ರಾಷ್ಟ್ರದಲ್ಲಿಯೆ ದಾಖಲೆ ಪ್ರಮಾಣದಲ್ಲಿ 40 ಸಾವಿರ ಮಾಹಿತಿ ಹಕ್ಕು ಪ್ರಕರಣ ಇತ್ಯರ್ಥ : ಬಿ.ವೆಂಕಟ್ ಸಿಂಗ್

,
,
Published on
ಕಲಬುರಗಿ: ಕರ್ನಾಟಕ ಮಾಹಿತಿ ಹಕ್ಕು ಆಯೋಗವು ಕಳೆದ ಒಂದು ವರ್ಷದಲ್ಲಿ ರಾಷ್ಟ್ರದಲ್ಲಿಯೇ ದಾಖಲೆ ಪ್ರಮಾಣದಲ್ಲಿ 40 ಸಾವಿರ ಆರ್.ಟಿ.ಐ ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥ ಮಾಡಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್ ಸಿಂಗ್ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಆಯೋಗ ಕಲಬುರಗಿ ಪೀಠ ಮತ್ತು ಜಿಲ್ಲಾಡಳಿತ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ-ತಾಲೂಕು ಮತ್ತು ಗ್ರಾಮ ಪಂಚಾಯತ್ ಪಿ.ಡಿ.ಓ ಗಳಿಗೆ ಆಯೋಜಿಸಿದ ಮಾಹಿತಿ ಹಕ್ಕು ಕಾಯ್ದೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಆಯೋಗ ಬದ್ದವಾಗಿದೆ. ಇನ್ನು ಕಳೆದ ಅಕ್ಟೋಬರ್ ನಲ್ಲಿ ತಾವು ಸೇರಿದಂತೆ ಆಯೋಗಕ್ಕೆ ಹೊಸದಾಗಿ ಆಯುಕ್ತರ ನೇಮಕದ ನಂತರ ವಿಲೇವಾರಿಗೆ ಮತ್ತಷ್ಟು ಬಲ ಬಂದಿದೆ ಎಂದರು.
ತಾವು ಕಲಬುರಗಿ ಪೀಠದ ಆಯುಕ್ತರಾದ ನಂತರ 90 ದಿನಗಳ ಅವಧಿಯಲ್ಲಿ ಸುಮಾರು 1,187 ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಇದರಲ್ಲಿ ಬಾಕಿ ಇದ್ದ 5-6 ವರ್ಷಗಳ ಬಾಕಿ‌ ಪ್ರಕರಣಕ್ಕು ಮುಕ್ತಿ ನೀಡಿದೆ ಎಂದ ಅವರು,‌ಕೆಲವು ಪ್ರಕರಣದಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳಿಗೆ‌ ದಂಡ‌ ವಿಧಿಸಲಾಗುತ್ತಿದ್ದು, ಅದು ಅಧಿಕಾರಿಗಳ‌ ಸಂಬಳದಿಂದ ಕಡಿತವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ‌ ನಿರ್ದೇಶನ ನೀಡಬೇಕೆಂದರು.
ಸಾರ್ವಜನಿಕ ಆಡಳಿತ ಪಾರದರ್ಶಕವಾಗಿ ಮತ್ತು ಜನರಿಗೆ ಉತ್ತರದಾಯಿತ್ವ ಇರಲೆಂದೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ.‌ ಇದರ‌ ಮೂಲ ಉದ್ದೇಶ ಅಧಿಕಾರಿ ವರ್ಗ ಅರಿಯಬೇಕು. ಮಾಹಿತಿ ಹಕ್ಕು ಕಾಯ್ದೆಗೆ 300 ವರ್ಷಗಳ ಇತಿಹಾಸ ಹೊಂದಿದೆ. 1766 ಸುಡಾನ್ ನಲ್ಲಿ ಇದು ಮೊದಲು ಜಾರಿಗೆ ತರಲಾಗಿತ್ತು. ತದನಂತರ 1951ರಲ್ಲಿ ಪಿನ್ಲ್ಯಾಂಡ್, 1966 ರಲ್ಲಿ ಅಮೆರಿಕಾ, 2000ರಲ್ಲಿ ಇಂಗ್ಲ್ಯಾಂಡ್, 2001ರಲ್ಲಿ ಜಪಾನ್ ನಲ್ಲಿ ಹಾಗೂ 2005 ರಲ್ಲಿ ಭಾರತದಲ್ಲಿ ಇದನ್ನು ಕಾಯ್ದೆ ರೂಪ ನೀಡಿ ಶಾಸನಬದ್ಧವಾಗಿ ಜಾರಿಗೆ ತಂದಿದ್ದು, ಇದೇ ವರ್ಷ ಕರ್ನಾಟಕದಲ್ಲಿಯೂ ಯಥಾವತ್ತಾಗಿ ಕಾಯ್ದೆ ಜಾರಿಗೆ ತಂದಿದೆ ಎಂದು ಅರ್.ಟಿ.ಐ ಕಾಯ್ದೆ ಇತಿಹಾಸದ‌ ಬಗ್ಗೆ ಮೆಲುಕು ಹಾಕಿದರು.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ
ಡಾ. ರಿಚರ್ಡ ವಿನ್ಸೆಂಟ್ ಡಿಸೋಜಾ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಸರಿಯಾಗಿ ಓದಿಕೊಂಡಲು ಅರ್ಜಿ ವಿಲೇವಾರಿ ಮಾಡಲು ಕಷ್ಡವಾಗದು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕಾಯ್ದೆ ಸಹಕಾರಿಯಾಗಿದೆ. ಕಾಯ್ದೆಯು ಪ್ರತಿ ಸಾರ್ವಜನಿಕರ ನೌಕರನಿಗೆ ಹೊಣೆಗಾರಿಕೆ ನೀಡಿದೆ. ಖಾಸಗಿ ವಿಚಾರ, ಗೌಪ್ಯ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಕಾಯ್ದೆಯಲ್ಲಿ ಮಾಹಿತಿ ನೀಡಲು ವಿನಾಯ್ತಿ ಇರುವ ವಿಣಯಗಳನ್ನು ಹೊರತುಪಡಿಸಿ ಎಲ್ಲಾ ಮಾಹಿತಿಯನ್ನು ಇಲಾಖೆಯ ಅಂತರ್ಜಾಲದಲ್ಲಿ ಪ್ರದರ್ಶಿಸಬೇಕು ಎಂದರು.
ಅರ್ಜಿಗೆ ಹೆದರಬೇಡಿ,ಕಾಯ್ದೆ ಓದಿದರೆ ಸಾಕು:
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ
ಡಾ. ಮಹೇಶ ವಾಲ್ವೇಕರ
ಮಾತನಾಡಿ ಕಚೇರಿಯಲ್ಲಿ ಆರ್.ಟಿ.ಐ ಅರ್ಜಿ ಸಲ್ಲಿಕೆಯಾಗಿದೆ‌ ಎಂದರೆ ಅಧಿಕಾರಿಗಳು ಗಾಬರಿಗೊಳ್ಳುತ್ತಾರೆ. ಇದು ಬೇಡ. ಸರಿಯಾಗಿ ಕಾಯ್ದೆ ಓದಿಕೊಂಡಲ್ಲಿ ಅರ್ಜಿಗೆ ಹೆದರದೆ ಸ್ಪಷ್ಟವಾದ ಉತ್ತರ ನೀಡಬೇಕು‌ ಎಂದರು.
ಒಂದು ವೇಳೆ‌ ಸ್ಪಷ್ಟವಾದ ಮಸಹಿತಿ ಕೋರಿದಿದ್ದಲ್ಲಿ ಸ್ಷ ಮಾಹಿತಿ ಕೋರಿದಲ್ಲಿ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಹಿಂಬರಹ ನೀಡಿ ವಿಲೇವಾರಿ ಮಾಡಬೇಕು. ಅರ್ಜಿ‌ವಿಲೇವಾರಿ ವಿಳಂಬ ಮಾಡದೆ 30 ದಿನದಲ್ಲಿ ವಿಲೇವಾರಿ ಮಾಡಬೇಕು. ಅರ್ಜಿ ತಮ್ಮ ಕಚೇರಿಯಲ್ಲಿದ್ದಿದ್ದರೆ ಇತರೆ ಕಚೇರಿಗೆ ಸಂಬಂಧಿಸಿದ ಮಾಹಿತಿಯಾದಲ್ಲಿ 5 ದಿನಗಳಲ್ಲಿ ವರ್ಗಾವಣೆ ಮಾಡಬೇಕು ಎಂದ ಅವರು, ಕಾಯ್ದೆಯು ನೌಕರರಿಗೆ ಯಾವುದೇ ಕಾನೂನು ಚೌಕಟ್ಟು ಮೀರದಂತೆ ಕೆಲಸ‌ ಮಾಡಲು ಪೋಷಿಸುವ ರಕ್ಷಾ ಕವಚದಂತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಆರ್.ಟಿ.ಐ ಅರ್ಜಿ ಗಳನ್ನು ಕಾಲಮಿತಿಯಲ್ಲಿ ಆದ್ಯತೆ ಮೇರಿಗೆ ವಿಲೇ ಮಾಡಬೇಕಿಮ ವಿನಾಕಾರಣ ವಿಳಂಬ ಮಾಡುವುದು ಸಲ್ಲ. ಇನ್ನು ಜಿಲ್ಲೆಯಲ್ಲಿ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿಗೆ ತ್ರೈಮಾಸಿಕವಾಗಿ ಪ್ರಗತಿ ಪರಿಶೀಲನೆ ಸಹ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ‌ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ವಿವಿಧೆ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ‌ ಪಂಚಾಯತ್ ಪಿ.ಡಿ.ಓ, ವಿ.ಎ. ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು. ಸಾಮಾಜಿಕ ಭದ್ರತಾ ವಿಭಾಗದ ಸಹಾಯಕ ನಿರ್ದೇಶಕ ಶಿವಶರಣಪ್ಪ ಧನ್ನಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net