ಮಾಲೂರು: ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆಯನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ತಮಿಳುನಾಡಿನ ಮಧುರೈ ಜಿಲ್ಲೆಯ ಕಡಪಲೂರು ನಿವಾಸಿ ಮಧು (38) ಬಂಧಿತ. ತಾಲೂಕಿನ ಕೂರ್ನಹೊಸಹಳ್ಳಿಯ ಗಿರಿಜಮ್ಮ ಎಂಬುವರು ಇತ್ತೀಚೆಗೆ ಕೋಲಾರ ಎಸ್ಎನ್ಆರ್ ಆಸ್ಪತ್ರೆಗೆ ಹೋಗಿ ವಾಪಸ್ ಮನೆಗೆ ಬರುವಾಗ, ಕತ್ತಿನಲ್ಲಿದ್ದ 38 ಗ್ರಾಂ ಚಿನ್ನದ ಸರವನ್ನು ಅಪರಿಚಿತರು ಕದ್ದು ಪರಾರಿಯಾಗಿರುವುದಾಗಿ ಏ.31ರಂದು ಠಾಣೆಗೆ ದೂರು ನೀಡಿದ್ದರು.
ದೂರಿನ ತನಿಖೆಗೆ ಕೈಗೊಂಡಿರುವ ಪೊಲೀಸರು ಗಿರಿಜಮ್ಮ ಓಡಾಡಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದು, ಆರೋಪಿ ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದ, ಸುಮಾರು 6 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.
ವೃತ್ತ ನಿರೀಕ್ಷಕ ರಾಮಪ್ಪ ಬಿ.ಗುತ್ತೇರ್, ಪಿಎಸ್ಐ ಶಾಂತಮ್ಮ, ಎಎಸ್ಐಗಳಾದ ರಮೇಶ್ ಬಾಬು, ಮುನಿರಾಜು ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಶ್ಲಾಘಿಸಿದ್ದಾರೆ.