ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ : ಪೆನ್ಸಿಂಗ್‌ಗೆ ಅಪ್ಪಳಿಸಿದ ಬಸ್, ನಾಲ್ವರು ಸ್ಥಳದಲ್ಲೇ ಸಾವು! | Accident

Accident
Accident
Published on
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತಗಳ ಸರಣಿ(Accident) ಮುಂದುವರಿದಿದ್ದು, ಸೋಮವಾರ (ಮಾರ್ಚ್ 23) ಬೆಳ್ಳಂಬೆಳಗ್ಗೆ ಸಂಭವಿಸಿದ ದಾರುಣ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಬಳಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಫೆನ್ಸಿಂಗ್‌ಗೆ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಕೇರಳದ ಕೋಝಿಕ್ಕೋಡ್ ನಿವಾಸಿ ಮೊಹಮ್ಮದ್ ಫರಾನ್ (22), ಸುಲ್ಫಿ (45),ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ರಶೀದ್ (45) ಮತ್ತು ಬೆಂಗಳೂರಿನ ಆಡುಗೋಡಿಯ ಅಣ್ಣೆಪಾಳ್ಯದ ನಿವಾಸಿ ಸಾಕೇರ್ ಎಂಬುವರು ಸಾವನ್ನಪ್ಪಿದ್ದಾರೆ.
ಕೇರಳದಿಂದ ಬೆಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್, ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿದೆ. ಚಾಲಕನಿಗೆ ನಿದ್ರೆ ಮಂಪು ಆವರಿಸಿದ್ದೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ವೇಗವಾಗಿ ಬಂದ ಬಸ್ ರಸ್ತೆ ಬದಿಯ ಸುರಕ್ಷತಾ ತಡೆಗೋಡೆಗೆ (Fencing) ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದ ಪ್ರಯಾಣಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಕ್ರೇನ್ ಮೂಲಕ ಬಸ್ಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net