ನೂತನ ಸ್ಪೀಕರ್ ಜಿ.ಎಸ್.ಪಾಟೀಲ್‌ಗೆ ವಿಧಾನಸಭೆ ನಡೆಸಲು ನೂರೆಂಟು ಸವಾಲು ಮೇಲ್ಮನೆಯಲ್ಲಿ ಸಲೀಂಗೆ ಎಲ್ಲ ಸಲೀಸಲ್ಲ!

gs patil
gs patil
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ವಿವಿಧ ಸಂಸದೀಯ ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು
  • ಅಧಿಕಾರಿಗಳು ಸರಿಯಾದ ಮತ್ತು ನಿಖರವಾದ ಉತ್ತರ ನೀಡುವಂತೆ ಜವಾಬ್ದಾರಿ ನಿಗದಿಪಡಿಸುವುದು.

ಶಿವಾನಂದ ತಗಡೂರು, ಬೆಂಗಳೂರು:

ಅತಿರಥ ಮಹಾರಥರು ನಿಭಾಯಿಸಿದ್ದ ವಿಧಾನಸಭೆಯ 18ನೇ ಸ್ಪೀಕರ್ ಹುದ್ದೆ ಅಲಂಕರಿಸಿರುವ
ರೋಣ ಕ್ಷೇತ್ರದ ಹಿರಿಯ ಶಾಸಕ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್. ಪಾಟೀಲ್) ಎದುರು ಸಾಲು ಸಾಲುಸವಾಲುಗಳಿವೆ.
ಸ್ಪೀಕರ್ ಕುರ್ಚಿ ಮುಳ್ಳಿನ ಗದ್ದುಗೆ ಎನ್ನುವುದು ಆ ಸ್ಥಾನ ಅಲಂಕರಿಸಿದ ಎಲ್ಲರ ಅನುಭವದ ಮಾತು. ಈ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಜಿ.ಎಸ್.ಪಾಟೀಲ್ ಅವರು, ಸದನವನ್ನು ಸೌಹಾರ್ದಯುತವಾಗಿ ಮುನ್ನಡೆಸುವ ಮತ್ತು ಶಾಸನಸಭೆಯ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಹೇಗೆ ಎಚ್ಚರದ ಮತ್ತು ಜವಬ್ದಾರಿಯುತ ಹೆಜ್ಜೆ ಇಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿದೆ.
ವಿರೋಧ ಪಕ್ಷಗಳ ವಿಶ್ವಾಸಗಳಿಕೆ:
ವಿಪಕ್ಷಗಳಾದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿಶ್ವಾಸ ಗಳಿಸುವುದು ಹಾಗೂ ಆಡಳಿತರೂಢ ಕಾಂಗ್ರೆಸ್ ಪಕ್ಷದವರ ಕಣ್ಣು ಕೆಂಪಗಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು.
ಶಿಸ್ತು ಮತ್ತು ಕಲಾಪದ ಅವಧಿ:
ಸದನದಲ್ಲಿ ಗದ್ದಲ, ಧರಣಿಗಳನ್ನು ನಿಯಂತ್ರಿಸಿ, ನಿಗದಿತ ದಿನಗಳ ಕಾಲ ಸಾರ್ವಜನಿಕ ಹಿತಾಸಕ್ತಿಯ ಗಂಭೀರ ಚರ್ಚೆಗಳಿಗೆ ಸಮಯಾವಕಾಶ ಒದಗಿಸುವುದು.
ತಟಸ್ಥತೆ ಕಾಯ್ದುಕೊಳ್ಳುವುದು:
ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರೂ, ಸ್ಪೀಕರ್ ಪೀಠಕ್ಕೆ ತಕ್ಕಂತೆ ಪಕ್ಷಪಾತವಿಲ್ಲದೆ ತಟಸ್ಥವಾಗಿ ಕಾರ್ಯನಿರ್ವಹಿಸುವುದು.
ಶಾಸಕರ ಅಶಿಸ್ತು ಮತ್ತು ಹಕ್ಕುಚ್ಯುತಿ:
ಕಲಾಪದ ವೇಳೆ ಶಾಸಕರ ಅಸಂಸದೀಯ ನಡವಳಿಕೆಗೆ ಕಡಿವಾಣ ಹಾಕುವುದು ಮತ್ತು ಪಕ್ಷಾಂತರ ಅಥವಾ ಹಕ್ಕುಚ್ಯುತಿ ದೂರುಗಳ ಬಂದಾಗ ನಿಷ್ಪಕ್ಷಪಾತ ತೀರ್ಮಾನ ಕೈಗೊಳ್ಳುವುದು.
ಗ್ರಾಮೀಣ ಸಮಸ್ಯೆಗಳಿಗೆ ಆದ್ಯತೆ:
ತಾವೂ ಸಹ ಗದಗ ಜಿಲ್ಲೆಯ ಹಿರಿಯ ನಾಯಕರಾಗಿದ್ದು, ಹಿಂದುಳಿದ ಪ್ರದೇಶಗಳ ಹಾಗೂ ರೈತರ ಸಮಸ್ಯೆಗಳ ಕುರಿತು ಸದನದಲ್ಲಿ ಹೆಚ್ಚಿನ ಚರ್ಚೆಗೆ ಅವಕಾಶ ಮಾಡಿಕೊಡುವುದು.

ಶಾಸಕರ ಹಾಜರಾತಿ ಹೆಚ್ಚಿಸುವುದು:

ಕಲಾಪದ ವೇಳೆ ಹಲವು ಶಾಸಕರು ಗೈರುಹಾಜರಾಗುವುದನ್ನು ತಡೆದು, ಸದನದಲ್ಲಿ ಕನಿಷ್ಠ ಹಾಜರಾತಿ ಕಾಯ್ದುಕೊಳ್ಳುವುದು ಮತ್ತು ಶಾಸಕರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು.
ಹೊಸ ಶಾಸಕರಿಗೆ ತರಬೇತಿ:
ಮೊದಲ ಬಾರಿಗೆ ಆಯ್ಕೆಯಾಗಿ ಬಂದಿರುವ ಶಾಸಕರಿಗೆ ಶಾಸನಸಭಾ ನಿಯಮಗಳು, ಸಂಸದೀಯ ಮೌಲ್ಯಗಳು ಹಾಗೂ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವ ಬಗ್ಗೆ ಸೂಕ್ತ ತರಬೇತಿ ನೀಡುವಿಕೆ.
ಬಜೆಟ್ ಹಾಗೂ ವಿಧೇಯಕಗಳ ಚರ್ಚೆ:
ತರಾತುರಿಯಲ್ಲಿ ವಿಧೇಯಕಗಳನ್ನು ಅಂಗೀಕರಿಸುವ ಬದಲು, ಶಾಸಕರು ಪ್ರತಿಯೊಂದು ವಿಧೇಯಕದ ಮೇಲೆ ಸುದೀರ್ಘ ಚರ್ಚೆ ನಡೆಸಲು ಪೂರಕ ವಾತಾವರಣ ನಿರ್ಮಿಸುವುದು.
ಶಾಸನಸಭೆಯ ತಂತ್ರಜ್ಞಾನ ನವೀಕರಣ:
ಕಲಾಪದ ಪ್ರಕ್ರಿಯೆಗಳನ್ನು ಕಾಗದರಹಿತಗೊಳಿಸುವುದು ಮತ್ತು ಸಾರ್ವಜನಿಕರಿಗೆ ಕಲಾಪದ ನೇರ ಪ್ರಸಾರವನ್ನು ಸುಲಭವಾಗಿ ತಲುಪಿಸುವುದು. ಆಡಳಿತ ಮತ್ತು ಸಂಸದೀಯ ಮೌಲ್ಯಗಳ ಸವಾಲು
ಆಡಳಿತ ಪಕ್ಷವನ್ನು ಹೊಣೆಗಾರಿಕೆ:
ವಿರೋಧ ಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಸರ್ಕಾರಿ ಸಚಿವರು ಹಾಗೂ ಅಧಿಕಾರಿಗಳು ಸರಿಯಾದ ಮತ್ತು ನಿಖರವಾದ ಉತ್ತರ ನೀಡುವಂತೆ ಜವಾಬ್ದಾರಿ ನಿಗದಿಪಡಿಸುವುದು.
ಸದನದ ಸಮಿತಿಗಳ ಸಕ್ರಿಯಗೊಳಿಸುವಿಕೆ:
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ವಿವಿಧ ಸಂಸದೀಯ ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಮತ್ತು ಅವುಗಳ ವರದಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದು.
ಶಾಸನಸಭೆಯ ಘನತೆ ಮರುಸ್ಥಾಪನೆ:
ಸಭಾತ್ಯಾಗ, ಸದನದ ಬಾವಿಗಿಳಿದು ಪ್ರತಿಭಟನೆ ಮತ್ತು ಗಲಾಟೆಗಳ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆದು ಶಾಸನಸಭೆಯ ಉನ್ನತ ಗೌರವವನ್ನು ಎತ್ತಿಹಿಡಿಯುವುದು.
ಸ್ಪೀಕರ್‌ಗಳಾಗಿ ಇತಿಹಾಸದಲ್ಲಿ
ಉಳಿದ ಹೋದ ಪ್ರಮುಖರಿವರು:
ವಿಧಾನಸಭೆಗೆ ವಿ.ವೆಂಕಟಪ್ಪ (1952)ಮೊದಲ ಸ್ಪೀಕರ್. ಪ್ರಜಾಪ್ರಭುತ್ವದ ಶಾಸನಸಭಾ ಪರಂಪರೆ ಮತ್ತು ಕಲಾಪದ ನಿಯಮಾವಳಿಗಳಿಗೆ ಗಟ್ಟಿ ಬುನಾದಿ ಹಾಕಿಕೊಟ್ಟವರು.
ಎಚ್.ಸಿದ್ದಯ್ಯ ಮತ್ತು ಕೊಂಡಜ್ಜಿ ಬಸಪ್ಪ ಅವರು ಶಿಸ್ತು ಮತ್ತು ಘನತೆಯಿಂದ ಕಲಾಪಗಳನ್ನು ನಡೆಸಿ, ಸದನದ ಗೌರವವನ್ನು ಎತ್ತಿಹಿಡಿದ ಹಿರಿಯ ನಾಯಕರು.
ಬಿ. ವೈಕುಂಠ ಬಾಳಿಗ ಅವರು ವಿಧಾನಸಭೆಯ ಸುದೀರ್ಘ ಕಲಾಪಗಳನ್ನು ಚಾಕಚಕ್ಯತೆಯಿಂದ ನಡೆಸಿದವರು. ಇವರ ಅವಧಿಯಲ್ಲಿ ಶಾಸನಸಭಾ ನಿಯಮಾವಳಿಗಳು ಮತ್ತು ಸಂಸದೀಯ ಪ್ರಕ್ರಿಯೆಗಳಿಗೆ ಸ್ಪಷ್ಟ ರೂಪುರೇಷೆ ದೊರೆಯಿತು.
ಕೆ.ಎಸ್.ನಾಗರತ್ನಮ್ಮ ಇತಿಹಾಸದಲ್ಲಿ ಮೊಟ್ಟಮೊದಲ ಸ್ಪೀಕರ್. ಧೈರ್ಯದಿಂದ ಕಲಾಪ ನಿರ್ವಹಿಸಿದವರು. ಎಸ್.ಎಂ.ಕೃಷ್ಣ ಮತ್ತು ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಹುದ್ದೆಯಿಂದಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಇತಿಹಾಸವೂ ಇದೆ.
1994ರಲ್ಲಿ ಜನತಾದಳ ಸರ್ಕಾರ ಬಂದಾಗ ರಮೇಶ್ ಕುಮಾರ್ ಅವರು ಪೂರ್ಣಾವಧಿಗೆ ಸ್ಪೀಕರ್ ಆಗಿದ್ದವರು. 2018 - 2019ರಲ್ಲಿ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ 19 ಶಾಸಕರು ರಾಜೀನಾಮೆ ನೀಡಿ ಸರ್ಕಾರದ ಪತನಕ್ಕೆ ಕಾರಣವಾದ ಸಂದರ್ಭದಲ್ಲಿ ನೀಡಿದ ಸ್ಪೀಕರ್ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.
ಹೋರಾಟದ ಹಿನ್ನೆಲೆಯಿಂದ ಬಂದ ಕಾಗೋಡು ತಿಮ್ಮಪ್ಪ ಅವರು ತಮ್ಮದೇ ಆದ ರೀತಿಯಲ್ಲಿ ಚಾಟಿ ಹಿಡಿದು ಸದನ ನಡೆಸಿದರೆ, ವಿಶ್ವೇಶ್ವರ ಕಾಗೇರಿ ಮತ್ತು ಯು.ಟಿ.ಖಾದರ್ ಸದನವನ್ನು ಸದಾ ಕ್ರೀಯಾಶೀಲವಾಗಿಟ್ಟವರು.
ಮೇಲ್ಮನೆಯಲ್ಲಿ ಸಲೀಂಗೆ ಎಲ್ಲ ಸಲೀಸಲ್ಲ!
ಹೋರಾಟ ಹಿನ್ನೆಲೆಯಿಂದ ಬಂದು ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿರುವ ಅನುಭವವಿರುವ ಸಲೀಂ ಅಹ್ಮದ್ ಮೇಲ್ಮನೆಯಲ್ಲಿ ಸಭಾಪತಿ ಸ್ಥಾನ ಅಲಂಕರಿಸಿದ್ದಾರೆ. ಅವರಿಗೂ ಇಂಥದ್ದೆ ಸವಾಲುಗಳಿದ್ದು, ಹಲವು ವೈರುಧ್ಯಗಳ ವಿರುದ್ದವೇ ಅವರು ಈಜಬೇಕಿದೆ. ಸದನ ಸಂಘರ್ಷದ ಹಾದಿಗೆ ಹೊರಳದಂತೆ, ಯಾವ ರೀತಿ ಸವಾಲಿನ ವಿರುದ್ದ ಈಜುವರು ಎನ್ನುವುದು ಸಹಜವಾಗಿ ಕುತೂಹಲ ಕೆರಳಿಸಿದೆ.
*ಹಿರಿಯರ ಮನೆ ಎಂದು ಕರೆಯಲ್ಪಡುವ ವಿಧಾನ ಪರಿಷತ್ತಿನಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಅವಕಾಶ ನೀಡದೆ, ಕಾಯ್ದೆ-ವಿಧೇಯಕಗಳ ಮೇಲೆ ಗಂಭೀರ ಹಾಗೂ ಸುದೀರ್ಘ ಬೌದ್ಧಿಕ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳುವುದು. ಮೇಲ್ಮನೆಯ ಬೌದ್ಧಿಕ ಮತ್ತು ಚರ್ಚಾ ಮಟ್ಟವನ್ನು ಎತ್ತಿಹಿಡಿಯುವುದು.
*ಮೇಲ್ಮನೆಯಲ್ಲಿ ಸದಸ್ಯರ ಹಾಜರಾತಿ ಹೆಚ್ಚಿಸುವುದು ಹಾಗೂ ಗದ್ದಲದಿಂದಾಗಿ ಕಲಾಪದ ಅಮೂಲ್ಯ ಸಮಯ ಪೋಲಾಗದಂತೆ ನಿಯಂತ್ರಿಸುವುದು.
*ವಿಧಾನ ಪರಿಷತ್ತಿಗೆ ವಿವಿಧ ಕ್ಷೇತ್ರಗಳಿಂದ (ಸ್ಥಳೀಯ ಸಂಸ್ಥೆಗಳು, ಶಿಕ್ಷಕರು, ಪದವೀಧರರು) ಆಯ್ಕೆಯಾಗಿರುವ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ಮಂಡಿಸಲು ಸೂಕ್ತ ಕಾಲಾವಕಾಶ ಒದಗಿಸುವುದು.

*ಕಲಾಪದ ವೇಳೆ ಹಲವು ಶಾಸಕರು ಗೈರುಹಾಜರಾಗುವುದನ್ನು ತಡೆದು, ಸದನದಲ್ಲಿ ಕನಿಷ್ಠ ಹಾಜರಾತಿ ಕಾಯ್ದುಕೊಳ್ಳುವುದು ಮತ್ತು ಶಾಸಕರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು. ಬೌದ್ಧಿಕ ಮತ್ತು ಚರ್ಚಾ ಮಟ್ಟವನ್ನು ಎತ್ತಿಹಿಡಿಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net