Textile: ಜವಳಿ ರಫ್ತಿನಲ್ಲಿ ಬೆಂಗಳೂರು ಮೊದಲ ಸ್ಥಾನಕ್ಕೆ ತರುವ ಗುರಿ

ಜಾಗತಿಕ ಮಾರುಕಟ್ಟೆಗೆ ಜವಳಿ ಕಾರ್ಯಾಗಾರ
ಜಾಗತಿಕ ಮಾರುಕಟ್ಟೆಗೆ ಜವಳಿ ಕಾರ್ಯಾಗಾರ
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ 2030ರ ವೇಳೆಗೆ ಜವಳಿ ರಫ್ತಿನಲ್ಲಿ 100 ಬಿಲಿಯನ್ ಗುರಿ, ಉದ್ಯೋಗ ಕಲ್ಪಿಸುವುದು ಹಾಗೂ ರೂಪಾಯಿ ಮೌಲ್ಯ ಸುಧಾರಣೆ ನಿಟ್ಟಿನಲ್ಲಿ ಜವಳಿ ಕ್ಷೇತ್ರವನ್ನು ನೋಡಬೇಕಿದೆ
  • ಅಮೆರಿಕದ ಜತೆಗೆ ಇತರೆ 40 ದೇಶಗಳಿಗೆ ರ್ತು ಮಾಡಲಾಗುತ್ತಿದೆ. ಉತ್ಪಾದಕರು ರ್ತು ಮಾನದಂಡಗಳನ್ನು ತಿಳಿದರೆ ಹೆಚ್ಚಿನ ವಹಿವಾಟು ನಡೆಸಲು ಅನುಕೂಲ
  • ರಾಜ್ಯದಲ್ಲಿ ಪ್ರಸ್ತುತ 23,961 ಕೋಟಿ ರೂ. ಜವಳಿ ವಹಿವಾಟು ನಡೆಸಲಾಗುತ್ತಿದೆ. 2030ರವೇಳೆಗೆ 75 ಸಾವಿರ ಕೋಟಿ ರೂ. ಗುರಿ
ಬೆಂಗಳೂರು: ದೇಶದಲ್ಲಿ ಜವಳಿ ರಫ್ತಿನಲ್ಲಿ ತಿರುಪ್ಪೂರು ಮತ್ತು ದೆಹಲಿ ಮೂರನೇ ಸ್ಥಾನದಲ್ಲಿ ಬೆಂಗಳೂರಿದ್ದು, ಇದನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಎ.ಬಿ. ಬಸವರಾಜು ತಿಳಿಸಿದರು.
ಕೆಂಪೇಗೌಡ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಕೈಮಗ್ಗ ಮತ್ತು ಜವಳಿ ಇಲಾಖೆಯು ‘ಜಾಗತಿಕ ಮಾರುಕಟ್ಟೆಗೆ ಜವಳಿ’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಆಂತರಿಕ ಸಲಹಾತ್ಮಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ 2030ರ ವೇಳೆಗೆ ಜವಳಿ ವಹಿವಾಟನ್ನು 100 ಬಿಲಿಯನ್ ಗುರಿ ಮುಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದೇ ವೇಳೆ ಉದ್ಯೋಗ ಕಲ್ಪಿಸುವುದು ಹಾಗೂ ರೂಪಾಯಿ ಮೌಲ್ಯ ಸುಧಾರಣೆ ನಿಟ್ಟಿನಲ್ಲಿ ಜವಳಿ ಕ್ಷೇತ್ರವನ್ನು ನೋಡಬೇಕಿದೆ ಎಂದರು.
ಜವಳಿ ರಫ್ತಿನಲ್ಲಿ ಬಾಂಗ್ಲಾದೇಶ, ವಿಯೇಟ್ನಾಂ ಸೇರಿ ಹಲವು ದೇಶಗಳು ಮುಂದಿವೆ. ಅಮೆರಿಕದ ಜತೆಗೆ ಇತರೆ 40 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಉತ್ಪಾದಕರು ರಫ್ತು ಮಾನದಂಡಗಳನ್ನು ತಿಳಿದರೆ ಹೆಚ್ಚಿನ ವಹಿವಾಟು ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.


ರಾಜ್ಯದಲ್ಲಿ 75 ಸಾವಿರ ಕೋಟಿ ರೂ. ಗುರಿ:

ಇಲಾಖೆಯ ದಕ್ಷಿಣ ವಲಯದ ಜಂಟಿ ನಿರ್ದೇಶಕ ಬಿ.ಆರ್. ಯೋಗೀಶ್ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ 23,961 ಕೋಟಿ ರೂ. ಜವಳಿ ವಹಿವಾಟು ನಡೆಸಲಾಗುತ್ತಿದೆ. 2030ರವೇಳೆಗೆ 75 ಸಾವಿರ ಕೋಟಿ ರೂ. ಗುರಿ ಹೊಂದಲಾಗಿದೆ. ಈ ಕಾರಣದಿಂದ ಆರಂಭದಲ್ಲಿ ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಅರಿವು ಕಾರ್ಯಾಗಾರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅರಿವು ಮೂಡಿಸಲಾಗುತ್ತದೆ ಎಂದರು.
ಈ ಮೂಲಕ ರಫ್ತು ವಹಿವಾಟು ನಡೆಸಲು ಅವಶ್ಯವಿರುವ ಕೌಶಲ, ತರಬೇತಿ, ಮಾಹಿತಿ, ಪ್ರಮಾಣಪತ್ರಗಳು ಮತ್ತು ವಹಿವಾಟು ಪ್ರಕ್ರಿಯೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಇಲಾಖೆಯ ವಿಟಿಪಿಸಿ ನಿರ್ದೇಶಕ ಆರ್. ರಮೇಶ್ ಮತ್ತು ಜಂಟಿ ನಿರ್ದೇಶಕ ಸುನೀಲ್‌ಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net