ಮೈಸೂರು: ಪ್ರಸ್ತಕ ಸಾಲಿನ ದಸರಾ ಮಹೋತ್ಸವದಲ್ಲಿ ಮಾಜಿ ಅಂಬಾರಿ ಆನೆ ಅಭಿಮನ್ಯು ಭಾಗಿಯಾಗಲಿದ್ದು, ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಲಿದೆ. ದಸರಾಕ್ಕೂ 15 ದಿನ ಮುನ್ನ ಮೈಸೂರಿಗೆ ಬರಲಿದೆ.
ವಯೋನಿವೃತ್ತಿಯಿಂದಾಗಿ ದಸರಾ ಗಜಪಡೆಯಲ್ಲಿ ಸ್ಥಾನ ಕಳೆದುಕೊಂಡಿದ್ದ ಅಭಿಮನ್ಯು ಆನೆಯನ್ನು ನಿಶಾನೆ ಆನೆಯಾಗಿ ಕರೆತರಲು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಅನುಮತಿ ನೀಡಿದ್ದಾರೆ. ಉಭಯ ಪ್ರಕ್ರಿಯೆ ಶುಕ್ರವಾರವೊಂದೇ ದಿನದಲ್ಲೇ ಪೂರ್ಣಗೊಂಡಿವೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವದಿಂದ ನಿವೃತ್ತಿ ನೆಪದಲ್ಲಿ ಅರಣ್ಯ ಇಲಾಖೆಯು ಕೂಂಬಿಂಗ್ ಸ್ಟಾರ್, ಏಕೆ-47 ಖ್ಯಾತಿಯ ಅಭಿಮನ್ಯು ಆನೆಯನ್ನು ಕೈಬಿಟ್ಟಿತ್ತು. ಅಂಬಾರಿ ಹೊತ್ತ ಅನುಭವಿ ಆನೆಯನ್ನು ಜಂಬೂಸವಾರಿ ಮೆರವಣಿಗೆಯ ಮುಂಚೂಣಿಯಲ್ಲಿ ನಿಶಾನೆ ಆನೆಯಾಗಿ ಕರೆದೊಯ್ದು ಗೌರವ ಸಮರ್ಪಿಸುವ ಪದ್ಧತಿ ಇತ್ತು. ಆದರೆ, ಈ ಬಾರಿ ಅಭಿಮನ್ಯು ಆನೆಯನ್ನು ಆಯ್ಕೆ ಮಾಡದೆ ಆನೆ ಶಿಬಿರದಲ್ಲೇ ಇರಿಸಲಾಗಿತ್ತು.
ಅರಣ್ಯ ಇಲಾಖೆಯ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಭಿಮನ್ಯು ಆನೆಗೆ ಗಜಪಯಣದ ಸಂದರ್ಭದಲ್ಲಿ ಬೀಳ್ಕೊಡುಗೆ ನೀಡಿ ವಾಪಸ್ ಕಳುಹಿಸಿತ್ತು.
ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಒತ್ತಾಯ ಕೇಳಿ ಬಂದಿದ್ದು, ಮೈಸೂರಲ್ಲಿ ಅಭಿಮನ್ಯು ಆನೆಯನ್ನು ಕರೆಸುವಂತೆ ಒತ್ತಾಯ ಹೆಚ್ಚಿದ್ದವು.
.
ಆದೇಶ ಪತ್ರದಲ್ಲಿ ಏನಿದೆ...?
‘ಜಂಬೂ ಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆಯನ್ನು ನಿಶಾನೆ ಆನೆಯಾಗಿ ಮಾತ್ರ ಭಾಗವಹಿಸಲು ವಿಶೇಷ ಅನುಮತಿ ನೀಡಲಾಗಿದೆ. ಇದಕ್ಕೆ ಯಾವುದೇ ಕಠಿಣ ಕೆಲಸ ನೀಡುವಂತಿಲ್ಲ. ದೀರ್ಘಕಾಲದ ಅಭ್ಯಾಸಕ್ಕೂ ಒಳಪಡಿಸುವಂತಿಲ್ಲ.
ದಸರಾಕ್ಕಿಂತ 15 ದಿನದ ಮುನ್ನ ಜಂಬೂ ಸವಾರಿ ಅಭ್ಯಾಸಕ್ಕಾಗಿ ಈ ಆನೆಯನ್ನು ಮೈಸೂರು ಅರಮನೆಗೆ ಕರೆತರಬೇಕು. ದಸರಾ ಮುಗಿದ ಬಳಿಕ ಮರಳಿ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಬೇಕು. ಭವಿಷ್ಯದಲ್ಲಿ ಯಾವುದೇ ಕೆಲಸಕ್ಕೂ ನಿಯೋಜಿಸತಕ್ಕದ್ದಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಭಿಮನ್ಯು ಆರೋಗ್ಯ ತೃಪ್ತಿಕರವಾಗಿದೆ. ಆರೋಗ್ಯ ಕಾರ್ಡ್‌ನಲ್ಲಿ ನಮೂದಿಸಿರುವ ವಿವರಗಳು ಸರಿ ಇದೆ ಎಂದು ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿ ನೀಡಿದ್ದಾರೆ.
ಆರು ಬಾರಿ ಅಂಬಾರಿ ಹೊತ್ತಿರುವ ಅಭಿಮನ್ಯು
ಕಳೆದ ವಿಜಯದಶಮಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆ 6ನೇ ಬಾರಿಗೆ ಅಂಬಾರಿಯನ್ನು ಯಶಸ್ಸಿಯಾಗಿ ಹೊತ್ತು ಸೈ ಎನಿಸಿಕೊಂಡಿತ್ತು. ಇದರ ಮೇಲೆ ಜನರು, ಅರಣ್ಯ ಇಲಾಖೆಯವರು ಇಟ್ಟಿದ್ದ ನಂಬಿಕೆ ಉಳಿಸಿಕೊಂಡು ಮೆಚ್ಚುಗೆ ಪಡೆದುಕೊಂಡಿತ್ತು. ಎಲ್ಲರಿಗೂ ಇಷ್ಟವಾಗಿರುವ ಅಭಿಮನ್ಯು ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿಯಾಗಿದ್ದು, ಹೊಸ ಆನೆಯನ್ನು ಅಂಬಾರಿ ಹೊರಲು ಸಜ್ಜುಗೊಳಿಸಬೇಕಾದ ಅನಿವಾರ್ಯ ಇದೆ.
ಅಭಿಮನ್ಯು ಆನೆ 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದರ ವಿಶೇಷತೆ ಎಂದರೆ ಕೇವಲ ಪಳಗಿದ ಆನೆ ಮಾತ್ರವಲ್ಲ, ಇತರ ಕಾಡಾನೆ, ಹುಲಿ ಸೆರೆಹಿಡಿಯುವ, ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಶಕ್ತಿಶಾಲಿ ಸಾಮರ್ಥ್ಯ ಹೊಂದಿದೆ.
ಅಪಾರ ಅನುಭವ ಗಳಿಸಿರುವ ಈ ಆನೆ, ಈ ವರೆಗೆ 140-150 ಕಾಡಾನೆಗಳು ಮತ್ತು 40-50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದೆ.
2012ರಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದೆ. 2015ರ ವರೆಗೆ ವಾದ್ಯಗೋಷ್ಠಿಯ ಗಾಡಿಯನ್ನು ಎಳೆಯುವ ಪ್ರಮುಖ ಜವಾಬ್ದಾರಿ ನಿಭಾಯಿಸಿದೆ. 2020ರಿಂದ ಅಂಬಾರಿ ಹೊರುವ ಗೌರವ ಇದಕ್ಕೆ ದೊರೆತಿತ್ತು.