

ಬೆಂಗಳೂರು : ಜ್ಯುವೆಲ್ಸ್ ಆಫ್ ಇಂಡಿಯಾ -2026ರ ಬೃಹತ್ ಆಭರಣ ಉತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ನ.1 (ಭಾನುವಾರ) ರವರೆಗೆ ನಡೆಯಲಿರುವ ಮೇಳಕ್ಕೆ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಚಾಲನೆ ನೀಡಿದರು.
ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಹಮ್ಮಿಕೊಂಡಿರುವ 27ನೇ ಆಭರಣ ಉತ್ಸವದಲ್ಲಿ ದೇಶದ 100ಕ್ಕೂ ಹೆಚ್ಚು ಪ್ರತಿಷ್ಠಿತ ಜ್ಯುವೆಲ್ಲರಿ ಬ್ರ್ಯಾಂಡ್‌ಗಳು ಆಗಮಿಸಿವೆ. ನವನವೀನ ಬಗೆಯ ಬಂಗಾರ, ವಜ್ರ ಮತ್ತು ಪ್ಲಾಟಿನಮ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದ್ದು, ಮುಂಬರುವ ದೀಪಾವಳಿ ಹಬ್ಬದ ಸಂಭ್ರಮವನ್ನು ಅಪರೂಪದ ಗ್ರಾಂಡ್ ಡಿಸೈನ್ ಆಭರಣಗಳ ಖರೀದಿಯೊಂದಿಗೆ ಆಚರಿಸಬಹುದು.
ಗಣಪತಿ ಪೂಜೆಯೊಂದಿಗೆ ಮೇಳಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ನಟಿ ಮೃಣಾಲ್ ಠಾಕೂರ್, ಭಾರತೀಯ ಆಭರಣಗಳ ವಿನ್ಯಾಸ, ಸಂಸ್ಕೃತಿ, ಇಲ್ಲಿನ ಕುಶಲಕರ್ಮಿಗಳ ಕೈಚಳಕ ವಿಶ್ವದಲ್ಲೇ ವಿಶಿಷ್ಟವಾಗಿದೆ. ಆಭರಣಗಳ ವಿನ್ಯಾಸದಲ್ಲಿ ಭಾರತದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಪ್ರತಿಬಿಂಬಿಸುತ್ತದೆ. ಅಂತಹ ವೈವಿಧ್ಯತೆಯ ಹಲವು ಪ್ರಕಾರಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ ಜ್ಯುವೆಲ್ಸ್ ಆಫ್ ಇಂಡಿಯಾ ಫೆಸ್ಟಿವಲ್‌ನಲ್ಲಿ ದೊರೆಯಲಿದೆ ಎಂದರು.
ಆಭರಣಗಳ ಬಗ್ಗೆ ತಮ್ಮ ಅಭಿರುಚಿ ಹೇಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳೆರಿಗೆ ಆಭರಣಗಳ ಮೇಲೆ ಬಹಳ ಪ್ರೀತಿ ಇರುತ್ತದೆ. ನಾನು ಕೂಡಾ ಮೊದಲು ಆಭರಣವನ್ನು ಆಯ್ಕೆ ಮಾಡಿಕೊಂಡು, ನಂತರ ಕಾರ್ಯಕ್ರಮಕ್ಕೆ ತಯಾರಾಗುತ್ತೇನೆ. ಜ್ಯುವೆಲ್ಸ್ ಆ್ ಇಂಡಿಯಾ ಉತ್ಸವದಲ್ಲಿ ಆಭರಣ ಖರೀದಿಸುವೆ ಎಂದರು. ಹಾಗೂ ಕಾರ್ಯಕ್ರಮದ ಭಾಗವಾಗಲು ಅವಕಾಶ ಮಾಡಿಕೊಟ್ಟ ಆಯೋಜಕರಿಗೆ ಧನ್ಯವಾದ ತಿಳಿಸಿದರು.
ಸಮಾರಂಭದಲ್ಲಿ ಜ್ಯುವೆಲ್ಸ್ ಉದ್ಯಮಿಗಳಾದ ಗಣೇಶ್, ಮಹಾವೀರ ಜೈನ್, ವಿಜಯ ಜೈನ್, ಪ್ರೀತಿ ಮೆಹ್ತಾ ಮತ್ತಿತರರಿದ್ದರು.