

ಬೆಂಗಳೂರು : ನಂದಿನಿ ಲೇಔಟ್‌ನಲ್ಲಿ ನಡೆಯುತ್ತಿರುವ ನಂದಿನಿ ಉತ್ಸವ ಹಾಗೂ ಸ್ವದೇಶಿ ಮೇಳದ ಆರನೇ ದಿನದ ಕಾರ್ಯಕ್ರಮಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಹರಿದು ಬಂದರು. ವಿವಿಧ ಸಾಂಸ್ಕೃತಿಕ, ಮನರಂಜನಾ ಪ್ರದರ್ಶನಗಳು ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜರುಗಿದವು.
ಹಾಸ್ಯ ಭಾಷಣಕಾರ ಪ್ರಾಣೇಶ್ ಮತ್ತು ಸಂಗಡಿಗರು ನಡೆಸಿಕೊಟ್ಟ ಕಾಮಿಡಿ ಶೋ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಹಾಸ್ಯಭರಿತ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿ.ಎಂ. ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಿದ್ದ ಮಿಸ್ ಆ್ಯಂಡ್ ಮಿಸ್ಟರ್ ನಂದಿನಿ ಲೇಔಟ್ ಫ್ಯಾಷನ್ ಶೋ ನೆರೆದವರ ಗಮನ ಸೆಳೆಯಿತು. ಸ್ಪರ್ಧಿಗಳ ಪ್ರದರ್ಶನ ಹಾಗೂ ವೇದಿಕೆಯ ವೈವಿಧ್ಯಮಯ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಸ್ಥಳೀಯ ಬಿಜೆಪಿ ಮುಖಂಡರಾದ ಡಾ. ಮಂಜುನಾಥ್ ಗೌಡ ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ‘ನೋ ಟು ಡ್ರಗ್ಸ್’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ನೂರಾರು ಯುವಕರು ರ‌್ಯಾಲಿಯಲ್ಲಿ ಪಾಲ್ಗೊಂಡು ಮಾದಕ ವಸ್ತುಗಳ ಬಳಕೆಯಿಂದ ದೂರವಿರುವಂತೆ ಜನರಿಗೆ ಸಂದೇಶ ಸಾರಿದರು.
ನಂದಿನಿ ಉತ್ಸವ ಮತ್ತು ಸ್ವದೇಶಿ ಮೇಳದ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ, ಸಾರ್ವಜನಿಕರಿಗೆ ಮನರಂಜನೆ ಒದಗಿಸುವ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ನಂದಿನಿ ಉತ್ಸವದ ರೂವಾರಿಗಳಾದ ಕೆ.ವಿ.ರಾಜೇಂದ್ರ ಕುಮಾರ್, ಸ್ಥಳೀಯ ಮುಖಂಡರುಗಳಾದ ಎಸ್. ಭಾಸ್ಕರ್, ಎಂ.ಆನಂದ್, ಸಂಜಯ್ ರಾಜೇಂದ್ರ ಕುಮಾರ್, ಶಿವಕುಮಾರ್ ಸೇರಿದಂತೆ ನಂದಿನಿ ಬಡಾವಣೆಯ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.