ಹಳೆಯ ಪುಸ್ತಕಗಳಿಗೆ ಹೊಸ ರೂಪ / SARJAPUR

ಸರ್ಕಾರಿ ಶಾಲಾ ಮಕ್ಕಳಿಗೆ ಕು.ಸಮೀರಾ ಗಾರ್ಗ್​ ಮತ್ತು ಸಮಾಜಸೇವಕ ಟಿ.ವಿ.ಬಾಬು ನೋಟ್​ ಪುಸ್ತಕ ವಿತರಿಸಿದರು. ಸರ್ಜಾಪುರ ಗ್ರಾಪಂ ಆಡಳಿತಾಧಿಕಾರಿ ಹರೀಶ್​, ಪಿಡಿಒ ಸುಭಾನ್​ ಖಾನ್​, ಮುಖಂಡರಾದ ವೈ.ಶ್ರೀರಾಮುಲು, ಜಿ.ನಾಗರಾಜು ಇತರರು ಇದ್ದರು.
ಸರ್ಕಾರಿ ಶಾಲಾ ಮಕ್ಕಳಿಗೆ ಕು.ಸಮೀರಾ ಗಾರ್ಗ್​ ಮತ್ತು ಸಮಾಜಸೇವಕ ಟಿ.ವಿ.ಬಾಬು ನೋಟ್​ ಪುಸ್ತಕ ವಿತರಿಸಿದರು. ಸರ್ಜಾಪುರ ಗ್ರಾಪಂ ಆಡಳಿತಾಧಿಕಾರಿ ಹರೀಶ್​, ಪಿಡಿಒ ಸುಭಾನ್​ ಖಾನ್​, ಮುಖಂಡರಾದ ವೈ.ಶ್ರೀರಾಮುಲು, ಜಿ.ನಾಗರಾಜು ಇತರರು ಇದ್ದರು.
Published on

ಸರ್ಜಾಪುರ :

ಹಳೆಯ ನೋಟ್​ ಪುಸ್ತಕಗಳನ್ನು ಎಸೆಯುವ ಬದಲು ಅವುಗಳ ಮರುಬಳಕೆ ಮಾಡಿ ಹೊಸ ನೋಟ್​ ಪುಸ್ತಕಗಳಾಗಿ ಪರಿವರ್ತಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿ ನೆರವಾಗುವ ವಿನೂತನ ಹಾಗೂ ಪರಿಸರ ಸ್ನೇಹಿ ಯೋಜನೆಯು ಆನೇಕಲ್​ ತಾಲೂಕಿನಲ್ಲಿ ಗಮನ ಸೆಳೆಯುತ್ತಿದೆ.

ಸರ್ಜಾಪುರ ಮುಖ್ಯ ರಸ್ತೆಯ ಚಂಬೇನಹಳ್ಳಿಯಲ್ಲಿರುವ ಟಿಐಎಸ್​ಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಸುಮಿರಾ ಗಾರ್ಗ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೇಡ್​ ಅಗೇನ್​ **(ಋಚಛಛಿ ಚಜಚಜ್ಞಿ) ವಿಶೇಷ ಯೋಜನೆಯಡಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನೋಟ್​ ಪುಸ್ತಕ ವಿತರಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೋಟ್​ ಪುಸ್ತಕಗಳ ನೆರವು ದೊರೆಯುವುದರ ಜತೆಗೆ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡುವ ಉದ್ದೇಶ ಯೋಜನೆಯಲ್ಲಿದೆ.

ಬಳಕೆಯಾದ ಪುಸ್ತಕ ಮತ್ತು ಕಾಗದಗಳನ್ನು ಸಂಗ್ರಹಿಸಿ ಮೊದಲ ಹಂತದಲ್ಲಿ ಅವುಗಳನ್ನು ವಿಂಗಡಿಸಲಾಗುತ್ತದೆ. ನಂತರ ಮರುಬಳಕೆಗೆ ಅಗತ್ಯ ರೀತಿಯಲ್ಲಿ ಸಿದ್ಧಪಡಿಸಿ, ಶ್ರೇಡಿಂಗ್​ ಮಾಡಲಾಗುತ್ತದೆ. ಬಳಿಕ ಕಾಗದವನ್ನು ಪಲ್ಪಿಂಗ್​ ಮಾಡುವ ಮೂಲಕ ಸಂಸ್ಕರಿಸಲಾಗುತ್ತದೆ. ಸ್ಕ್ರೀನಿಂಗ್​ ಮತ್ತು ಕ್ಲೀನಿಂಗ್​ ಸೇರಿ ವಿವಿಧ ಹಂತ ಪೂರ್ಣಗೊಳಿಸಿದ ನಂತರ ಮರುಬಳಕೆಯ ಕಾಗದದಿಂದ ಹೊಸ ನೋಟ್​ ಪುಸ್ತಕಗಳನ್ನು ತಯಾರಿಸಲಾಗುತ್ತದೆ. ಮನೆ ಅಥವಾ ಶಾಲೆಯಲ್ಲಿ ಬಳಕೆ ಮುಗಿದ ಪುಸ್ತಕವೊಂದು ಕೇವಲ ತ್ಯಾಜ್ಯವಾಗದೆ, ಮತ್ತೊಬ್ಬ ವಿದ್ಯಾರ್ಥಿಯ ಕೈಯಲ್ಲಿ ಹೊಸ ಕಥೆಯ ಆರಂಭವಾಗಬಹುದು ಎಂಬ ಸಂದೇಶವನ್ನು ಈ ಯೋಜನೆ ಸಾರುತ್ತಿದೆ.

ಕಾಗದದ ಮರುಬಳಕೆಯಿಂದ ಕಾಗದದ ತ್ಯಾಜ್ಯ ಕಡಿಮೆ ಮಾಡುವ ಜತೆಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ, ಮರುಬಳಕೆಯ ಮಹತ್ವ ಹಾಗೂ ಜವಾಬ್ದಾರಿಯುತ ಬಳಕೆಯ ಕುರಿತು ಅರಿವು ಮೂಡಿಸುವುದಾಗಿದೆ. ಈ ಪ್ರಯತ್ನವು ಮರುಬಳಕೆ ಸಂಸತಿಗೆ ಉತ್ತೇಜನ ನೀಡುವುದರ ಜತೆಗೆ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮಾದರಿ ಸಾಮಾಜಿಕ ಕಾರ್ಯವಾಗಿದೆ. ಕುಮಾರಿ ಸುಮಿರಾ ಅವರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net