

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಕೆಲವು ಲೋಪಗಳು ಕಂಡುಬಂದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹಾಲೇಖಪಾಲರ ಕಚೇರಿ ನಿಖರ ಉತ್ತರ ಬಯಸಿರುವ ಬೆಳವಣಿಗೆ ನಡೆದಿದೆ.
ಯೋಜನೆಯ ದತ್ತಾಂಶವನ್ನು ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗವು ತೀವ್ರ ಪರಿಶೀಲನೆಗೆ ಒಳಪಡಿಸಿದೆ. ಅಲ್ಲಿ ಬಂದ ವಿಶ್ಲೇಷಣೆಯಿಂದ ಯೋಜನೆಯ ಅನುಷ್ಠಾನದಲ್ಲಿ ಹಲವಾರು ಲೋಪ ಮತ್ತು ಸಂಭಾವ್ಯ ತಪ್ಪು ನಡೆಗಳು ಕಂಡು ಬಂದಿವೆ. ಮುಖ್ಯವಾಗಿ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ಫಲಾನುಭವಿಗಳು ಹಂಚಿಕೊಂಡಿರುವುದು ಡೇಟಾ ಅನಾಲಿಟಿಕ್ಸ್ ಬಳಕೆಯಿಂದ ಸ್ಪಷ್ಟವಾಗಿದೆ.
19,020 ಫಲಾನುಭವಿಗಳು ಜಂಟಿಯಾಗಿ ಅಥವಾ ಒಟ್ಟಿಗೆ ಒಂದೇ ಖಾತೆ ಸಂಖ್ಯೆ ಹೊಂದಿದ್ದಾರೆ. ಫಲಾನುಭವಿ ಬೇರೆಯವರ ಖಾತೆ ಸಂಖ್ಯೆಯನ್ನು ಹೇಗೆ ನೀಡಿದರು ಅಥವಾ ಇಲಾಖೆಯವರು ಅದನ್ನು ಹೇಗೆ ಬಳಸಿಕೊಂಡರು ಎಂಬುದು ಕುತೂಹಲದ ವಿಚಾರವಾಗಿದೆ. ಅಲ್ಲದೆ ಒಂದೇ ಖಾತೆಗೆ ಬರುವ ಹಣವನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬ ಕುತೂಹಲವೂ ಇದೆ.
ಯೋಜನೆಯಡಿ ಈವರೆಗೆ ಒಟ್ಟು 30 ಕಂತು ಪಾವತಿಯಾಗಿದ್ದು, ಇದೇ ಫಲಾನುಭವಿಗಳಿಗೆ ಕೆಲವು ನಿರ್ದಿಷ್ಟ ತಿಂಗಳಲ್ಲಿಯೇ ಸುಮಾರು 1.80 ಕೋಟಿ ರೂ. ಮೊತ್ತವನ್ನು 8,995 ಖಾತೆಗೆ ಪುನಃ ಪಾವತಿ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನೊಂದು ಅಚ್ಚರಿ ವಿಚಾರವೆಂದರೆ ಯೋಜನೆಗೆ ಒಳಪಟ್ಟಿರುವ ಫಲಾನುಭವಿಗಳು ಪದೇಪದೆ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಇಂತಹ 10,06,308 ದಾಖಲೆಗಳು ಪತ್ತೆಯಾಗಿದೆ.
ಬ್ಯಾಂಕ್ ಖಾತೆ ವಿವರಗಳೇ ಇಲ್ಲದ ಫಲಾನುಭವಿಗಳಿಗೂ ಕೋಟ್ಯಂತರ ರೂ. ಪಾವತಿಸಲಾಗಿದೆ. ಬ್ಯಾಂಕ್ ಖಾತೆ ಸಂಖ್ಯೆಗಳನ್ನು ದಾಖಲಿಸಿಕೊಳ್ಳದೆಯೇ ಒಟ್ಟು 23,262 ಖಾತೆಗಳಿಗೆ ಪಾವತಿ ಮಾಡಲಾಗಿದ್ದು, ಇದರ ಒಟ್ಟು ಮೊತ್ತ ಸುಮಾರು 46.52 ಕೋಟಿ ರೂ.ಗಳಾಗಿದ್ದು, ಸೂಕ್ತ ವಿವರಣೆ ನೀಡುವಂತೆ ವರದಿಯಲ್ಲಿ ಕೇಳಲಾಗಿದೆ.
‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಮೂರು ವರ್ಷ ಗಳನ್ನು ಪೂರೈಸುವತ್ತ ಸಾಗಿದೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬಿರುವ ಯೋಜನೆಯು, ಇದೀಗ ಫಲಾನುಭವಿಗಳ ಖಾತೆಗೆ ಬರೋಬ್ಬರಿ 75 ಸಾವಿರ ಕೋಟಿ ರೂ. ಧನಸಹಾಯ ತಲುಪಿಸುವ ಐತಿಹಾಸಿಕ ಮೈಲಿಗಲ್ಲಿನ ಸಮೀಪದಲ್ಲಿದೆ. ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಯೋಜನೆಯಡಿ ನೋಂದಾಯಿತ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರಸಕ್ತ 2026-27ರ ಮೊದಲ ಕಂತಿನ ವೇಳೆಗೆ ಬರೋಬ್ಬರಿ 1,30,17,226 (1.30 ಕೋಟಿಗೂ ಹೆಚ್ಚು) ತಲುಪಿದೆ.
ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ (ಇಡಿಸಿಎಸ್) ನಿಂದ ಫಲಾನುಭವಿಗಳ ಪಟ್ಟಿ ಮತ್ತು ಇತರ ವಿವರಗಳನ್ನು ಒದಗಿಸದಿರುವುದು ಆಡಿಟ್ ಪ್ರಕ್ರಿಯೆಗೆ ಹಿನ್ನಡೆಯುನ್ನುಂಟು ಮಾಡಿದೆ. ಬ್ಯಾಂಕ್ ಖಾತೆಗಳು ಜೋಡಣೆಯಾಗದಿರುವುದು, ಅಸ್ತಿತ್ವದಲ್ಲಿಲ್ಲದ ಖಾತೆಗಳು ಹಾಗೂ ಅನರ್ಹ ಫಲಾನುಭವಿಗಳ ವಿವರಗಳನ್ನು ಒಳಗೊಂಡ ಫಲಾನುಭವಿಗಳ ಪಟ್ಟಿಯನ್ನು ಈ ಹಿಂದೆ ಎಜಿ ಆಡಿಟ್ನ ದತ್ತಾಂಶ ವಿಶ್ಲೇಷಣಾ ಕೋಶಕ್ಕೆ ಒದಗಿಸಲಾಗಿರಲಿಲ್ಲ. ಪದೇಪದೆ ಜ್ಞಾಪನಾ ಪತ್ರಗಳನ್ನು ಕಳುಹಿಸಿದರೂ ಇಲಾಖೆಯು ರದ್ದುಪಡಿಸಲಾದ ಫಲಾನುಭವಿಗಳ ವಿವರಗಳು, ಗುರುತಿನ ಚೀಟಿ, ರದ್ದುಪಡಿಸಿದ ದಿನಾಂಕ ಮತ್ತು ಕಾರಣಗಳನ್ನು ನೀಡಲು ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ಹೊರಹಾಕಿದೆ.
ಆರಂಭಿಕ ತಿಂಗಳಲ್ಲಿ 1.06 ಕೋಟಿ ಫಲಾನುಭವಿಗಳಿಗೆ ಮಾಸಿಕ ಎರಡು ಸಾವಿರದಂತೆ ಸಂದಾಯವಾಗಿತ್ತು. ಅವರೆಲ್ಲರ ಖಾತೆಗೆ ಈವರೆಗೆ ಬರೋಬ್ಬರಿ 60 ಸಾವಿರ ರೂಪಾಯಿ ಸಂದಾಯವಾಗಿದೆ.
ಯೋಜನೆ ಆರಂಭವಾಗಿ ಇಂದಿನವರೆಗೆ ಸರ್ಕಾರವು 72,251.51 ಕೋಟಿ ರೂ.ಗಳನ್ನು ಖಾತೆಗಳಿಗೆ (ಡಿಬಿಟಿ) ವರ್ಗಾಯಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕಂತುಗಳು ಪೂರ್ಣಗೊಳ್ಳುತ್ತಿದ್ದಂತೆ ಈ ಮೊತ್ತವು 75 ಸಾವಿರ ಕೋಟಿ ರೂ. ಗಡಿ ದಾಟಲಿದೆ. ಆರಂಭಿಕ ವರ್ಷವಾದ 2023-24ರಲ್ಲಿ 18,103.88 ಕೋಟಿ ರೂ.ಗಳಿಂದ ಆರಂಭವಾದ ಈ ಆರ್ಥಿಕ ನೆರವು, ಫಲಾನುಭವಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ವೃದ್ಧಿಸುತ್ತಾ ಸಾಗಿರುವುದು ಯೋಜನೆ ನಿರಂತರತೆಗೆ ಸಾಕ್ಷಿಯಾಗಿದೆ.
ಫಲಾನುಭವಿಗಳ ಸಂಖ್ಯೆ ಏರಿಕೆ: 2023-24ನೇ ಸಾಲಿನ ಮೊದಲ ಕಂತಿನಲ್ಲಿ 1,06,09,155 ರಷ್ಟಿದ್ದ ಮಹಿಳೆಯರ ಸಂಖ್ಯೆ, ಎಂಟನೇ ಕಂತಿನ ವೇಳೆಗೆ 1,20,04,970 ಕ್ಕೆ ಏರಿಕೆಯಾಗಿತ್ತು. 2024-25ನೇ ಸಾಲಿನ 10ನೇ ಕಂತಿನ ವೇಳೆಗೆ 1,22,42,835 ಕ್ಕೆ ತಲುಪಿತು. ಇನ್ನು 2025-26ರ ಸಾಲಿನಲ್ಲಿ ಈ ಬೆಳವಣಿಗೆ ಮತ್ತಷ್ಟು ವೇಗ ಪಡೆದುಕೊಂಡು, 1,24,03,113 ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2026-27) ಈಗಾಗಲೇ ಮೊದಲ ಕಂತಿನಲ್ಲೇ 1,23,38,677 ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ.
ಗೃಹಲಕ್ಷ್ಮಿ ವಿಚಾರದಲ್ಲಿ ವಿರೋಧ ಪಕ್ಷವು ಐದು ಸಾವಿರ ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿಕೊಂಡೇ ಬಂದಿದೆ. ಎರಡು ವರ್ಷಗಳಲ್ಲಿ ಒಟ್ಟು ಮೂರು ಕಂತುಗಳು ಫಲಾನುಭವಿಗಳಿಗೆ ಲಭ್ಯವಾಗಿಲ್ಲ. 2024-25ರಲ್ಲಿ 10 ಕಂತುಗಳು ಹಾಗೂ 2025-26ರಲ್ಲಿ 11 ಕಂತುಗಳು ಬಿಡುಗಡೆಯಾಗಿದ್ದು, ಒಟ್ಟು 3 ಕಂತುಗಳು ಬಾಕಿ ಉಳಿದಿವೆ.ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸುವ ನಿರೀಕ್ಷೆಯಿದೆ.