Action should be taken against doctors who have been negligent in their duties.
Published on:
Copied
Follow Us
ಬಂಗಾರಪೇಟೆ: ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗುತ್ತಿದ್ದು, ಬಡ ರೈತರು, ಕೂಲಿ ಕಾರ್ಮಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಕರ್ತವ್ಯಲೋಪ ಎಸಗುತ್ತಿರುವ ವೈದ್ಯರ ವಿರುದ್ಧ ಕ್ರಮ ಕೈಗೊಂಡು ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕುವಂತೆ ತಾಲೂಕು ಆರೋಗ್ಯಾಧಿಕಾರಿ ಸುನಿಲ್ಕುಮಾರ್ ಹಾಗೂ ಆಡಳಿತ ವೈದ್ಯಾಧಿಕಾರಿ ಭಾರತಿಗೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದರೂ ವೈದ್ಯರು, ಸಿಬ್ಬಂದಿ ರ್ನಿಲಕ್ಷ$್ಯದಿಂದ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ಸಮರ್ಪಕವಾಗಿ ಪರೀಕ್ಷಿಸದೆ ಮಾತ್ರೆ ನೀಡಿ ಕಳುಹಿಸಲಾಗುತ್ತಿದೆ. ಹೆರಿಗೆ ಪ್ರಕರಣಗಳಲ್ಲಿಯೂ ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳು, ವೈದ್ಯಕಿಯ ಕಾಲೇಜುಗಳಿಗೆ ರವಾನಿಸುವ ಮೂಲಕ ಬಡ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಾಗದೆ ರೋಗಿಗಳು ಜೀವಾಪಾಯ ಎದುರಿಸುತ್ತಿದ್ದಾರೆ. ಗಡಿಭಾಗದ ಆರೋಗ್ಯ ಸೇವೆ ಹದಗೆಟ್ಟಿದ್ದು, ರೋಗಿಗಳನ್ನು ಆಟೋ, ದ್ವಿಚಕ್ರ ವಾಹನಗಳಲ್ಲಿ ಕಾಡು ಪ್ರದೇಶಗಳ ಮೂಲಕ ನಗರ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಪೂರೈಕೆಯಾಗುವ ಔಷಧ, ವೈದ್ಯಕಿಯ ಸಾಮಗ್ರಿ ದುರ್ಬಳಕೆ ನಡೆಯುತ್ತಿದೆ. ಕೆಲ ವೈದ್ಯರು ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳಿಗೆ ರೋಗಿಗಳನ್ನು ಕಳುಹಿಸುವ ಮೂಲಕ ಸರ್ಕಾರಿ ಸೇವೆಗೆ ಧಕ್ಕೆ ತರುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲೇ ಖಾಸಗಿ ಆಂಬುಲೆನ್ಸ್ಗಳ ಮೂಲಕ ರೋಗಿಗಳ ಶೋಷಣೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಎಚ್ಒ ಸುನಿಲ್ ಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ, ಗಡಿಭಾಗದ ಆರೋಗ್ಯ ಕೇಂದ್ರಗಳ ಕಾರ್ಯವೈಖರಿ ಪರಿಶೀಲಿಸಿ, ಕರ್ತವ್ಯಲೋಪ ಎಸಗುವ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.