

ಆರ್.ಆರ್.ನಗರ : ರಾಜರಾಜೇಶ್ವರಿನಗರ ದಸರಾ ಅಂಗವಾಗಿ ವಿವಿಧ ದೇವರುಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆಯೊಂದಿಗೆ ವೈಭವದಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತಾಧಿಗಳು ಉತ್ಸವಕ್ಕೆ ಸಾಕ್ಷಿಯಾದರು.
ಮತ್ತಿಕೆರೆ ಶ್ರೀ ವೆಂಕಟೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ದಸರಾ ಉತ್ಸವದಲ್ಲಿ ನಗರ ದೇವತೆ ಅಣ್ಣಮ್ಮ, ಚಾಮುಂಡೇಶ್ವರಿ, ಸರ್ಕಲ್ ಮಾರಮ್ಮ, ಅಂಗಾಳಪರಮೇಶ್ವರಿ, ಮಹಾಲಕ್ಷ್ಮಿ, ಓಂಶಕ್ತಿ ಅಮ್ಮ, ವರಾಹಿ ಅಮ್ಮ, ಪ್ಲೇಗಮ್ಮ, ಹುಲಿಯೂರಮ್ಮ ದೇವರ ಪಲ್ಲಕ್ಕಿ ಉತ್ಸವದಲ್ಲಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶಮೂರ್ತಿ,ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ,ಅರ್ಚನ ವೆಂಕಟೇಶ್‌ಮೂರ್ತಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನಡೆದ ಪೂಜೆ, ಹೋಮ ಹವನ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾಗಿ ನಂತರ ಮೆರವಣಿಗೆಗೆ ಪುಪ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಪ್ರಮುಖ ರಸ್ತೆಗಳು ಭಕ್ತರಿಂದ ತುಂಬಿದ್ದು, ದಾರಿಯುದ್ದಕ್ಕೂ ಭಕ್ತರು ಪುಷ್ಪವೃಷ್ಟಿಗರೆದರು.
ಗಣೇಶ ಗುಡಿ ದೇವಸ್ಥಾನ, ಆಟದ ಮೈದಾನದಲ್ಲಿ ಜನ ಸಾಗರವೇ ಸೇರಿತ್ತು. ಕೇರಳ, ತಮಿಳುನಾಡು ಚಂಡೆಮೇಳ, ವೀರಗಾಸೆ, ಕತಕ್ಕಳಿ, ಗಾರುಡಿಗೊಂಬೆ, ಡೊಳ್ಳುಕುಣಿತ, ಪೂಜಾಕುಣಿತ, ನಗಾರಿ,ಯಕ್ಷಗಾನ, ನಂದಿಧ್ವಜ, ಕಂಸಾಳೆ, ಗೊರವನ ಕುಣಿತ, ಕರಡಿ ಕುಣಿತ ಸೇರಿ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ವೆಂಕಟೇಶಮೂರ್ತಿ, ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಉತ್ಸವವನ್ನು ಆಚರಣೆ ಮಾಡುವ ದಸರಾ ಪರಂಪರೆಯನ್ನು ಯುವ ಜನಾಂಗಕ್ಕೆ ತಿಳಿಸುವ ಕೆಲಸ ಮಾಡಲಾಗಿದೆ. ಈ ಉತ್ಸವದಲ್ಲಿ ಜಾತಿ,ಧರ್ಮ ಮೀರಿ ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಗ್ಗೂಡಿ ಆಚರಣೆಗೆ ಸಹಕಾರ ನೀಡಿದ್ದಾರೆ ಎಂದರು.
ಮತ್ತಿಕೆರೆ ಮಸೀದಿ ಸಮಿತಿ ಅಧ್ಯಕ್ಷ ಸಮೀಉಲ್ಲಾಖಾನ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಭಾವೈಕ್ಯತೆಗೆ ಸಾಕ್ಷಿಯಾದರು.