ವಿದ್ಯೆಯಷ್ಟೇ ಉತ್ಕೃಷ್ಟ ಗುರುಪರಂಪರೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಚತುಷ್ಪೀಠಪ್ರತಿಷ್ಠಾತಾ ಜಯತಾಚ್ಛಂಕರೋ ಗುರುಃ ||

ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಗೌರವಿಸಬೇಕಾದಂತಹ ಮೂವರು ವ್ಯಕ್ತಿಗಳೆಂದರೆ ತಂದೆ, ತಾಯಿ ಮತ್ತು ಗುರುಗಳು. ಈ ಮೂವರಿಗೂ ದೇವರಿಗೆ ಸಮಾನವಾದ ಸ್ಥಾನ ನೀಡಬೇಕು ಎಂಬ ದೃಷ್ಟಿಯಿಂದಲೇ ಉಪನಿಷತ್ತಿನಲ್ಲಿ ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ ಎಂಬುದಾಗಿ ಉಪದೇಶಿಸಿದೆ.

ತಂದೆ-ತಾಯಿಗಳು ನಮಗೆ ಅತ್ಯಂತ ದುರ್ಲಭವಾದ ಈ ಮನುಷ್ಯ ಶರೀರವನ್ನು ಕರುಣಿಸಿ, ತಾವು ಸ್ವತಃ ಎಷ್ಟೇ ಕಷ್ಟಗಳನ್ನು ಅನುಭವಿಸುತ್ತಿದ್ದರೂ ಮಕ್ಕಳು ಸುಖವಾಗಿರಬೇಕೆಂಬ ಉದ್ದೇಶದಿಂದ ಅತ್ಯಂತ ಪರಿಶ್ರಮದಿಂದ ನಮ್ಮನ್ನು ರಕ್ಷಿಸುತ್ತಾರೆ. ಅಂಥವರನ್ನು ಗೌರವಿಸಿ ಅವರಿಗೋಸ್ಕರ ಯಾವುದೇ ತ್ಯಾಗವನ್ನಾದರೂ ಮಾಡಲು ಸಿದ್ಧರಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ.

ಜೀವನದಲ್ಲಿ ಸಾರ್ಥಕ್ಯದ ಮಾರ್ಗವನ್ನು ಉಪದೇಶಿಸುವಂತಹ ಗುರುಗಳಿಗೂ ನಾವು ಗೌರವ ಸಲ್ಲಿಸಬೇಕು. ಈ ಮನುಷ್ಯ ಜೀವನವನ್ನು ಯಾವ ರೀತಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂಬ ಅರಿವನ್ನು ಮೂಡಿಸುವ ಗುರುವು ವಿದ್ಯಾದಾನವನ್ನು ಮಾಡಿ ಶಿಷ್ಯನಾದವನನ್ನು ಉನ್ನತ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ.

ಗುರುವಿನ ಮಾರ್ಗದರ್ಶನವಿಲ್ಲದ ಈ ಜೀವನ ವ್ಯರ್ಥವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಗುರುವಿನಲ್ಲಿ ಸರಿಯಾದಂತಹ ಜ್ಞಾನ ಮತ್ತು ಆ ಜ್ಞಾನವನ್ನು ಶಿಷ್ಯನಿಗೆ ಉಪದೇಶಿಸುವಂತಹ ಗುಣ ಅತ್ಯವಶ್ಯಕವಾಗಿರುತ್ತದೆ. ಆಕೃತಿಯನ್ನೋ ವೇಷಭೂಷಣವನ್ನೋ ಗಮನಿಸದೆ ಮೇಲೆ ತಿಳಿಸಿದ ಗುಣವನ್ನು ಹೊಂದಿರುವ ಸದ್ಗುರುವನ್ನು ಆಶ್ರಯಿಸಿ ನಾವು ಈ ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಜ್ಞಾನೋಪದೇಶದ ಮೂಲಕ ಸನಾತನ ಧರ್ಮವನ್ನು ನಮ್ಮ ಈ ವೈದಿಕ ಪರಂಪರೆಯನ್ನು ಕಾಪಾಡಿದ ಪರಮೇಶ್ವರನ ಅವತಾರಿಗಳಾದ ಶ್ರೀ ಶಂಕರ ಭಗವತ್ಪಾದಾಚಾರ್ಯರನ್ನು ನಾವು ಇಂದು ಪೂಜಿಸುತ್ತೇವೆ. ಯಾವೊಬ್ಬ ವಿವೇಕಿಯೂ ಅವರನ್ನು ಗೌರವಿಸದೇ ಇರಲಾರ.

ಈ ವಿದ್ಯೆಯಲ್ಲಿ ಲೌಕಿಕ ವಿದ್ಯೆ ಮತ್ತು ಅಲೌಕಿಕ ವಿದ್ಯೆ ಎಂಬ ಎರಡು ವಿಭಾಗಗಳಿವೆ. ರೋಗದ ಉಪಶಮನಕ್ಕೆ ಸೇವಿಸಬೇಕಾದ ಔಷಧದ ಬಗ್ಗೆ, ಸುಖವಾಗಿ ವಾಸಿಸಲು ಬೇಕಾದ ಕಟ್ಟಡ ನಿರ್ವಣದ ಬಗ್ಗೆ. ಹೀಗೆ ಈ ಪ್ರಪಂಚದಲ್ಲಿ ಈ ಜನ್ಮದಲ್ಲಿ ಪಡೆಯಬೇಕಾದ ವಿಷಯಗಳ ಬಗ್ಗೆ ಇರುವ ಜ್ಞಾನ ಭಾಷಾಜ್ಞಾನ ಗಣಿತ ವಿಜ್ಞಾನ ಹೀಗೆ ಪ್ರಸಿದ್ಧವಾದದ್ದು ಲೌಕಿಕ ವಿದ್ಯೆಯಾಗಿದೆ.

ಅಲೌಕಿಕ ವಿದ್ಯೆಯು ಪರಾವಿದ್ಯಾ ಅಪರಾವಿದ್ಯಾ ಎಂಬ ವಿಭಾಗವನ್ನು ಹೊಂದಿದೆ. ಜನ್ಮ ಜನ್ಮಾಂತರದ ವಿಷಯಗಳನ್ನೂ ಬೋಧಿಸುವ, ಅದರ ಕಾರ್ಯಕಾರಣಗಳನ್ನು ವಿಶದಪಡಿಸುವ ವಿದ್ಯೆಯಾಗಿದೆ. ಧರ್ವಚರಣೆ, ವಿಧಿ-ನಿಷೇಧಗಳ ಜ್ಞಾನವನ್ನು ನೀಡಿ ಈ ಸಂಸಾರದಲ್ಲಿ ಸುಖವಾಗಿರಲು ಸಾಧನವಾಗುವ ವಿದ್ಯೆ ಅಪರಾವಿದ್ಯಾ. ಈ ಲೋಕದಲ್ಲಲ್ಲದೆ ಮುಂದಿನ ಲೋಕಗಳಲ್ಲೂ ಸಂಸಾರಚಕ್ರದೊಳಗೆ ಫಲವನ್ನು ಕೊಡುವ ಅಪರಾವಿದ್ಯೆಯು ಲೌಕಿಕ ವಿದ್ಯೆಗಿಂತ ಶ್ರೇಷ್ಠವಾದರೂ ಸಂಸಾರಬಂಧನವನ್ನು ನಾಶ ಮಾಡುವ ಪರಾವಿದ್ಯೆಗಿಂತ ಶ್ರೇಷ್ಠವಾಗಿಲ್ಲ.

ಪರಾವಿದ್ಯೆಯು ಈ ಸಂಸಾರದಿಂದ ಬಿಡುಗಡೆಯನ್ನು ಹೊಂದಲು ನಿತ್ಯಸುಖಸ್ವರೂಪವಾದ ಮೋಕ್ಷವನ್ನು ಪಡೆಯಲು ಮಾರ್ಗವನ್ನು ತಿಳಿಸುವುದರಿಂದ ಅದು ಅತ್ಯಂತ ಶ್ರೇಷ್ಠವಾಗಿದೆ. ಆದ್ದರಿಂದಲೇ ಈ ಪರಾವಿದ್ಯೆಯನ್ನು ವೇದಾಂತವಿದ್ಯಾ, ಆತ್ಮವಿದ್ಯಾ, ಬ್ರಹ್ಮವಿದ್ಯಾ ಎಂದು ಕರೆಯುತ್ತೇವೆ. ಇಂತಹ ಜ್ಞಾನವನ್ನು ನೀಡುವ ಕಾರಣದಿಂದಲೇ ಈ ವಿದ್ಯೆಯಷ್ಟೇ ಉತ್ಕೃಷ್ಟತೆಯನ್ನು ನಾವು ಗುರುಪರಂಪರೆಗೆ ನೀಡಬೇಕಾಗಿದೆ.

ಸದಾಶಿವ ಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ |

ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್ ||

ಎಂಬ ಶ್ಲೋಕದಿಂದ ಸದಾಶಿವನಿಂದ ಮೊದಲ್ಗೊಂಡ ನಮ್ಮ ಗುರುಪರಂಪರೆಯನ್ನು ತಿಳಿದುಕೊಳ್ಳಬಹುದು. ಇದನ್ನೇ ನಾರಾಯಣಂ ಪದ್ಮಭುವಂ ವಸಿಷ್ಠಂ ಎಂಬ ಶ್ಲೋಕದಲ್ಲಿ ವಿಶದವಾಗಿ ಹೇಳಿದೆ. ನಾರಾಯಣ ಮತ್ತು ಸದಾಶಿವರಲ್ಲಿ ಯಾವುದೇ ಭೇದವಿಲ್ಲವೆಂಬ ಕಾರಣದಿಂದಲೇ ಒಂದೊಂದು ಶ್ಲೋಕದಲ್ಲಿ ಈ ಒಂದೊಂದು ಹೆಸರನ್ನು ತೆಗೆದುಕೊಳ್ಳಲಾಗಿದೆಯಷ್ಟೇ. ಭಗವಂತನಿಂದಲೇ ಮೊದಲ್ಗೊಂಡ ನಮ್ಮ ಈ ಗುರುಪರಂಪರೆಯನ್ನು ನಾವು ಈ ಶ್ಲೋಕದಿಂದ ತಿಳಿದುಕೊಳ್ಳಬಹುದು.

ಭಗವಂತನು ಕೃಷ್ಣನ ರೂಪದಲ್ಲಿ ಗೀತೆಯನ್ನು ಉಪದೇಶಿಸಿದ್ದಾನೆ. ಶಂಕರಾಚಾರ್ಯರ ರೂಪದಲ್ಲಿ ಅದ್ವೈತ ತತ್ತ್ವವನ್ನು ಉಪದೇಶಿಸಿದ್ದಾನೆ. ಅಂತೆಯೇ ಮೌನವ್ಯಾಖ್ಯಾನದಿಂದಲೇ ಉಪದೇಶಿಸಿದ ದಕ್ಷಿಣಾಮೂರ್ತಿ ರೂಪವನ್ನೂ ಹೊಂದಿದ್ದಾನೆ.

ಈ ಗುರುಪರಂಪರೆಯಲ್ಲಿ ಭಗವಾನ್ ವೇದವ್ಯಾಸರು ಅತ್ಯಂತ ಪ್ರಧಾನರಾಗಿದ್ದಾರೆ. ವೇದಗಳನ್ನು ವಿಭಾಗಿಸಿ, ಅಷ್ಟಾದಶಾದಿ ಪುರಾಣಗಳನ್ನು, ಮಹಾಭಾರತಾದಿ ಇತಿಹಾಸ ಗ್ರಂಥಗಳನ್ನು, ಬ್ರಹ್ಮಸೂತ್ರಗಳನ್ನು ರಚಿಸಿದವರಾಗಿ ಅದ್ವೈತ ತತ್ತ್ವವನ್ನು ಉಪದೇಶಿಸಿದ್ದಾರೆ. ಇದೇ ತತ್ತ್ವವನ್ನು ಶ್ರೀ ಶಂಕರ ಭಗವತ್ಪಾದಾಚಾರ್ಯರು ನಮಗೆ ತಿಳಿಸಿದ್ದಾರೆ. ಅವರ ನಾಲ್ವರು ಶಿಷ್ಯರಲ್ಲಿ ಪ್ರಧಾನರಾದ

ಶ್ರೀ ಸುರೇಶ್ವರಾಚಾರ್ಯರಿಂದ ಮೊದಲ್ಗೊಂಡ ಈ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲಿ ವಿದ್ಯಾರಣ್ಯರೇ ಮೊದಲಾದ ಮಹೋನ್ನತ ಯತಿವರೇಣ್ಯರು ನಮ್ಮನ್ನು ಅನುಗ್ರಹಿಸಿದ್ದಾರೆ.

ಪ್ರಸ್ತುತ ಈ ಪೀಠದಲ್ಲಿಂದು ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರು ವಿರಾಜಮಾನರಾಗಿದ್ದಾರೆ. ಅಂತಹ ಈ ವಿಶೇಷವಾದ, ಸನಾತನ ಧರ್ಮದ ಮೂಲಭೂತವಾದ ಗುರುಪರಂಪರೆಯನ್ನು ಪೂಜಿಸುವುದರಿಂದ ನಾವು ಶ್ರೇಷ್ಠವಾದ ಎಲ್ಲವನ್ನೂ ಪೂಜಿಸಿದಂತಾಗುತ್ತದೆ. ಈ ನಮ್ಮ ಪರಂಪರೆಯನ್ನು ಪೂಜಿಸುವ ವಿಶೇಷ ದಿನವೇ ಆಷಾಢ ಪೂರ್ಣಿಮೆ. ಆದ್ದರಿಂದಲೇ ಇದನ್ನು ಗುರುಪೂರ್ಣಿಮೆ, ವ್ಯಾಸಪೂರ್ಣಿಮೆ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಈ ದಿನ ಭಗವಾನ್ ವೇದವ್ಯಾಸರನ್ನು ಶಂಕರಾಚಾರ್ಯರನ್ನು ಮೊದಲ್ಗೊಂಡು ನಮ್ಮ ಗುರುಪರಂಪರೆಯನ್ನು ಪೂಜಿಸಿ ಯತಿಗಳು ಚಾತುರ್ವಸ್ಯ ವ್ರತ ಕೈಗೊಳ್ಳುತ್ತಾರೆ. ಭಕ್ತಜನರಾದ ತಾವೆಲ್ಲರೂ ಈ ಪವಿತ್ರ ದಿನ ವೇದವ್ಯಾಸರ, ಶಂಕರರ ಮತ್ತು ನಮ್ಮ ಗುರುಪರಂಪರೆಯ ಪೂಜೆಯನ್ನು ಮಾಡಿ, ಸ್ಮರಿಸಿ ಕೃತಾರ್ಥರಾಗಬೇಕು. ಎಲ್ಲರಿಗೂ ಶ್ರೀ ಶಾರದಾ ಚಂದ್ರಮೌಳೀಶ್ವರರ ಮತ್ತು ಜಗದ್ಗುರು ಶ್ರೀ ಭಾರತೀ ತೀರ್ಥರ ಪರಿಪೂರ್ಣ ಅನುಗ್ರಹವಿರಲಿ. ತದ್ವಾರಾ ಎಲ್ಲರಿಗೂ ಶ್ರೇಯಸ್ಸು ಲಭಿಸಲಿ ಎಂದು ನಮ್ಮ ಆಶೀರ್ವಾದವನ್ನು ತಿಳಿಸುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net