಾನುಭಾವಿ ಶಿವಗಣಪ್ರಸಾದಿ ಮಹಾದೇವಯ್ಯನು ಚೆನ್ನಬಸವಣ್ಣ- ಮಡಿವಾಳ ಮಾಚಿದೇವ- ಸೊಡ್ಡಳಬಾಚರಸ- ಬಸವಣ್ಣ ಮತ್ತು ಅಲ್ಲಮಪ್ರಭುಗಳ ಜೊತೆ ನಡೆಸಿದ ಸಂವಾದ ತಾತ್ವಿಕವಾಗಿ ಅತ್ಯಪೂರ್ವವಾಗಿದೆ. ಇದು ನಿಜದ ನೆಲೆಯನ್ನು ಕಾಣುವ ಸಂವಾದ. ಶಿವಗಣಪ್ರಸಾದಿ ನಿರೂಪಿಸಿದ ಆರೋಗಣೆಯ ತಾತ್ವಿಕ ಚಿತ್ರವನ್ನು ಅವರವರ ಮಾತಿನ ಮೂಲಕವೇ ನಾವು ತಿಳಿಯೋಣ: ಅಲ್ಲಮಪ್ರಭುವಿನ ಮುಂದೆ ಅನೇಕ ಭಕ್ಷ್ಯ-ಭೋಜ್ಯಗಳಿವೆ. ಪರಿಪರಿಯ ಪದಾರ್ಥಗಳನ್ನು ಅಲ್ಲಮನು ಲಿಂಗಕ್ಕೆ ಅರ್ಪಿಸುತ್ತಿದ್ದಾನೆ. ‘ಅವಧಾರು ಅವಧಾರು ಲಿಂಗವೇ ನಿನ್ನ ಮನಕ್ಕೆ ಬಂದ ಪದಾರ್ಥವ ನಾ ನಿಮಗರ್ಪಿಸುವೆನು’ ಎಂದು ಹೇಳಿ ‘ಸಂಗನ ಬಸವಣ್ಣನ ಪ್ರಸಾದವನು ಆರೋಗಿಸು ದೇವ’ ಎನ್ನುತ್ತ ಪ್ರಭುದೇವನು ಆರೋಗಣೆಯನ್ನು ಮಾಡುತ್ತಿದ್ದಾನೆ.

ಆ ಪ್ರಸ್ತಾವದಲ್ಲಿ ಹೇಳುವ ವಚನವಿದು:

ಕೈಹಾರ ನೀಡಿದರೆ ಮನಹಾರ ಕೊಳುತೈದಾನೆ/ಅಹುದಹುದು ಸ್ವಾಮಿಯ ಹಸಿವು/ಲೋಕಕ್ಕೆ ಹೊಸತು/ ಕೂಡಲಸಂಗಮದೇವ....

ಬಸವಣ್ಣ ಕೈಯಲ್ಲಿ ಆಹಾರವನ್ನು ನೀಡಿದರೆ, ಅಲ್ಲಮನು ‘ಮನಹಾರ’ವಾಗಿ ಸ್ವೀಕರಿಸುತ್ತಿದ್ದಾನೆ. ಇದು ಲೋಕಕ್ಕೆ ಹೊಸತಾಗಿದೆ. ದೆಸೆದಿಕ್ಕೆಲ್ಲಾ ವಿಶ್ವತೋಮುಖವಾದ ಕೂಡಲಸಂಗಮ ದೇವಂಗೆ ದೆಸೆದೆಸೆಯಲ್ಲಿ ನೀಡಿರೆ ಎನ್ನುತ್ತಾನೆ ಬಸವಣ್ಣ. ಆಗ ಚಿಕ್ಕದಣ್ಣಾ ಯಕರಾದ ಚೆನ್ನಬಸವಣ್ಣನು ‘ಅನಾಹತದಲ್ಲಿ ಶಿವ-ತನ್ನ ಲೀಲಾವಿನೋದದಿಂದ ನೀವು ಸಹಿತ ಮೂರ್ತಿಯಾದನು’ ಎಂದು ಅಲ್ಲಮನ ಯೌಗಿಕ ರೂಪವನ್ನು ತಿಳಿಸಿಕೊಡುತ್ತಾನೆ. ಅವನು ಮುಂದುವರಿದು ‘ಪ್ರಭುದೇವರು ಅಪರಿಮಿತದಾರೋಗಣೆಗೆ ಬಸವಣ್ಣ-ಮಡಿವಾಳನೆಂಬೆರಡು ತೋಳ ಧರಿಸಿದನು-ಏನೆಂದು ಪಮಿಸುವೆನು’ ಎಂದು ಉದ್ಗಾರ ತೆರೆಯುತ್ತಾರೆ. ಈ ಮಾತಿಗೆ ಮಡಿವಾಳ ಮಾಚಿದೇವರು:

ಆಕಾಶ ಬಾಯ್ತೆಗೆದಂತೆ ಆರೋಗಣೆಯ/ಮಾಡುತ್ತಿದ್ದನು, ಮಾಡಿಸುವ ಗುರುವರಾರೋ?/ ಕಲಿದೇವರ ದೇವನ ಅನುವಳೆದು ನೀಡುವರೆ/ಸಂಗನ ಬಸವಣ್ಣಂಗಲ್ಲದೆ ಮತ್ತಾರಿಗೂ ಅಳವಡದು

ಎಂದು ಕೈವಾರಿಸಿ ಬಿಡುತ್ತಾರೆ. ಬಸವಣ್ಣನು ಪ್ರಭುವಿಗೆ ಆರೋಗಣೆ ಮಾಡುತ್ತಿದ್ದರೆ ‘ಆಕಾಶವೆ ಬಾಯ್ತೆಗೆದಂತೆ’ ಎಂಬ ಅಪೂರ್ವ ಮಾತನ್ನು ಮಡಿವಾಳಯ್ಯಗಳು ಅಲ್ಲಮನ ಆರೋಗಣೆಯ ಕ್ರಮವನ್ನು ಪರಿಭಾವಿಸುತ್ತ ನುಡಿಯುತ್ತಾರೆ. ಅಲ್ಲಮನು ಸ್ವೀಕರಿಸುತ್ತಿರುವ ಆರೋಗಣೆಯು ಮರ್ತ್ಯಲೋಕಕ್ಕೆ ಚೋದ್ಯವನ್ನು ಉಂಟುಮಾಡುತ್ತಿದೆ.

ಬಸವಣ್ಣನು ಅಲ್ಲಮನಿಗೆ ಅರ್ಪಿಸುತ್ತಿದ್ದ ಆಹಾರದ ಬಗೆಗಳು ಹಲವು ರೀತಿಗಳಲ್ಲಿ ಇದ್ದುವು. ಹೆಡಗೆಹಾರ, ಮೊರಹಾರ, ಗೆರಸಿ ಹಾರ, ಮಡಕೆಹಾರಗಳನ್ನು ದಿಕ್ಕುದಿಕ್ಕು ಗಳಿಂದ ಭಕ್ತರು ತರುತ್ತಿದ್ದರು. ಬಸವಣ್ಣನು ಅಲ್ಲಮನಿಗೆ ಹೊಸರೀತಿಯಲ್ಲಿ ಆರೋಗಣೆ ಮಾಡುತ್ತಿದ್ದನು. ಯಾರು ಯಾರು ಯಾವಯಾವ ದಿಕ್ಕಿನಿಂದ ನೀಡುತ್ತಿದ್ದರೂ ಆಯಾಯ ರೀತಿಯಲ್ಲೆ ದಿಕ್ಕುಗಳೆ ಬಾಯ್ ಆದುವೋ ಎಂಬಂತೆ ಅಲ್ಲಮನು ಆರೋಗಣೆಯನ್ನು ಪಡೆಯುತ್ತಿದ್ದನು. ಯಾವಯಾವ ದಿಕ್ಕಿನಿಂದ ಅಲ್ಲಮನನ್ನು ನೋಡಿದರೆ, ಆ ಎಲ್ಲಾ ದಿಕ್ಕುಗಳಲ್ಲೂ ಹಲವು ಮುಖಗಳಾಗಿ ಪದಾರ್ಥವನ್ನು ಆರೋಗಣ ಮಾಡುತ್ತಿದ್ದನು. ಇದನ್ನು ಕಂಡ ಬಸವಣ್ಣ ಬಗೆಬಗೆಯ ಧಾನ್ಯಗಳಿಂದ ಆಹಾರವನ್ನು ತಯಾರಿಸಿ ತರಿಸುತ್ತಿದ್ದನು. ಆಗ ಮಾಚಿದೇವರು ಅಲ್ಲಮನ ವಿಶ್ವರೂಪವನ್ನು ಕಂಡು ‘ಮಾಚಿತಂದೆಯ ಕೈಲಾಗದು ಹೋಚಿ ತಂದೆಯ ಕೈಲಾಗದು. ಇಚ್ಛೆಗೆಟ್ಟಂತೆ ಇರಲಾಗದು, ಅಚ್ಚೊತ್ತಿದಂತೆ ಇರಬೇಕು’ ಎಂದು ಹೇಳಿ ಅಲ್ಲಮನು ಆರೋಗಣೆ ಮಾಡುತ್ತಿರುವ ಕ್ರಮವನ್ನು ಕಂಡು ‘ಬೆಚ್ಚಿ ಬೆದರಿ ಓಡದಿರು. ವೀರಕಂಕಣವ ಕಟ್ಟು ಸಂಗನ ಬಸವಣ್ಣ’ ಎಂದು ಧೈರ್ಯ ತುಂಬುತ್ತಾನೆ. ಆಗ ಬಸವಣ್ಣನು:

ಸಯಧಾನ ಸವೆಯಿತ್ತೆಂದು ಬೆದರಿದೆನಾದರೆ/ನಿಮ್ಮಾಣೆ,

ನಿಮ್ಮ ಪ್ರಮಥರಾಣೆ/ಪಡಿಪದಾರ್ಥಗಳು ಅವಸರಕ್ಕೆ ಒದಗದೆ ಇದ್ದಲ್ಲಿ/ಮನವಳುಕಿ ಬೆದರಿದೆನಾದರೆ/ನಿಮ್ಮ ಭಕ್ತರಿಗೆ ಸಲ್ಲೆನು. (ಪುಟ 205)

ಎಂದು ಹೇಳುತ್ತ ನನ್ನ ಒಡಲನ್ನೆ ದೇವಂಗೆ ಸಲ್ಲಿಸುತ್ತೇನೆ. ಇಲ್ಲವಾದರೆ ಕೂಡಲಸಂಗಮದೇವನಿಂದ ದೂರ ಉಳಿಯು ತ್ತೇನೆಂದು ಹೇಳುತ್ತಾನೆ.

ಬಸವಣ್ಣನು ಬಾಚರಸರನ್ನು ಕರೆದು ‘ಸಂಚಿತ ಸಯಧಾನವ ತೆಗೆಸಿ’ ಎಂದು ನುಡಿಯುತ್ತಾರೆ. ಆಗ ಬಾಚರಸರು ಕರಣಿಕರನ್ನು ಕರೆದು ‘ಹೊಸಜೋಳ ಅರುವತ್ತು ಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತು ಲಕ್ಷ ಖಂಡುಗ. ಗೋಧಿ ಹನ್ನೆರಡು ಲಕ್ಷ ಖಂಡುಗ, ಕಡಲೆ ಬತ್ತೀಸ ಲಕ್ಷ ಖಂಡುಗ, ಹೆಸರು ಮೂವತ್ತು ಲಕ್ಷ ಖಂಡುಗ, ನವಣೆ, ಹಾರಕ, ಬರಗು, ಸಾವೆ, ಮೂಷಿಗಳೆಂಬ ಧಾನ್ಯಂಗಳು ಐವತ್ತು ಲಕ್ಷ ಖಂಡುಗ ಇವನ್ನು ಸಂಗ್ರಹಿಸಿ ಆರೋಗಣೆಗೆ ಸಿದ್ಧತೆಗೊಳಿಸಲು ತಿಳಿಸುತ್ತಾನೆ. ಆಹಾರಪದಾರ್ಥಗಳು ಸಿದ್ಧವಾಗುತ್ತವೆ. ಅಲ್ಲಮನಿಗೆ ಎಣಿಕೆಯಿಲ್ಲದೆ ಪದಾರ್ಥಗಳನ್ನು ನೀಡುತ್ತಾ ಬಸವಣ್ಣನು ಅರ್ಪಿಸುತ್ತಿರುತ್ತಾನೆ. ಆದರೆ, ಅಲ್ಲಮನು ‘ಬಯಲು ಬಾಯ್ದೆಗೆದಂತೆ ಉಣ್ಣುತ್ತಿದ್ದನು’ ಎಂದು ಮಹಾದೇವಯ್ಯ ಹೇಳುತ್ತಾನೆ. ಇಲ್ಲಿ ನಡೆಯುತ್ತಿರುವ ಆರೋಗಣೆಯು ಮರ್ತ್ಯಲೋಕಕ್ಕೆ ಮೀರಿದ್ದು! ಇದೊಂದು ಲೋಕದ ಅಚ್ಚರಿಯಾಗಿತ್ತು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net