ಸಂಪಾದಕೀಯ: ಹೊಣೆಗಾರಿಕೆ ಅಗತ್ಯ

Accountability
Accountability
Published on
ಪಶ್ಚಿಮಘಟ್ಟಗಳ ಹಚ್ಚಹಸಿರಿನ ನಡುವೆ ಚಾರಣ ಮಾಡುವುದು ಒಂದು ರೋಮಾಂಚಕ ಅನುಭವ, ನಿಜ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಾಹಸ ಪ್ರವೃತ್ತಿ ಅಪಾಯಕಾರಿ ತಿರುವು ಪಡೆದುಕೊಳ್ಳುತ್ತಿದೆ. ಚಿಕ್ಕಮಗಳೂರಿನ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳ ಮೂಲದ ಯುವತಿಯರಿಬ್ಬರು ದಾರಿ ತಪ್ಪಿ ನಾಪತ್ತೆಯಾಗಿದ್ದು ಪ್ರವಾಸೋದ್ಯಮ ಮತ್ತು ಅರಣ್ಯ ನಿರ್ವಹಣಾ ವ್ಯವಸ್ಥೆಯಲ್ಲಿರುವ ಗಂಭೀರ ಲೋಪಗಳಿಗೆ ಕನ್ನಡಿ ಹಿಡಿದಿದೆ. ಪ್ರಕೃತಿಯ ಮಡಿಲಲ್ಲಿ ಸಂಭ್ರಮಿಸುವುದು ತಪ್ಪಲ್ಲ, ಆದರೆ ಆ ಸಂಭ್ರಮಕ್ಕೆ ಹೊಣೆಗಾರಿಕೆ, ಶಿಸ್ತು ಇಲ್ಲದಿದ್ದರೆ ಅದು ಪ್ರಾಣಸಂಕಟಕ್ಕೆ ಹಾದಿ ಮಾಡಿಕೊಡುತ್ತದೆ.
ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಚಾರಣ ಎಂಬುದು ಪ್ರಕೃತಿ ಪ್ರೇಮಕ್ಕೆ ಸೀಮಿತವಾಗಿಲ್ಲ. ರೀಲ್ಸ್ ಮತ್ತು ಫೋಟೋಗಳ ಮೂಲಕ ವೈಭವೀಕರಿಸಿಕೊಳ್ಳಲು ಅನೇಕರು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಅಪಾಯಕಾರಿ ಕಾಡುಗಳನ್ನು ಪ್ರವೇಶಿಸುತ್ತಿದ್ದಾರೆ. ಸ್ಥಳೀಯ ಭೌಗೋಳಿಕ ಪರಿಚಯ ಇಲ್ಲದೆ ನಡೆಸುವ ಇಂತಹ ಅಜಾಗರೂಕ ಸಾಹಸಗಳು ಚಾರಣಿಗರನ್ನು ಪ್ರಾಣಾಪಾಯಕ್ಕೆ ದೂಡುತ್ತಿವೆ. ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಸಿಲುಕಿ ನಂತರ ಸುರಕ್ಷಿತವಾಗಿ ನಗುಮುಖದೊಂದಿಗೆ ಪತ್ತೆಯಾಗುವುದು ಪವಾಡವೇ ಸರಿ, ಆದರೆ ಪ್ರತಿ ಬಾರಿಯೂ ಹೀಗೆ ಎಲ್ಲರಿಗೂ ಅದೃಷ್ಟ ಕೈಹಿಡಿಯುವುದಿಲ್ಲ.
ಒಬ್ಬ ವ್ಯಕ್ತಿ ಕಾಡಿನಲ್ಲಿ ನಾಪತ್ತೆಯಾದಾಗ ಅರಣ್ಯ ಇಲಾಖೆ, ಪೊಲೀಸ್ ಪಡೆ ಮತ್ತು ಸ್ಥಳೀಯ ಜನತೆ ನಡೆಸುವ ಶೋಧ ಕಾರ್ಯ ಸಣ್ಣದಲ್ಲ. ನೂರಾರು ಸಿಬ್ಬಂದಿ ಹಗಲೂರಾತ್ರಿ ದುಡಿಯಬೇಕಾಗುತ್ತದೆ. ಚಾರ ಣಿಗರ ಬೇಜವಾಬ್ದಾರಿಯಿಂದಾಗಿ ಸರ್ಕಾರದ ಹಣ ಮತ್ತು ಮಾನವ ಸಂಪನ್ಮೂಲ ವ್ಯರ್ಥವಾಗುತ್ತದೆ. ಒಬ್ಬರ ಸಾಹಸದ ಹುಚ್ಚಾಟಕ್ಕೆ ಇಡೀ ಆಡಳಿತ ಯಂತ್ರ ಬೆಲೆ ತೆರಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ತಕ್ಷಣವೇ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ಚಾರಣಿಗರು ಕಾಡಿನೊಳಗೆ ಪ್ರವೇಶಿಸುವಾಗ ಅವರ ಜತೆ ಅರಣ್ಯ ಇಲಾಖೆಯಿಂದ ಮಾನ್ಯತೆ ಪಡೆದ ಮಾರ್ಗದರ್ಶಕರು (ಗೈಡ್ಸ್) ಇರುವುದನ್ನು ಕಡ್ಡಾಯಗೊಳಿಸಬೇಕು. ಇದು ಚಾರಣಿಗರು ದಾರಿ ತಪ್ಪುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಚಾರಣಕ್ಕೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯ ಪೂರ್ಣ ವಿವರ, ಸಂಪರ್ಕ ಸಂಖ್ಯೆ ಮತ್ತು ಆರೋಗ್ಯದ ಮಾಹಿತಿ ಸ್ಥಳೀಯ ಇಲಾಖೆ ಬಳಿ ಇರಬೇಕು. ಸಾಧ್ಯವಾದರೆ, ದಟ್ಟ ಅರಣ್ಯದಲ್ಲಿ ಚಾರಣಿಗರಿಗೆ ಜಿಪಿಎಸ್ ಆಧಾರಿತ ರೇಡಿಯೋ ಟ್ರಾ್ಯಕರ್​ಗಳನ್ನು ಒದಗಿಸಬೇಕು. ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಗುಪ್ತ ಹಾದಿಗಳ ಮೂಲಕ ಕಾಡು ಸೇರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಭಾರಿ ಮೊತ್ತದ ದಂಡ ವಿಧಿಸಬೇಕು. ಆಗ ಮಾತ್ರ ನಿಯಮ ಉಲ್ಲಂಘಿಸುವವರಿಗೆ ಭಯವಿರುತ್ತದೆ. ಮಳೆ, ಅತಿಯಾದ ಮಂಜು ಇರುವಾಗ ಚಾರಣಕ್ಕೆ ಸಂಪೂರ್ಣ ನಿಷೇಧ ಹೇರಬೇಕು.
ಕೇವಲ ಕಾನೂನುಗಳಿಂದ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಚಾರಣಿಗರಲ್ಲೂ ಜವಾಬ್ದಾರಿ ಇರಬೇಕು. ಚಾರಣ ಎಂಬುದು ಮೋಜಲ್ಲ, ಪ್ರಕೃತಿಯೊಂದಿಗಿನ ಶಿಸ್ತಿನ ಒಡನಾಟ. ಸೂಕ್ತ ಉಡುಪು, ಅವಶ್ಯಕ ಔಷಧಗಳು, ನೀರು, ಆಹಾರದ ಸಿದ್ಧತೆ ಇರಬೇಕು. ಅರಣ್ಯದ ಗಡಿಯನ್ನು ಮೀರುವ ಮೊದಲು ಸುರಕ್ಷತೆ ಬಗ್ಗೆ ಯೋಚಿಸಬೇಕು. ಪ್ರಕೃತಿಯನ್ನು ಆಸ್ವಾದಿಸುವುದು ನಮ್ಮ ಹಕ್ಕು ನಿಜ, ಆದರೆ ನಮ್ಮ ಪ್ರಾಣಕ್ಕೆ ತೊಂದರೆ ಆಗದಂತೆ ಎಚ್ಚರದಿಂದ ವರ್ತಿಸುವುದು ಕೂಡ ನಮ್ಮ ಕರ್ತವ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net