ಸೂಲಿಬೆಲೆ ಪಟ್ಟಣಕ್ಕೆ ಕಸದ ಕಂಟಕ / SULIBELE

ಸೂಲಿಬೆಲೆ ಪಟ್ಟಣದ ಕಾಲುವೆ ಗಿಡಗಂಟಿಗಳಿಂದ ಮುಚ್ಚಿಹೋಗಿರುವುದು.
ಸೂಲಿಬೆಲೆ ಪಟ್ಟಣದ ಕಾಲುವೆ ಗಿಡಗಂಟಿಗಳಿಂದ ಮುಚ್ಚಿಹೋಗಿರುವುದು.
Published on
ಮಂಜುನಾಥ್​ ಸೂಲಿಬೆಲೆ
ಹೊಸಕೋಟೆ ತಾಲೂಕಿನಲ್ಲಿ ಪ್ರಮುಖ ಹೋಬಳಿ ಎನಿಸಿರುವ ಸೂಲಿಬೆಲೆಯ ಸೂಲಿಬೆಲೆ ಪಟ್ಟಣ ಅಕ್ಷರಶ@ ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿದೆ.
ನಿಷೇಧಿತ ಪ್ಲಾಸ್ಟಿಕ್​ ಉತ್ಪನ್ನಗಳಿಗೆ ಕಡಿವಾಣ ಇಲ್ಲವಾದ್ದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ತ್ಯಾಜ್ಯದ ರಾಶಿ ರಾರಾಜಿಸುತ್ತಿವೆ. ರಸ್ತೆ ಬದಿಗಳು, ತಿರುವುಗಳು, ಮೋರಿಗಳು ಹೀಗೆ ಎಲ್ಲೆಂದರಲ್ಲಿ ಕಸದ ರಾಶಿಯಿಂದ ಪಟ್ಟಣ ಅವ್ಯವಸ್ಥೆಯ ತಾಣವಾಗಿ ರೂಪುಗೊಂಡಿದೆ. ಹೊಸಕೋಟೆ ತಾಲೂಕಿನ ಹೋಬಳಿಗಳ ಪೈಕಿ ಸೂಲಿಬೆಲೆ ದೊಡ್ಡ ಹೋಬಳಿಯಾಗಿದೆ. ಸೂಲಿಬೆಲೆ ಪಟ್ಟಣವೂ ಸಾಕಷ್ಟು ಮುಂದುವರಿದಿದ್ದು, ಶಾಲಾ&ಕಾಲೇಜು, ಆಸ್ಪತ್ರೆ ಸೇರಿ ಸಕಲ ಸವಲತ್ತುಗಳಿಂದ ಖ್ಯಾತಿ ಪಡೆದಿದೆ. ಆದರೆ, ಕಸ ನಿರ್ವಹಣೆ ಕೊರತೆಯಿಂದ ಸೂಲಿಬೆಲೆ ಪಟ್ಟಣಕ್ಕೆ ಕಸದ ರಾಶಿ ಶಾಪವಾಗಿ ಪರಿಣಮಿಸಿದೆ.
ವಾಣಿಜ್ಯ ವ್ಯವಹಾರಗಳಲ್ಲಿ ಪ್ಲಾಸ್ಟಿಕ್​ ಅವ್ಯಾಹತ: ಸೂಲಿಬೆಲೆ ಪಟ್ಟಣದಲ್ಲಿನ ಎಲ್ಲ ಅಂಗಡಿ ಮಳಿಗೆಗಳು, ಬೇಕರಿ, ಹೋಟೆಲ್​ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್​ ಬಳಕೆ ಅವ್ಯಾಹತವಾಗಿದೆ. ರಾಜಾರೋಷವಾಗಿ ಸಾರ್ವಜನಿಕವಾಗಿ ಕಾಣುವಂತೆಯೇ ಪ್ಲಾಸ್ಟಿಕ್​ ಕೈಚೀಲಗಳ ಬಳಕೆ ನಡೆಯುತ್ತಿದೆ. ಆದರೆ, ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೇಕರಿ, ಹೋಟೆಲ್​ ಹಾಗೂ ಇನ್ನಿತರ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವ ಸಾರ್ವಜನಿಕರು ಬಳಕೆ ಬಳಿಕ ಪ್ಲಾಸ್ಟಿಕ್​ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್​ ತ್ಯಾಜ್ಯದ ರಾಶಿಗೆ ಬೆಂಕಿ ಹಾಕುವುದರಿಂದ ಅವುಗಳಿಂದ ಏಳುವ ವಿಷಕಾರಿ ಹೊಗೆಯಿಂದ ಪಟ್ಟಣದಲ್ಲಿ ಅಪಾಯಕಾರಿ ವಾತಾವರಣ ನಿರ್ಮಾಣವಾಗುತ್ತಿದೆ.
ಕೂಗಳತೆಯಲ್ಲಿಯೇ ಅವ್ಯವಸ್ಥೆ: ಸೂಲಿಬೆಲೆ ಪಟ್ಟಣದ ಎಲ್ಲ ವಾರ್ಡ್​ಗಳಲ್ಲಿ ಇದೇ ಪರಿಸ್ಥಿತಿ ಎದ್ದು ಕಾಣುತ್ತಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕೂಗಳತೆ ದೂರದ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಕಂಡು ಬರುತ್ತಿದ್ದರೂ ಗ್ರಾಪಂ ಸಿಬ್ಬಂದಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಕೋಳಿ ಅಂಗಡಿಗಳ ತ್ಯಾಜ್ಯ : ಪಟ್ಟಣದಾದ್ಯಂತ ಇರುವ ಕೋಳಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕೋಳಿ ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ತಂದು ಸುರಿಯುತ್ತಿದ್ದಾರೆ. ಇದರಿಂದ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ತ್ಯಾಜ್ಯದ ಭಕ್ಷಣೆಗೆ ಮುಗಿಬೀಳುವ ಬೀದಿ ನಾಯಿಗಳು ದಾರಿ ಹೋಕರ ಮೇಲೆ ದಾಳಿ ನಡೆಸುವ ಸಂದರ್ಭಗಳು ಸಾಮಾನ್ಯವಾಗಿವೆ. ರಸ್ತೆ ಬದಿಗಳಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿಯನ್ನು ತೆರವುಗೊಳಿಸಿ ಎಷ್ಟೋ ವರ್ಷಗಳಾಗಿವೆ. ಸೊಳ್ಳೆ ನೊಣಗಳ ಕಾಟ ವಿಪರೀತವಾಗಿದೆ, ಸ್ಥಳಿಯವಾಗಿ ಪಟ್ಟಣ ರೋಗಗ್ರಸ್ತವಾಗುತ್ತಿದೆ. ಈ ಬಗ್ಗೆ ಗ್ರಾಪಂ ಪಿಡಿಒಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಪಂಚಾಯಿತಿಗೆ ಪತ್ರದ ಮೂಲಕ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಸೂಲಿಬೆಲೆ ಪಟ್ಟಣದ ಕೊಳಚೆ ನೀರು ಹರಿಯುವ ರಾಜಕಾಲುವೆ ಗಿಡ&ಗಂಟಿಗಳು ಮತ್ತು ಪ್ಲಾಸ್ಟಿಕ್​ ತ್ಯಾಜ್ಯದಿಂದ ತುಂಬಿ ನೀರು ಸರಾಗವಾಗಿ ಹರಿಯದೆ ಗಬ್ಬುನಾರುತ್ತಿದೆ. ಸೂಲಿಬೆಲೆ ಮುಖ್ಯರಸ್ತೆಯಲ್ಲಿರುವ ರಾಜಕಾಲುವೆಯ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಸೂಲಿಬೆಲೆ ಪಟ್ಟಣದ ಮುಖ್ಯ ರಸ್ತೆಯ ಎಲ್ಲ ಅಂಗಡಿಗಳ ತ್ಯಾಜ್ಯ ರಾಜಕಾಲುವೆ ಸೇರುತ್ತಿದೆ. ಸ್ವಚ್ಛತೆ ಕಾಪಾಡಬೇಕಾದ ಗ್ರಾಮ ಪಂಚಾಯಿತಿ ಜಾಣ ಕುರುಡು ಪ್ರದರ್ಶಿಸುತ್ತಿದೆ.

ಸೂಲಿಬೆಲೆಯಿಂದ ಗಿಡ್ಡಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಹೆದ್ದಾರಿಯ ಎರಡು ಬದಿ ಇರುವ ಸೂಲಿಬೆಲೆ ಪಟ್ಟಣದಿಂದ ಹೊರ ಹೋಗುವ ಕೊಳಚೆ ನೀರಿನ ರಾಜ ಕಾಲುವೆ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ತೊಡಕಾಗಿ ಗಬ್ಬುನಾರುತ್ತಿದೆ. ಕೋಳಿ ಅಂಗಡಿಗಳು ಹಾಗೂ ಹೋಟೆಲ್​ನವರು ಪ್ಲಾಸ್ಟಿಕ್​ ಮೂಟೆಗಳಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ಪರಿಸರ ಗಬ್ಬೆದ್ದು ನಾರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net