ರಬಕವಿ/ಬನಹಟ್ಟಿ: ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ 23 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಸರದಿ ಸತ್ಯಾಗ್ರಹ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಹೋರಾಟದ ಮುಂದುವರಿದ ಭಾಗವಾಗಿ ಶನಿವಾರ ಬನಹಟ್ಟಿಯಿಂದ ಆರಂಭಗೊಂಡಿರುವ ಬೃಹತ್ ಪಾದಯಾತ್ರೆ ಭಾನುವಾರ ಜಿಲ್ಲೆಯ ತುಳಸಿಗೇರಿ ತಲುಪಿ, ತುಳಸಿಗೇರಿ ರಾಮಾರೂಢ ಮಠದಲ್ಲಿ ವಾಸ್ತವ್ಯ ಹೂಡಿದೆ.
ಸೋಮವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲಾಡಳಿತ ಭವನದತ್ತ ಪಾದಯಾತ್ರೆ ಮುಂದುವರಿಯಲಿದ್ದು, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಹೋರಾಟಗಾರರು ಸಜ್ಜಾಗಿದ್ದಾರೆ.
ಪಾದಯಾತ್ರೆಯಲ್ಲಿ ನೂರಾರು ದ್ವಿಚಕ್ರ ವಾಹನಗಳು, ಕಾರುಗಳು, ಜೀಪುಗಳು ಸೇರಲಿದ್ದು, ಎರಡು ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.
ಆ. 31ರಂದು ಬೆಳಗ್ಗೆ ಪಾದಯಾತ್ರೆ ಬಾಗಲಕೋಟೆ ನಗರ ಪ್ರವೇಶಿಸಲಿದ್ದು, ಸುಮಾರು 11 ಗಂಟೆಗೆ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ತೆರಳಿ ಮುತ್ತಿಗೆ ಹಾಕಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಿಸಬೇಕೆಂಬ ಆಗ್ರಹದೊಂದಿಗೆ ಕಳೆದ 23 ದಿನಗಳಿಂದ ಚನ್ನಮ್ಮ ವೃತ್ತದಲ್ಲಿ ನಿರಂತರ ಸರದಿ ಸತ್ಯಾಗ್ರಹ ನಡೆಯುತ್ತಿದೆ. ದಿನದಿಂದ ದಿನಕ್ಕೆ ಹೋರಾಟದ ಸ್ವರೂಪ ಬದಲಾಗಿ ಪಾದಯಾತ್ರೆಯಾಗಿ ಪರಿವರ್ತನೆಗೊಂಡು ಜಿಲ್ಲಾ ಕೇಂದ್ರದತ್ತ ಸಾಗಿರುವುದು ಗಮನಾರ್ಹವಾಗಿದೆ.
ಒಂದು ಕಡೆ ಇಂದು ಕಲಾವಿದರ ಸಂಘ ಹಾಗೂ ಔಷಧ ವ್ಯಾಪಾರಸ್ಥರ ಸಂಘದಿಂದ ಬನಹಟ್ಟಿಯಲ್ಲಿ ನಿರಂತರ ಸತ್ಯಾಗ್ರಹ ನಡೆಯುತ್ತಿದ್ದರೆ, ಮತ್ತೊಂದೆಡೆ ಬಾಗಲಕೋಟೆ ಚಲೋ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯುತ್ತಿರುವುದು ಹೋರಾಟಕ್ಕೆ ಹೊಸ ಆಯಾಮ ನೀಡಿದೆ.
ಪ್ರಜಾಸೌಧ ಹೋರಾಟಕ್ಕೆ ಬನಹಟ್ಟಿ ಸುತ್ತಮುತ್ತಲಿನ ಗ್ರಾಮಗಳ ಬೆಂಬಲವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಸಂಗಿ, ಆಸ್ಕಿ, ಯಲ್ಲಟ್ಟಿ-ಬಂಡಿಗಣಿ, ಕುಲಹಳ್ಳಿ, ಜಗದಾಳ ಹಾಗೂ ನಾವಲಗಿ ಸೇರಿದಂತೆ ಹಲವು ಗ್ರಾಮಗಳ ಜನರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವುದರ ಜೊತೆಗೆ ಬಾಗಲಕೋಟೆ ಚಲೋ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಬೆಂಬಲವನ್ನು ಪ್ರದರ್ಶಿಸಿದ್ದಾರೆ.
ರಾಜೇಂದ್ರ ಭದ್ರಣ್ಣವರ, ಮಲ್ಲಿಕಾರ್ಜುನ ಬಾಣಕಾರ, ದಯಾನಂದ ಹೊರಟ್ಟಿ, ಪ್ರಶಾಂತ ಕೊಳಕಿ, ಈಶ್ವರ ಕಾಡದೇವರ, ಕುಮಾರ ಕಡಮ, ಮಾಳು ಹಿಪ್ಪರಗಿ, ಬುಡಾನಸಾಬ ಜಮಾದಾರ, ಸೋಮನಾಥ ಗೊಂಬಿ, ಸಂಜು ಶಿವಪೂಜಿ, ವಿಜಯ ರಾವಳ, ಗುರು ಪಾಟೀಲ, ಕುಬೇರ ಸಾರವಾಡ, ಮಲ್ಲಣ್ಣ ಬಾವಲತ್ತಿ ಸೇರಿ ಅನೇಕರು ಭಾಗವಹಿಸಿದ್ದಾರೆ.