ಗೃಹ ಇಲಾಖೆ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಕ್ಕಪಡೆ ಯೋಜನೆ ರೂಪಿಸಿದೆ.ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣ ರಕ್ಷಣೆಗೆ ಧಾವಿಸುವುದು ಯೋಜನೆ ಉದ್ದೇಶವಾಗಿದೆ. ಈ ಮೂಲಕ ಮಹಿಳೆಯರು, ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸಹಾಯವಾಗಲಿದೆ.ಯೋಜನೆಯಡಿ ಪೊಲೀಸ್ ಸಿಬ್ಬಂದಿ, ತರಬೇತಿ ಪಡೆದ ಎನ್‌ಎಸ್‌ಸಿ ಕೆಡೆಟ್‌ಗಳ ತಂಡ ಹೊಂದಿರುವ ವಾಹನ, ಜಿಲ್ಲೆಗಳಲ್ಲಿ ಗಸ್ತು ತಿರುಗಲಿವೆ. 31 ಜಿಲ್ಲೆಗಳಲ್ಲಿ ಪ್ರತ್ಯೇಕ ವಾಹನಗಳು ಗಸ್ತು ತಿರುಗಲಿದೆ. ವಿಶೇಷವಾಗಿ ಶಾಲಾ ಕಾಲೇಜು, ಬಸ್, ರೈಲ್ವೆ ನಿಲ್ದಾಣ ಮತ್ತು ಮಾರುಕಟ್ಟೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಈ ವಾಹನ ಸಂಚಾರಿಸಲಿವೆ. ಕಾರ್ಯಾಚರಣೆಗಾಗಿ ಹೊಯ್ಸಳ ವಾಹನಗಳ ಮಾದರಿಯಲ್ಲಿ ಮಾರ್ಪಾಡು ಮಾಡಿದ ವಾಹನ ಬಳಸಲಾಗುತ್ತಿದೆ. ಪ್ರತಿ ಘಟಕವು 6ರಿಂದ 10 ಸದಸ್ಯರು ಒಳಗೊಂಡಿದೆ. ಇದರಲ್ಲಿ ಇಬ್ಬರು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ತರಬೇತಿ ಪಡೆದ ಎನ್‌ಸಿಸಿ ಕೆಡೆಟ್ ಇರುತ್ತಾರೆ. ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 6ವರೆಗೆ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ.ರಾಜ್ಯಾದ್ಯಂತ ಇರುವ ಸಹಾಯವಾಣಿ ಮೂಲಕ ಅಕ್ಕಪಡೆ ತಲುಪಲಬಹುದು. ದೂರದ ಸ್ಥಳದಿಂದ ಕರೆ ಬಂದರೂ ತಕ್ಷಣದ ಸಹಾಯ ಒದಗಿಸಲಿದೆ. ದಾಖಲಾದ ದೂರುಗಳನ್ನು ತ್ವರಿತವಾಗಿ ತಂಡ ಪ್ರತಿಕ್ರಿಯಿಸಲಿದೆ. ಗಂಭೀರ ಕೇಸ್‌ಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಆರೋಪಿಯನ್ನು ಹಸ್ತಾಂತರಿಸಲಾಗುತ್ತದೆ.