ಉದ್ಘಾಟನೆ ಭಾಗ್ಯ ಕಾಣದ ಪಟ್ಟಣದ ಶೌಚಗೃಹ

ಗುರುಮಠಕಲ್​ ಪಟ್ಟಣದ ಆಸ್ಪತ್ರೆ ರಸ್ತೆಯಲ್ಲಿರುವ ಉದ್ಘಾಟನೆ ಕಾಣದ ಸಾರ್ವಜನಿಕ ಶೌಚಗೃಹ.
ಗುರುಮಠಕಲ್​ ಪಟ್ಟಣದ ಆಸ್ಪತ್ರೆ ರಸ್ತೆಯಲ್ಲಿರುವ ಉದ್ಘಾಟನೆ ಕಾಣದ ಸಾರ್ವಜನಿಕ ಶೌಚಗೃಹ.
Published on
ಗುರುಮಠಕಲ್​: ಎಲ್ಲೆಡೆ ಶೌಚಗೃಹ ನಿರ್ಮಾಣದ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಆದರೆ ಪುರಸಭೆ ಯೋಜನೆಯೊಂದರಲ್ಲಿ ಸುಮಾರು 24 ಲಕ್ಷಕ್ಕೂ ಹೆಚ್ಚು ರೂ. ಖರ್ಚು ಮಾಡಿ ಶೌಚಗೃ ನಿರ್ಮಿಸಿ ವರ್ಷ ಕಳೆಯುತ್ತ ಬಂದರೂ ಉದ್ಘಾಟನೆ ಮಾತ್ರ ಇನ್ನೂ ಕಂಡಿಲ್ಲ.
ಸಾರ್ವಜನಿಕರು ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಟ್ಟಣದ 23 ವಾರ್ಡ್​ ಲ್ಮನಗರ ಬಡಾವಣೆಯಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಶೌಚಗೃಹ ಬಳಕೆಗೆ ಬರುವ ಮುನ್ನವೇ ಅನಾಥವಾಗಿದೆ. ಶೌಚಗೃಹಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಹೀಗಾಗಿ, ಅದಕ್ಕಿನ್ನೂ ಉದ್ಘಾಟನೆ ಭಾಗ್ಯ ಕೂಡ ದೊರೆತ್ತಿಲ್ಲ. ಶೌಚಗೃಹ ನಿರ್ಮಾಣ ಮಾಡಿ ಹಾಗೆ ಬೀಡಲಾಗಿದೆ. ಕಾಟಚಾರಕ್ಕೆ ಎನ್ನುವಂತೆ ಇಲ್ಲಿ ಶೌಚಗೃಹ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಪುರಭವನೆಗಾಗಿ ಅಂದಾಜು ರೂ.1ಕೋಟಿ ವೆಚ್ಚದಲ್ಲಿ ಹಳೆಯ ಪುರಭವನ ದುರಸ್ಥಿಗೊಳಿಸಿ, ಅದರ ಗೊಡೆಗೆ ಅಂಟಿಕೊಂಡು ಸಾರ್ವಜನಿಕ ಶೌಚಗೃಹ ತರಾತುರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಶೌಚಗೃಹ ಹತ್ತಿರ ನಾಡಕಚೇರಿ, ಅದೇ ರಸ್ತೆಯಲ್ಲಿ ಸಮುದಾಯ ಸರ್ಕಾರಿ ಆಸ್ಪತ್ರೆ ಇದೆ. ನೂರಾರು ಜನರು, ರೈತರು, ರೋಗಿಗಳು ಸಂಚಾರಿಸುತ್ತಿದ್ದು, ಅವರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎನ್ನಲಾಗಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಇದ್ಯಾವುದೂ ಕಾಣುತ್ತಿಲ್ಲ. ಪಟ್ಟಣದಲ್ಲಿ ಬೆರಳೆಣೆಕೆಯಷ್ಟು ಸಾರ್ವಜನಿಕ ಶೌಚಗೃಹಗಳಿವೆ. ಅವು ಕೂಡ ನಿರಪಯುಕ್ತವಾಗಿವೆ. ಶೌಚಗೃಹ ನಿರ್ಮಾಣ ಮಾಡುವುದರ ಜತೆಗೆ ಸಮರ್ಪಕವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಾಗಲೇ ಹಣ ಸದ್ಬಳಕೆಯಾದಂತಾಗುತ್ತದೆ. ಶೌಚಗೃಹವನ್ನು ಜನಪ್ರತಿನಿಧಿಗಳು ಉದ್ಘಾಟನೆ ಮಾಡಬೇಕು ಎಂದೇನಿಲ್ಲ ಸಮರ್ಪಕ ನೀರಿನ ವ್ಯವಸ್ಥೆ ಮಾಡಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಲಿ ಆಗ ನಿರ್ಮಾಣ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎನ್ನುವುದು ಸ್ಥಳಿಯರ ಮಾತು.
"

ಶೌಚಗೃಹ ನಿರ್ಮಾಣವಾದರೂ ನಮ್ಮ ಪುರಸಭೆಗೆ ಇನ್ನೂ ಹಸ್ತಾಂತರ ಆಗಿಲ್ಲ. ನೀರಿನ ಸಮಸ್ಯೆಯಿಂದ ಉದ್ಘಾಟನೆ ಆಗಿಲ್ಲ. ಕೊಳವೆಬಾವಿ ಹಾಕಿಸಿ ನೀರಿನ ವ್ಯವಸ್ಥೆ ಮಾಡಿ, ಜನರಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತೇನೆ.

— > ಶರಣಪ್ಪ ಮಡಿವಾಳ ಮುಖ್ಯಾಧಿಕಾರಿ ಪುರಸಭೆ ಗುರುಮಠಕಲ್​


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net