ಅರಣ್ಯ ಕೃಷಿಯಿಂದ ಸಮೃದ್ಧ ಜೀವನ

ವಿಕ್ರಮ್ ಅವರು ಜಮೀನಿನಲ್ಲಿ ವಿವಿಧ ಬೆಳೆಗಳು ನಳನಳಿಸುತ್ತಿರುವುದು.
ವಿಕ್ರಮ್ ಅವರು ಜಮೀನಿನಲ್ಲಿ ವಿವಿಧ ಬೆಳೆಗಳು ನಳನಳಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮ
  • ಎಚ್.ವಿ.ವಿಕ್ರಮ್
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದ ನಿವಾಸಿ ಎಚ್.ವಿ.ವಿಕ್ರಮ್ ಅರಣ್ಯ ಕೃಷಿ ಪದ್ಧತಿ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಹಜ ಕೃಷಿಯ ಜತೆಗೆ ಅರಣ್ಯ ಕೃಷಿಗೂ ಒತ್ತು ನೀಡುತ್ತಿದ್ದಾರೆ. ಆಲೂರು ಹಾಗೂ ಸಕಲೇಶಪುರ ತಾಲೂಕಿನ ಬಹುತೇಕ ಗ್ರಾಮಗಳು ಕಾನನದ ಮಧ್ಯೆ ಇರುವುದರಿಂದ ಜನರು ಕಾಡಿನ ನಡುವೆಯೇ ಹಿಂದಿನ ಕಾಲದಿಂದಲೂ ಸಹಜ ಕೃಷಿ ಮಾಡಿಕೊಂಡು ಬರುತಿದ್ದಾರೆ. ಇದನ್ನೇ ವಿಕ್ರಮ್ ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ವಿಕ್ರಮ್ ಬೆಂಗಳೂರಿಗೆ ಹೋಗಿ ಟ್ಯಾಕ್ಸಿ ಚಾಲಕನಾಗಿ ದುಡಿದು ಜೀವನ ಮಾಡುತ್ತಿದ್ದರು. ಆದರೆ ಅಲ್ಲಿನ ಜಂಜಾಟದ ಬದುಕಿನಿಂದ ನೊಂದು ತನ್ನ ಊರಿಗೆ ವಾಪಸ್ ಬಂದು ನೆಲೆಸಿದ್ದಾರೆ. ತಂದೆಯಿಂದ ಬಂದ ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ಯಂತ ಸಂಭ್ರಮದಿಂದ ಅರಣ್ಯ ಕೃಷಿ ಮಾಡುತ್ತಿದ್ದು, ಜಮೀನಿನ ಸುತ್ತ ವಿಶೇಷ ಪ್ರಭೇದದ ಕಾಡು ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವರಿಂದ ಪರಿಸರ ಸ್ನೇಹ ಮನೋಭಾವವನ್ನು ರೂಢಸಿಕೊಂಡು, ಅದನ್ನು ಪ್ರಾಯೋಗಿಕವಾಗಿ ತಂದು ಆಸ್ವಾದನೆ ಮಾಡಲಾಗುತ್ತಿದೆ ಎನ್ನುತ್ತಾರೆ ಅವರು.
ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಲ್ಲಮ್ಮ ಬಸವಗೌಡ ವಿದ್ಯಶಾಲೆಯಲ್ಲಿ ಶಿಕ್ಷಣ ಪಡೆದ ವಿಕ್ರಮ್ ನಾಲ್ಕು ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು ಕಾಫಿ, ಏಲಕ್ಕಿ, ಕಾಳುಮೆಣಸು, ಭತ್ತದ ಬೆಳೆಯೊಂದಿಗೆ ಜಮೀನಿನ ಸುತ್ತಲೂ ಕಾಡು ಜಾತಿಯ ಮರಗಳು, ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಉಳಿದ ಜಮೀನನ್ನು ಸಂಪೂರ್ಣವಾಗಿ ಅರಣ್ಯ ಕೃಷಿ (ಕಾಡು ಜಾತಿ ಮರ ಬೆಳೆಸುವುದು)ಗೆ ಮೀಸಲಿಟ್ಟಿದ್ದು, ಸಾವಿರಾರು ಮರಗಳನ್ನು ಬೆಳೆಸಿದ್ದಾರೆ.
ಜಮೀನಿನಲ್ಲಿ ವಿವಿಧ ಬಗೆಯ ಕಾಡು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಹೀಗಾಗಿ, ಸಿವೆಟ್ ಕ್ಯಾಟ್ ಸೇರಿದಂತೆ ಹಲವು ಪಕ್ಷಿಗಳು ಇದನ್ನು ಆವಾಸ ತಾಣವಾಗಿಸಿಕೊಂಡಿವೆ. ಅಲ್ಲದೆ ನಂದಿ, ನೇರಳೆ, ಬೈನೆ, ಹೆಬ್ಬೇವು, ತೇಗ, ಮಾವು ಸೇರಿದಂತೆ ನೂರಾರು ಬಗೆಯ ಮರಗಳೂ ಬೆಳೆದಿವೆ. ಆದರೆ, ಇದ್ಯಾವುದನ್ನೂ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಮಾಡುತಿಲ್ಲ. ಕಾಫಿ, ಏಲಕ್ಕಿ, ಮೆಣಸು ಹಾಗೂ ಭತ್ತದ ಬೆಳೆಯಿಂದ ವಾರ್ಷಿಕ 4 ರಿಂದ 5 ಲಕ್ಷ ರೂ.ವರೆಗೆ ಆದಾಯ ಬರುತ್ತಿದೆ. ಇನ್ನುಳಿದಂತೆ ತೆಂಗು, ತರಕಾರಿ ಬೆಳೆಯುತ್ತಿದ್ದು ಅವುಗಳನ್ನು ತಮಗಾಗಿ ಬಳಕೆ ಮಾಡುತ್ತಾರೆ.
10 ವಷರ್ಗಳಿಂದ ಶೂನ್ಯ ಸಾಲ: ಕೃಷಿಗಾಗಿ ಕಳೆದ 10 ವರ್ಷಗಳಿಂದ ನಯಾಪೈಸೆ ಕೂಡ ಸಾಲ ಮಾಡಿಲ್ಲ. ಜಮೀನಿಗೂ ರಾಸಾಯನಿಕ ಗೊಬ್ಬರವನ್ನು ಬಳಸದೆ ಪರಿಸರ ಸ್ನೇಹಿ ಕೃಷಿ ಮಾಡುತ್ತಿದ್ದಾರೆ. ರಾಸಾಯನಿಕ ಪದಾರ್ಥಗಳನ್ನು ಭೂಮಿಗೆ ಉಣಿಸಿ ಸತ್ವ ಕಳೆದುಕೊಳ್ಳುವಂತೆ ಮಾಡುತ್ತಿರುವವರ ನಡುವೆ ಇವರು ಮಾದರಿಯಾಗಿದ್ದಾರೆ.
ಕಾಡಿನ ಮಧ್ಯದಲ್ಲಿ ಜಮೀನು ಇರುವುದರಿಂದ ನಿತ್ಯ ಕಾಡಾನೆ, ನವಿಲು, ಮೊಲ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಬೇಸಿಗೆ ಸಮಯದಲ್ಲಿ ಕಾಡಾನೆಗಳ ಉಪಟಳ ಇಲ್ಲಿ ಹೆಚ್ಚು. ಹಾಗಾಗಿ ಅವುಗಳಿಂದ ಆಗುವ ಹಾನಿ ತಡೆಗಟ್ಟಲು ತಂತಿಬೇಲಿ ಅಳವಡಿಸಲಾಗಿದೆ. ಜಮೀನಿನಲ್ಲಿ ಕಾಡುಪ್ರಾಣಿ, ಪಕ್ಷಿಗಳು ಕುಡಿಯುವುದಕ್ಕೆ ನೀರು ಇಡಲಾಗಿದೆ. ಇದರಿಂದ ಬಾನಾಡಿಗಳು ಮತ್ತು ಪ್ರಾಣಿಗಳಿಗೆ ಅನುಕೂಲವಾಗಿದೆ. ಅಲ್ಲದೆ ಪರಿಸರ ಮಾಲಿನ್ಯ ಆಗದಂತೆ ವಿಶೇಷ ಗಮನಹರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಂದ ಯುವಕರು ಉದ್ಯೋಗವನ್ನರಸಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಯುವ ಜನತೆಯಲ್ಲಿ ಕೃಷಿ ಮೇಲಿನ ಆಸಕ್ತಿ ಮರೆಯಾಗುತ್ತಿದೆ. ಯಾಂತ್ರಿಕ ಬದುಕು ಕೇವಲ ಆರ್ಥಿಕತೆಯನ್ನು ಸದೃಡಗೊಳಿಸಬಹುದೇ ಹೊರತು ಮಾನಸಿಕವಾಗಿ ಯಾವುದೇ ನೆಮ್ಮದಿಯನ್ನು ಕಲ್ಪಿಸಿ ಕೊಡುವುದಿಲ್ಲ. ಕೃಷಿ ಬದುಕಿನಿಂದ ನೆಮ್ಮದಿಯ ಜೀವನ ಸಾಧ್ಯ ಎಂಬುದಕ್ಕೆ ಬೆಂಗಳೂರಿನಂತಹ ದೊಡ್ಡ ಸಿಟಿಯನ್ನು ಬಿಟ್ಟು ಅಲ್ಲಿಗೆ ಬಂದು ಕೃಷಿಕನಾಗಿ ನಮ್ಮದೇ ಜೀವನ ಸಾಗಿಸುತ್ತಿರುವ ವಿಕ್ರಮ್ ಇತರರಿಗೆ ಸಾಕ್ಷಿ.
ಸತ್ಯನಾರಾಯಣ್ ಹರಿಹಳ್ಳಿ ಗ್ರಾಮಸ್ಥ
ಇತ್ತೀಚಿನ ದಿನಗಳಲ್ಲಿ ವಂಶಪಾರಂಪರ್ಯವಾಗಿ ಬಂದಂತಹ ಕೃಷಿ ಭೂಮಿಯನ್ನು ಮಾರಿ ಪಟ್ಟಣದ ಕಡೆ ಮುಖ ಮಾಡುತ್ತಿದ್ದಾರೆ. ಇಂತಹವರಿಂದ ಕೃಷಿಯಲ್ಲಿ ಏನೂ ಇಲ್ಲ ಎಂಬ ಮಾತು ಬರುತ್ತದೆ. ಆದರೆ ನಮ್ಮ ಬದುಕಿಗೆ ಬೇಕಾದದ್ದು ಕೃಷಿಯಲ್ಲಿದೆ. ಒಳ್ಳೆಯ ಆರೋಗ್ಯ, ಉಡುಗೆ, ನಮ್ಮ ಆಶ್ರಯಕ್ಕೆ ಮೂಲ ಕಾರಣ ಕೃಷಿ. ಸುಂದರವಾದ ಕೌಟುಂಬಿಕವಾದ ಜೀವನ ಕೃಷಿಯಿಂದ ಸಾಧ್ಯ. ಹೆಚ್ಚಿನ ಪಾಲಕರು ಮಕ್ಕಳನ್ನು ಕೃಷಿಯಿಂದ ವಿಮುಖರನ್ನಾಗಿ ಮಾಡುತ್ತಿದ್ದಾರೆ. ಕೃಷಿ ಎಂಬುವುದು ಇಂದು ವಾಣಿಜ್ಯೀಕರಣವಾಗುತ್ತಿದೆ. ಕೃಷಿಕರು ಮಣ್ಣನ್ನು ಪ್ರೀತಿಸಬೇಕು. ಭೂಮಿಗೆ ವಿಷ ಹಾಕಬಾರದು.
ವಿಕ್ರಮ್ ಕೃಷಿಕ
ಒತ್ತಡದ ಜೀವನದಿಂದ ಕಂಪನಿ ಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿ ಕಂಡಿಕೊಂಡಿರುವ ಹರಿಹಳ್ಳಿ ಗ್ರಾಮದ ವಿಕ್ರಮ್ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯುವಕರಿಗೆ ಮಾದರಿಯಾಗಿದ್ದಾರೆ. ನೌಕರಿಯಲ್ಲಿದ್ದಾಗ ಸಿಗುತ್ತಿದ್ದ ವೇತನಕ್ಕಿಂತಲೂ ಹೆಚ್ಚಿನ ಆದಾಯ ಗಳಿಸುತ್ತಿರುವ ಇವರಿಗೆ ಸಮಗ್ರ ಕೃಷಿ ಪದ್ಧತಿ ಕೈಹಿಡಿದಿದೆ. ಕೂಲಿಕಾರ್ಮಿಕರ ಸಮಸ್ಯೆಯನ್ನು ಸರಿದೂಗಿಸಿಕೊಂಡು ಜಮೀನಿನಲ್ಲಿ ಪರಿಶ್ರಮದಿಂದ ಕೆಲಸ ಮಾಡಿದರೆ ಆದಾಯದ ಜತೆಗೆ ನೆಮ್ಮದಿ ಜೀವನ ಸಾಗಿಸಬಹುದು ಎಂಬುದಕ್ಕೆ ವಿಕ್ರಮ್ ಸಾಕ್ಷಿ.
ರಮೇಶ್‌ಕುಮಾರ್ ತಾಲೂಕು ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net