ಜ್ಞಾನ ಸೇತುವೆಯಾಗಿ ಕೆಲಸ ಮಾಡಿ

ಯಾದಗಿರಿ ಸಮೀಪದ ಶ್ರೀರಂಗಪುರ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸುಂಕದ ಸಂವಾದ ನಡೆಸಿದರು. ಡಾ.ಅಮರೇಗೌಡ ಎ., ಡಾ.ಶ್ಯಾಮರಾವ್ ಕುಲಕರ್ಣಿ ಇತರರಿದ್ದರು.
ಯಾದಗಿರಿ ಸಮೀಪದ ಶ್ರೀರಂಗಪುರ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸುಂಕದ ಸಂವಾದ ನಡೆಸಿದರು. ಡಾ.ಅಮರೇಗೌಡ ಎ., ಡಾ.ಶ್ಯಾಮರಾವ್ ಕುಲಕರ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಶಿಕ್ಷಣ ನಿರ್ದೇಶಕ ಸುಂಕದ ಅಭಿಮತ
  • ಶ್ರೀರಂಗಪುರದಲ್ಲಿ ಕೃಷಿ ಕಾರ್ಯಾನುಭವ
ಯಾದಗಿರಿ: ಬರ ನಿರ್ವಹಣೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ರೈತರಿಗೆ ತಲುಪಿಸುವಲ್ಲಿ ವಿದ್ಯಾರ್ಥಿಗಳು ಜ್ಞಾನ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ರಾಯಚೂರು ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಗುರುರಾಜ ಸುಂಕದ ಹೇಳಿದರು.
ಇಲ್ಲಿನ ಶ್ರೀರಂಗಪುರ ಗ್ರಾಮದಲ್ಲಿ ಹಮ್ಮಿಕೊಂಡ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಬರ ಕೃಷಿ ಉತ್ಪಾದನೆಗೆ ಪ್ರಮುಖ ಸವಾಲಾಗಿದ್ದು, ಬರ ಪರಿಸ್ಥಿತಿ ವೈಜ್ಞಾನಿಕವಾಗಿ ನಿರ್ವಹಿಸುವ ತಂತ್ರಜ್ಞಾನ ರೈತರಿಗೆ ತಲುಪಿಸುವಲ್ಲಿ ಕೃಷಿ ವಿದ್ಯಾರ್ಥಿಗಳು ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದರು.
ಕೃಷಿ ಶಿಕ್ಷಣ ಕೇವಲ ತರಗತಿ ಮತ್ತು ಪ್ರಯೋಗಾಲಯಕ್ಕೆ ಸೀಮಿತವಾಗದೆ ರೈತರ ಹೊಲಗಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ಸಮನ್ವಯಗೊಳ್ಳಬೇಕು. ಬರ ಪರಿಸ್ಥಿತಿಯಲ್ಲಿ ಮಣ್ಣಿನ ತೇವಾಂಶ ಸಂರಕ್ಷಣೆ, ಮಳೆನೀರು ಕೊಯ್ಲು, ನೀರಿನ ಸಮರ್ಥ ಬಳಕೆ, ಬರ ಸಹಿಷ್ಣು ಬೆಳೆಗಳು ಮತ್ತು ತಳಿಗಳ ಆಯ್ಕೆ, ಸೂಕ್ತ ಬಿತ್ತನೆ ಸಮಯ, ಮಲ್ಚಿಂಗ್, ಬೆಳೆ ವೈಜ್ಞಾನಿಕರಣ ಹಾಗೂ ಹವಮಾನ ಆಧಾರಿತ ಕೃಷಿ ನಿರ್ವಹಣಾ ಕ್ರಮ ಅತ್ಯಂತ ಮಹತ್ವ ಪಡೆದಿವೆ ಎಂದು ಹೇಳಿದರು.
ಇಂತಹ ವೈಜ್ಞಾನಿಕ ಕ್ರಮ ಕುರಿತು ರೈತರಿಗೆ ಸಮಯೋಚಿತ ಮಾಹಿತಿ ಮತ್ತು ಪ್ರಾಯೋಗಿಕ ಮಾರ್ಗದರ್ಶನ ನೀಡುವ ಮೂಲಕ ಬೆಳೆ ನಷ್ಟ ಕಡಿಮೆ ಮಾಡಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ರೈತರು ಎದುರಿಸುತ್ತಿರುವ ಬರ, ಕೀಟ ಮತ್ತು ರೋಗ ಬಾಧೆ, ಮಣ್ಣಿನ ಫಲವತ್ತತೆ ನಿರ್ವಹಣೆ, ನೀರಿನ ಕೊರತೆ, ಪೋಷಕಾಂಶ ನಿರ್ವಹಣೆ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಕ್ಷೇತ್ರಮಟ್ಟದಲ್ಲಿ ಗುರುತಿಸಿ, ದಾಖಲಿಸಿ, ಅವುಗಳಿಗೆ ಸೂಕ್ತವಾದ ನಿರ್ವಹಣಾ ಕ್ರಮ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದರು.
ಭೀ.ಗುಡಿ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ) ಡಾ.ಅಮರೇಗೌಡ ಎ. ಮಾತನಾಡಿ, ವಿದ್ಯಾರ್ಥಿಗಳು ರೈತರ ಅಗತ್ಯ ಗುರುತಿಸಿ, ಸ್ಥಳೀಯ ಕೃಷಿ ಪರಿಸ್ಥಿತಿಗೆ ಅನುಗುಣವಾದ ತಂತ್ರಜ್ಞಾನಗಳ ಪ್ರಾಯೋಗಿಕ ಮಾಹಿತಿ ನೀಡಬೇಕು ಎಂದು ತಿಳಿಸಿದರು. ವಿಶೇಷವಾಗಿ ಬರ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಶಿಬಿರದ ಸಂಯೋಜಕ ಹಾಗೂ ಸಹಪ್ರಾಧ್ಯಾಪಕ ಡಾ.ಶ್ಯಾಮರಾವ್ ಕುಲಕರ್ಣಿಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಪ್ರಕಾಶ ಕುಚನೂರ, ಡಾ.ರುದ್ರಮೂರ್ತಿ, ಡಾ.ಪಂಪನಗೌಡ, ಡಾ.ಶಿವಪ್ಪ ಕರಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net