2 ಕೋಟಿ ವಿಮೆ ದುರಾಸೆಗಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ; ವಾಟ್ಸಾಪ್ ಸ್ಟೇಟಸ್​ನಿಂದ ಕರಾಳ ಸತ್ಯ ಬಯಲು..Belagavi

Belagavi Soldier Murder Case
Belagavi Soldier Murder Case
Published on

ಪ್ರಮುಖ ಮುಖ್ಯಾಂಶಗಳು

  • 2 ಕೋಟಿ ಅಪಘಾತದ ವಿಮೆಗಾಗಿ ಮಾಜಿ ಸೈನಿಕನನ್ನು ಕೊಂದ ಪತ್ನಿ
  • ಫೋರೆನ್ಸಿಕ್ ವರದಿ ಬದಲಿಸಲು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪತ್ನಿ
  • ಮಾಜಿ ಸೈನಿಕನ ಪತ್ನಿ ಸುಮಾ ಸೇರಿದಂರೆ 9 ಜನರ ಬಂಧನ
ಬೆಳಗಾವಿ: ಪತಿ ಅಪಘಾತದಲ್ಲಿ ಮೃತಪಟ್ಟರೆ 2 ಕೋಟಿ ಇನ್ಶುರೆನ್ಸ್​ ಹಣ ಸಿಗುವ ದುರಾಸೆಯಲ್ಲಿ, ಪ್ರಿಯಕರನ  ಜೊತೆಗೂಡಿ ಮಾಜಿ ಯೋಧನನ್ನೇ ಹತ್ಯೆಗೈದ ಭೀಕರ ಘಟನೆ  ಬೆಳಗಾವಿಯ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದಿದೆ. ಮಾಜಿ ಸೈನಿಕನ  ಪತ್ನಿ ಸೇರಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ಯಾರ್ಯಾರು ಅರೆಸ್ಟ್​?

ಮೃತ ಮಾಜಿ ಸೈನಿಕ ಸಂದೀಪ ಕಲಗೌಡ ಎಂದು ಗುರುತಿಸಲಾಗಿದೆ. ಆತನ ಪತ್ನಿ ಸುಮಾ, ಪ್ರಿಯಕರ ಪುಂಡಲೀಕರ ಡೊಂಬರ್​,  ಆರ್​​ಎಂಪಿ ಡಾಕ್ಟರ್​ ಬಸವರಾಜ ಭಸ್ಮೆ, ಬೆಳಗಾವಿ ಕಮಿಷನ‌ರ್ ಕಚೇರಿ ಎಫ್‌ಡಿಎ ಅಶೋಕ ಗುಜನಾಳ, ಎಫ್‌ಎಸ್ಎಲ್ ಪ್ರಯೋಗಾಲಯದ ಗುಮಾಸ್ತ ಅಪ್ಪಾಸಾಹೇಬ ನಾಯಿಕ, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ ಅಡವಿಸ್ವಾಮಿಮಠ, ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿ.ಎನ್. ನಾಗರಾಜ, ಪುಂಡಲೀಕ ಸ್ನೇಹಿತರಾದ ಸಚಿನ್ ಪೋಲಾರ ರಾಹುಲ್ ಜೋಗಿ ಅವರನ್ನು ಬಂಧಿಸಲಾಗಿದೆ.

ಏನಿದು ಘಟನೆ?

ಮಾರ್ಚ್​​13ರಂದು ಬೈಕ್​ನಿಂದ ಬಿದ್ದು ಗಾಯಗೊಂಡಿದ್ದರು. ಘಟಪ್ರಭಾದ ಜಜೆ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಪತ್ನಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಸಲೈನ್​ ಬಾಟಲಿಯಲ್ಲಿ ವಿಷ ಬೆರಸಿ, ನಿದ್ದೆ ಮಾತ್ರೆ ಕೊಟ್ಟಿದ್ದರು. ಇದರಿಂದಾಗಿ ಮಾರ್ಚ್​​ 15ರಂದು ಸಂದೀಪ ಮೃತಪಟ್ಟರು. 
ಬೈಕ್​ನಿಂದ ಬಿದ್ದಿದ್ದರು ಅವರಿಗೆ ಗಂಭೀರ ಗಾಯವಾಗಿರಲಿಲ್ಲ.  ಹೀಗಾಗಿ ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್​ ಮಾಡಲುನಿರ್ಧರಿಸಿದ್ದ  ವೈದ್ಯರಿಗೆ ಅನುಮಾನ ಹುಟ್ಟಿಕೊಂಡಿತ್ತು.  ಅಪಘಾತದಿಂದ ಪತಿಗೆ ಆತಂಕ ಉಂಟಾಗಿ ಮೃತಪಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. 

ಹೃದಯಾಘಾತ ಎಂದು ಕತೆ

ಸಾವಿಗೆ ಕಾರಣ ಹೃದಯಾಘಾತ ಎಂದು ದಾಖಲಿಸಲಾಗಿತ್ತು. ಬಿಐಎಂಎಸ್  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗಲೂ, ಪ್ರಾಥಮಿಕ ವಿಧಿವಿಜ್ಞಾನ ವರದಿಯಲ್ಲಿ ಯಾವುದೇ ವಿಷದ ಅಂಶ ಪತ್ತೆಯಾಗಿಲ್ಲ, ಇದು ಕಾರ್ಡಿಯಾಕ್ ಅರೆಸ್ಟ್‌ನಿಂದ ಸಂಭವಿಸಿದ ಸಾವು ಎಂದೇ ಉಲ್ಲೇಖಿಸಲಾಗಿತ್ತು.

ಸಂಶಯ ಹುಟ್ಟಿಸಿದ  ಸ್ಟೇಟಸ್

ಸಂದೀಪ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ ಮತ್ತು ಅವರು ಆರೋಗ್ಯವಂತರಾಗಿದ್ದರು. ಹೀಗಿರುವಾಗ ಹಠಾತ್ ಹೃದಯಾಘಾತ ಸಂಭವಿಸಿದ್ದು ಹೇಗೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿತ್ತು. ಈ ನಡುವೆ, ಸುಮಾಳ ಪ್ರೇಮಿ ಪುಂಡಲೀಕ ದೊಂಬರ ಜೊತೆ ಸಣ್ಣ ತಕರಾರು ಉಂಟಾಗಿತ್ತು, ಇದೇ ಸಿಟ್ಟಿನಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿ ಇದ್ದಕ್ಕಿದ್ದಂತೆ ಹೇಗೆ ಸತ್ತರು?  ಎಂದು ಪ್ರಶ್ನಿಸುವ ಮೂಲಕ ತನಗೆ ಈ ಕೇಸ್‌ನ ಒಳಗಿನ ವಿಷಯಗಳು ತಿಳಿದಿವೆ ಎಂಬಂತೆ ಆತ ಸ್ಟೇಟಸ್ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ಆತನನ್ನು ಸ್ಟೇಷನ್​ಗೆ ಕರೆಸಿ ವಿಚಾರಣೆ ನಡೆಸಿದಾಗ ಇಬ್ಬರ ಕರಾಳ ಕೃತ್ಯದ ಸಂಚು ಬಯಲಾಗಿದೆ.
ಪುಂಡಲೀಕ ದೊಂಬರ ಮತ್ತು ಮೃತ ಸಂದೀಪ್ ಮಂಜರಗಿ ಮುಂಚಿನಿಂದಲೂ ಪರಿಚಿತರು ಹಾಗೂ ಇಬ್ಬರೂ ಸೇರಿ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದ್ದರು. ಈ ಅವಧಿಯಲ್ಲಿ ಸಂದೀಪ್ ಪತ್ನಿ ಸುಮಾ ಮತ್ತು ಪುಂಡಲೀಕ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ತನಿಖೆಯ ವೇಳೆ ಸಂದೀಪ್ ಹೆಸರಿನಲ್ಲಿ ಮೂರು ಬೇರೆ ಬೇರೆ ಕಂಪನಿಗಳಿಂದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ವಿಮಾ ಪಾಲಿಸಿಗಳನ್ನು ಮಾಡಿಸಿರುವುದು ಬೆಳಕಿಗೆ ಬಂದಿದೆ. ಈ ಭಾರಿ ಮೊತ್ತದ ಇನ್ಶೂರೆನ್ಸ್ ಹಣವನ್ನು ಪಡೆಯಲು ಮತ್ತು ತಮ್ಮ ದಾರಿಗೆ ಅಡ್ಡಲಾಗಿದ್ದ ಸಂದೀಪ್‌ನನ್ನು ಮುಗಿಸಲು ಇವರಿಬ್ಬರು ಪ್ಲಾನ್ ಮಾಡಿದ್ದರು.

ಏನೆಲ್ಲ ವಶಕ್ಕೆ?

 ಮೆಡಿಕಲ್ ಮತ್ತು ವಿಧಿವಿಜ್ಞಾನ ದಾಖಲೆಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿತ್ತು. ಆಸ್ಪತ್ರೆ ಸಿಬ್ಬಂದಿ, ಲ್ಯಾಬೊರೇಟರಿ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರು ಸೇರಿ ಈ ಸಾವನ್ನು ನೈಸರ್ಗಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಿಷದ ಅಂಶ ಬರದಂತೆ ತಡೆಯಲು ಫೋರೆನ್ಸಿಕ್ ಲ್ಯಾಬ್ ಸಿಬ್ಬಂದಿಗೆ 3 ಲಕ್ಷಕ್ಕೂ ಅಧಿಕ ರೂಪಾಯಿ ಹಣವನ್ನು ಲಂಚವಾಗಿ ನೀಡಲಾಗಿತ್ತು. ಪೊಲೀಸರು ಸದ್ಯ ಘಟನಾ ಸ್ಥಳದಿಂದ ವಿಷದ ಬಾಟಲಿಗಳು, ಸಿರಿಂಜ್‌ಗಳು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net