ಹೀಗೆ ಮಕ್ಕಳು ಬೆಳೆದಂತೆಲ್ಲ ಪೆನ್ನನ್ನು ಬಳಸುವ ಸಂದರ್ಭ ಬರುತ್ತದೆ. ಆಗ ವಿವಿಧ ರೀತಿಯ, ವಿವಿಧ ಬಣ್ಣದ ಪೆನ್ನುಗಳು ಮಕ್ಕಳನ್ನು ಆಕರ್ಷಿಸುತ್ತವೆ. ಮಕ್ಕಳ ಭಾಷೆಯಲ್ಲಿ ಹೇಳುವುದಾದರೆ ಟಕ್ಟಿಕ್ ಪೆನ್ನು, ರಿಫಿಲ್ ಪೆನ್ನು, ಇಂಕ್ ಪೆನ್ನು, ಜೆಲ್ಪೆನ್ನು, ಬಾಲ್ಪಾಯಿಂಟ್ ಪೆನ್ನು, ಸ್ಕೆಚ್ಪೆನ್ನು ಹೀಗೆ ಹಲವು ಪೆನ್ನುಗಳಿವೆ. ಕೆಂಪು, ಕಪ್ಪು, ನೀಲಿ, ಹಸಿರು ಶಾಯಿಗಳ ಪೆನ್ನು ಮಕ್ಕಳ ಮನ ಸೆಳೆಯುತ್ತವೆ. ಕೆಂಪು ಶಾಯಿ ಟೀಚರ್ಗೆ, ಹಸಿರು ಶಾಯಿ ಹೆಡ್ಮಾಸ್ಟರ್ಗೆ, ನೀಲಿ ಶಾಯಿ ಮಕ್ಕಳಿಗೆ ಎಂಬುದಾಗಿತ್ತು. ಆಗ ಮಕ್ಕಳು ತಾವೂ ಕೆಂಪು ಶಾಯಿ, ಹಸಿರು ಶಾಯಿಯಲ್ಲಿ ಬರೆಯುತ್ತೇವೆ ಎಂದು ಆಸೆ ವ್ಯಕ್ತಪಡಿಸಿದಾಗ, "ನೀವು ಚೆನ್ನಾಗಿ ಓದಿ ಉನ್ನತ ಅಧಿಕಾರಿ, ಐಎಎಸ್, ಐಪಿಎಸ್ ಅಧಿಕಾರಿಯಾದರೆ ಹಸಿರು ಶಾಯಿ ಪೆನ್ನಿನಲ್ಲಿ ಸಹಿ ಹಾಕಬಹುದು' ಎಂದು ಮಕ್ಕಳಿಗೆ ಶಿಕ್ಷಣ ಪಡೆಯಲು ಹುರಿದುಂಬಿಸುತ್ತಿದ್ದರು.