ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಒಂದು ದಿನದಲ್ಲಿ ಹೋಗಿ ಬರಲು ನಮ್ಮ ಬಡ ವಿದ್ಯಾರ್ಥಿಗಳಿಗೆ ಅದರಲ್ಲೂ ಮಹಿಳಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಚಡಚಣ, ಇಂಡಿ, ಸಿಂದಗಿ, ಆಲಮೇಲ ಹಾಗೂ ತಾಳಿಕೋಟಿ ನಗರಗಳಿಂದ ಬೆಳಗಾವಿಯು 300 ಕಿ.ಮೀ. ದೂರವಿದ್ದು, ಒಂದು ದಿನದಲ್ಲಿ ಮಹಾವಿದ್ಯಾಲಯದ ಕಾರ್ಯಗಳನ್ನು ಮುಗಿಸಿಕೊಂಡು ಬರಲು ಸಾಧ್ಯವಿಲ್ಲ. ಪ್ರಸ್ತುತ ಬೆಳಗಾವಿಯ ವಿಶ್ವವಿದ್ಯಾಲಯವು ಬೆಳಗಾವಿ ನಗರದ ಹೊರವಲಯದಲ್ಲಿದ್ದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಾಹನ ಸೌಲಭ್ಯದ ಕೊರತೆಯಿದೆ ಎಂದು ಹೇಳಿದರು. ಮಂಜುನಾಥ ಹಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೈಗ್ರೇಶನ್ ಪ್ರಮಾಣಪತ್ರ, ಮೂಲ ಅಂಕಪಟ್ಟಿಗಳು, ವರ್ಗಾವಣೆ ಪ್ರಮಾಣ ಪತ್ರ, ಘಟಿಕೋತ್ಸವ ಪ್ರಮಾಣಪತ್ರ ಇತರೆ ದಾಖಲೆಗಳು ಬೇಕಾದಲ್ಲಿ ಬೆಳಗಾವಿಗೆ ಹೋಗಿ ಬರುವ ಸಮಯ, ವೆಚ್ಚ ಅಧಿಕವಾಗುತ್ತದೆ. ಮಾತ್ರವಲ್ಲ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿಯೂ ಪ್ರಾಚಾರ್ಯರು ಪರೀಕ್ಷಾ ಕಾರ್ಯಕ್ಕೆ, ಮೌಲ್ಯಮಾಪನ ಕಾರ್ಯಕ್ಕೆ ತೆರಳುವ ಹಲವು ಸಿಬ್ಬಂದಿ ಖಿನ್ನತೆ ಅನುಭವಿಸಬೇಕಾಗುತ್ತದೆ ಎಂದರು.