ಸರ್ಕಾರದ ಮೇಲೆ ಒತ್ತಡ ಹೇರಲು ಅಧಿವೇಶನದಲ್ಲಿ ವಿಷಯ ಪ್ರಸ್ತಾಪ
ಹುಮನಾಬಾದ್: ಪಟ್ಟಣ ಹೊರವಲಯದ ಕೆಮಿಕಲ್ ಕಾರ್ಖಾನೆಗಳಲ್ಲಿ ನಿಯಮ ಉಲ್ಲಂಘನೆ ಕುರಿತು ಸರ್ಕಾರದ ಗಮನಕ್ಕೆ ತಂದು ತಪ್ಪಿತಸ್ಥ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರಂತರ ಒತ್ತಡ ಹೇರುತ್ತಿದ್ದೇನೆ. ಮುಂಬರುವ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಕೈಗಾರಿಕಾ ಘಟಕಗಳಿಂದ ಹೊರಬರುತ್ತಿರುವ ರಾಸಾಯನಿಕ ತ್ಯಾಜ್ಯದಿಂದ ಪರಿಸರ ಮತ್ತು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಮಾಣಿಕನಗರ, ಬಸತಂಪುರ, ಗಡವಂತಿ, ಮೊಳಕೇರಾ, ಹುಡಗಿ ಸೇರಿ ಹಲವೆಡೆ ಸಮಸ್ಯೆ ಕಾಣಿಸಿಕೊಂಡಿದೆ. ಇದರ ವ್ಯಾಪ್ತಿ ತಾಲೂಕಿನ ಇತರ ಭಾಗಕ್ಕೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ರಾಸಾಯನಿಕ ತ್ಯಾಜ್ಯದ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಈ ಹಿಂದೆಯೇ ಧ್ವನಿ ಎತ್ತಲಾಗಿದೆ. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೂ ಮನವಿ ಸಲ್ಲಿಸಿದ್ದು, ಅಧಿಕಾರಿಗಳ ತಂಡ ಕಳುಹಿಸಿ ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಕಾರ್ಖಾನೆಗಳಿಂದ ರಾಸಾಯನಿಕ ತ್ಯಾಜ್ಯ ಹರಿಸಿರುವುದಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದನ್ನು ಸಹಿಸದ ಕೆಲವರು ನನ್ನ ವರ್ಚಸ್ಸಿಗೆ ಧಕ್ಕೆ ತರಲು ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ. ಹಳ್ಳಕ್ಕೆ ತ್ಯಾಜ್ಯ ಹರಿಸಿರುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎಂದರು.
ಕೆಮಿಕಲ್ ಅಥವಾ ಟೈರ್ ಕಾರ್ಖಾನೆಗಳೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಂಡಿಲ್ಲ. ಮಾಜಿ ಸಚಿವ ರಾಜಶೇಖರ ಪಾಟೀಲ್ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಹೈದರಾಬಾದ್ನಲ್ಲಿ ರ್ನಿಬಂಧಕ್ಕೆ ಒಳಗಾದ ಹಲವು ಕಾರ್ಖಾನೆಗಳು ಹುಮನಾಬಾದ್ಗೆ ಬಂದಿವೆ. ಈ ಘಟಕಗಳಿಗೆ ಹಿಂದಿನ ಅವಧಿಯಲ್ಲಿ ಯಾವ ಆಧಾರದ ಮೇಲೆ ಅನುಮತಿ ನೀಡಲಾಯಿತು ಎಂಬುದನ್ನು ಸಂಬಂಧಿತರು ಸ್ಪಷ್ಟ್ಟಪಡಿಸಬೇಕು. ತಮ್ಮ ಅಧಿಕಾರಾವಧಿಯಲ್ಲಿ ಒಂದೂ ಟೈರ್ ಕಾರ್ಖಾನೆಗೆ ಅನುಮತಿ ನೀಡಿಲ್ಲ ಎಂದು ಡಾ.ಸಿದ್ದಲಿಂಗಪ್ಪ ಸ್ಪಷ್ಟಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅನೀಲ ಪಸರ್ಗಿ, ಬಸವರಾಜ ಆರ್ಯ, ಪ್ರಭಾಕರ ನಾಗರಾಳೆ, ವಿಶ್ವನಾಥ ಪಾಟೀಲ್ ಮಾಡಗೂಳ, ನಾಗಭೂಷಣ ಸಂಗಮ್, ಗಿರೀಶ ತುಂಬಾ, ಶಿವರಾಜ ಚೀನಕೇರಾ, ಮಾಣಿಕರಡ್ಡಿ ಇದ್ದರು.
ರಾಜಾರೋಷವಾಗಿ ಪಡಿತರ ಅಕ್ಕಿ ಸಾಗಣೆ
ಕ್ಷೇತ್ರದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಆರೋಪಿಸಿದರು. ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನದ ಛಾಯಾಚಿತ್ರ ಹಾಗೂ ನೋಂದಣಿ ಸಂಖ್ಯೆಯನ್ನು ಪಿಎಸ್ಐಗೆ ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಪಡಿತರ ಅಕ್ಕಿ ಅಕ್ರಮ ಸಾಗಣೆಗೆ ಕಡಿವಾಣ ಹಾಕಲು ಅಧಿಕಾರಿಗಳು ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.