ಗೋಡೆಯ ಬಾಳಿಕೆ ಹೆಚ್ಚಿಸುವ ಕಿಟಕಿ ಮೇಲಿನ ಸಜ್ಜಾ

ಮನೆ ನಿರ್ಮಾಣದ ವೇಳೆ ಮರೆಯದಿರಿ ಡ್ರಿಪ್ ಗ್ರೂವ್
Attractive sunshades built above the windows of modern homes.
ಆಧುನಿಕ ಮನೆಗಳ ಕಿಟಕಿ ಮೇಲೆ ನಿರ್ಮಿಸಿರುವ ಅತ್ಯಾಕರ್ಷಕ ಸಜ್ಜಾಗಳು. reporting
Published on: 

ಬೆಂಗಳೂರು : ಹೊಸದಾಗಿ ಮನೆ ನಿರ್ಮಿಸುವಾಗ ಲಕ್ಷಾಂತರ ರೂ. ಖರ್ಚು ಮಾಡಿ ಅತ್ಯುತ್ತಮ ಬಣ್ಣ, ಆಕರ್ಷಕ ಟೈಲ್ಸ್, ದುಬಾರಿ ಕಿಟಕಿ ಹಾಗೂ ಬಾಗಿಲುಗಳನ್ನು ಅಳವಡಿಸುತ್ತಾರೆ. ಆದರೆ ಮನೆಯ ಗೋಡೆಗಳ ಸೌಂದರ್ಯವನ್ನು ವರ್ಷಗಳ ಕಾಲ ಕಾಪಾಡಲು ಕಿಟಕಿ ಮೇಲ್ಭಾಗದಲ್ಲಿ ಅಳವಡಿಸುವ ಸಜ್ಜಾ ಹಾಗೂ ಕೆಳಭಾಗದಲ್ಲಿನ ‘ಡ್ರಿಪ್ ಗ್ರೂವ್’ ಗೋಡೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಜ್ಜಾ ಇಲ್ಲದಿದ್ದರೆ ಹೊರಗಿನಿಂದ ಬೀಳುವ ಮಳೆಯ ನೀರು ಕಿಟಕಿ ಕೆಳಗಿನ ಉಳಿದರ್ಧ ಗೋಡೆಯ ಮೇಲೆ ಬಿದ್ದು ಗೋಡೆಯನ್ನು ಹಾಳು ಮಾಡಬಹುದು, ಬಣ್ಣವೂ ಕೆಡಬಹುದು ಹಾಗೂ ಮಳೆಯ ನೀರು ಮನೆಯೊಳಗೆ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಜ್ಜಾ ನಿರ್ಮಾಣ ಬಹಳ ಮುಖ್ಯ.

ಇದರ ಜೊತೆಗೆ ಡ್ರಿಪ್ ಗ್ರೂವ್ ನಿರ್ಮಾಣ ಕೂಡಾ ಅಷ್ಟೇ ಮುಖ್ಯ. ಕಿಟಕಿಯ ಕೆಳಭಾಗದಲ್ಲಿ ಗ್ರಾನೈಟ್ ಅಥವಾ ಕಾಂಕ್ರೀಟ್‌ನಿಂದ ಕಿಟಕಿ ಹಲಗೆಯನ್ನು ನಿರ್ಮಿಸಿ, ಹೊರಭಾಗದ ಕಡೆಗೆ ಸ್ವಲ್ಪ ಇಳಿಜಾರು ನೀಡಲಾಗುತ್ತದೆ. ಮೇಲಿನಿಂದ ಹರಿದುಬರುವ ಮಳೆನೀರು ಗೋಡೆಯ ಮೇಲೆ ಹಿಂದಕ್ಕೆ ಹರಿಯದಂತೆ ತಡೆಯಲು ಇದು ಸಹಕಾರಿಯಾಗುತ್ತದೆ. ಹಲಗೆಯ ಮುಂಭಾಗದಲ್ಲಿ ಸಣ್ಣ ಕಾಲುವೆಯಂತಹ ಗೆರೆ ರೂಪಿಸಲಾಗುತ್ತದೆ. ಇದರ ಮೂಲಕ ನೀರು ಹರಿದು ಹೊರಗೆ ಹೋಗುತ್ತದೆ. ಇದನ್ನೇ ಡ್ರಿಪ್ ಗ್ರೂವ್ ಎಂದು ಕರೆಯುತ್ತಾರೆ.

ಪುಟ್ಟ ಗೆರೆ ಮಾಡುವ ದೊಡ್ಡ ಕೆಲಸ

ಮಳೆ ಬಂದಾಗ ಕಿಟಕಿಯ ಗಾಜು, ಚೌಕಟ್ಟು ಹಾಗೂ ಹಲಗೆಯ ಮೇಲೆ ಸಂಗ್ರಹವಾಗುವ ನೀರು ಕೆಳಕ್ಕೆ ಹರಿಯುತ್ತದೆ. ಆದರೆ ನೀರಿಗೆ ಮೇಲ್ಮೈ ಸೆಳೆತದ ಗುಣವಿರುವುದರಿಂದ ಅದು ಹಲಗೆಯ ಅಂಚಿನಿಂದ ನೇರವಾಗಿ ಕೆಳಕ್ಕೆ ಬೀಳುವ ಬದಲು ಹಲಗೆಯ ಕೆಳಭಾಗವನ್ನು ಹಿಡಿದು ಗೋಡೆಯ ಕಡೆಗೆ ಹರಿಯಬಹುದು. ಇದರಿಂದ ಗೋಡೆಯ ಮೇಲೆ ಕಪ್ಪು ಕಲೆಗಳು, ತೇವಾಂಶ, ಪಾಚಿ ಹಾಗೂ ಕ್ರಮೇಣ ಬಣ್ಣ ಹೋಗುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಜ್ಜಾ ಮತ್ತು ಡ್ರಿಪ್ ಗ್ರೂವ್ ನಿರ್ಮಿಸುವುದರಿಂದ ನೀರಿನ ಹರಿವನ್ನು ಕೆಳಕ್ಕೆ ಬೀಳುವಂತೆ ಮಾಡಬಹುದು. ಇದರಿಂದ ಗೋಡೆಯ ಮೇಲ್ಮೈಗೆ ನೀರು ತಗಲುವುದು ಕಡಿಮೆಯಾಗಿ, ಗೋಡೆಯ ಸೌಂದರ್ಯ ಮತ್ತು ಪ್ಲಾಸ್ಟರಿಂಗ್‌ನ ಬಾಳಿಕೆ ಕಾಪಾಡಲು ನೆರವಾಗುತ್ತದೆ.

A view of the *sajja* (sunshade/projection) and drip groove constructed above and below the windows of houses.
ಮನೆಗಳ ಕಿಟಕಿ ಮೇಲೆ ಮತ್ತು ಕೆಳಗೆ ನಿರ್ಮಿಸುವ ಸಜ್ಜಾ ಮತ್ತು ಡ್ರಿಪ್ ಗ್ರೂವರ್​ನ ಒಂದು ನೋಟ

ಸಜ್ಜಾ ಮತ್ತು ಕೆಳಹಲಗೆಯಲ್ಲಿ ಹಲವು ಬಗೆ

ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡುವಾಗ ವಾಸ್ತು ವಿನ್ಯಾಸಕರು ಇಂತಹ ವಿಷಯಗಳ ಬಗ್ಗೆ ಗಮನ ನೀಡಿ, ಮನೆಯ ನಕ್ಷೆ ತಯಾರಿಕೆಯಲ್ಲಿ ಈ ಅಂಶಗಳಿಗೆ ಆದ್ಯತೆ ನೀಡುತ್ತಾರೆ.

ಕಿಟಕಿಯ ಮೇಲೆ ನಿರ್ಮಿಸುವ ಸಜ್ಜಾ ಹಾಗೂ ಕೆಳ ಹಲಗೆಗಳ ಆಯ್ಕೆಯಲ್ಲೂ ಹಲವು ಬಗೆಗಳನ್ನು ಕಾಣಬಹುದು. ಆರ್‌ಸಿಸಿ ಮನೆಗಳಲ್ಲಿ ಸಿಮೆಂಟ್ ಸಜ್ಜಾಗಳನ್ನೇ ಹೆಚ್ಚಾಗಿ ನಿರ್ಮಿಸುತ್ತಾರೆ. ಸಜ್ಜಾಗಳನ್ನು ಎರಡು ಸೂರಿನಂತೆ ವಿಭಾಗಿಸಿ ಮಾಡಬಹುದು. ಇನ್ನು ಕೆಲವರು ಹೆಂಚು ಅಥವಾ ಗಾಜಿನ ಸಜ್ಜಾಗಳನ್ನು ಮಾಡುತ್ತಾರೆ. ಕೆಳಹಲಗೆಯನ್ನು ಗ್ರಾನೈಟ್ ಅಥವಾ ಕಾಂಕ್ರೀಟ್ ಮೂಲಕ ನಿರ್ಮಿಸಬಹುದು. ಒಂದು ವೇಳೆ ಮೂಲ ನಕ್ಷೆಯಲ್ಲಿ ಸಜ್ಜಾ ವಿನ್ಯಾಸಗೊಳ್ಳದಿದ್ದರೂ, ಕಬ್ಬಿಣದ ಸರಳುಗಳ ಮೂಲಕ ಪತ್ಯೇಕವಾಗಿ ಹೆಂಚಿನ ಸಜ್ಜಾ ನಿರ್ಮಿಸಬಹುದು.