ಅಪ್ಪನೆಂದರೆ ಕುಟುಂಬದ ಕಣ್ಣನ್ನು ರಕ್ಷಿಸುವ ರೆಪ್ಪೆಯಿದ್ದಂತೆ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಅಲ್ಲಿಗೆ ಹೋಗಬೇಡ; ಅದನ್ನು ಮಾಡಬೇಡ; ಶಾಲೆಗೆ ಹೋಗು; ಇಲ್ಲವಾದರೆ ಅಪ್ಪ ಬೈತಾನೆ; ಹೊಡೀತಾನೆ ಎನ್ನುತ್ತಾ ಮಕ್ಕಳು ಅಪ್ಪನಿಂದ ದೂರವಿರಲು ಕಾರಣಳಾಗುತ್ತಾಳೆ. ಮಕ್ಕಳು ಬಾಲ್ಯದಿಂದಲೇ ಶಿಸ್ತನ್ನು ಪಾಲಿಸುತ್ತಾರೆ; ಸ್ವಚ್ಛತೆ-ಸಭ್ಯತೆಗಳನ್ನು ಕಲಿಯುತ್ತಾರೆ. ಚೆನ್ನಾಗಿ ಓದುತ್ತಾರೆ- ಪ್ರೀತಿಯಿಂದ ಅಲ್ಲ; ಅಪ್ಪನ ಮೇಲಿನ ಹೆದರಿಕೆಯಿಂದ! ಪರಿಣಾಮವಾಗಿ ಮಕ್ಕಳು ಮಾನಸಿಕವಾಗಿ ದೂರವಾಗಿ ಅಪ್ಪನಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಅಂತೆಯೇ ಅಪ್ಪನೆಂದರೆ, ಕಠೋರ ಮನಸ್ಸಿನ ನಿರ್ದಯಿ; ಶಿಸ್ತಿನ ಸಿಪಾಯಿ; ತಾವು ಕೇಳಿದ್ದನ್ನೆಲ್ಲಾ ಕೊಡಿಸದವನು, ಲೆಕ್ಕಮಾಡಿ ಪಾಕೆಟ್ ಮನಿ ಕೊಡುವವನು, ಅದಕ್ಕೂ ಲೆಕ್ಕ ಕೇಳುವವನು, ಮುದ್ದುಮಾಡದವನು, ಎಲ್ಲವನ್ನೂ ಪ್ರಶ್ನಿಸುವವನು, ಸ್ವಾತಂತ್ರ್ಯ ನೀಡದವನು, ತಮ್ಮ ಚಲನ-ವಲನ, ಗೆಳೆಯರ ಬಗ್ಗೆ ಸದಾ ಒಂದು ಕಣ್ಣಿಟ್ಟಿರುವವನು-ಹೀಗೆ ತರತರದ ನಿರ್ಬಂಧಗಳನ್ನು ಹೇರಿ ಮಕ್ಕಳ ಮನಸ್ಸಿನಿಂದ ದೂರವಾದವನು ಮತ್ತು ಅವರ ಪ್ರೀತಿಯಿಂದ ವಂಚಿತನಾದವನು.

ಅಮ್ಮನಾದರೋ, ಅಪ್ಪನನ್ನು ತೆಗಳಿ ಗುಟ್ಟುಗುಟ್ಟಾಗಿ ಮಕ್ಕಳು ಕೇಳಿದ್ದನ್ನೆಲ್ಲಾ ಕೊಟ್ಟು ಇಲ್ಲವೇ ಅಪ್ಪನಿಂದಲೇ ಕೊಡಿಸಿ, ಮುದ್ದುಮಾಡಿ ಮಕ್ಕಳ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡವಳು, ಆದುದರಿಂದಲೇ ಮಕ್ಕಳು ತಾಯಿಯ ಬಗ್ಗೆ ಮಾತ್ರ ಕತೆ-ಕಾದಂಬರಿ ಕವನ ಬರೀತಾರೆ, ಹಾಡುಗಳನ್ನು ಹಾಡುತ್ತಾರೆ, ಆದರೆ ಅಪ್ಪನ ಬಗ್ಗೆ ಒಂದು ಒಳ್ಳೆಯ ಶಬ್ದ ಹೆಚ್ಚಿನ ಮಕ್ಕಳ ಬಾಯಿಯಿಂದ ಬರುವುದೇ ಇಲ್ಲ! ನೋವಾದಾಗ ಅಮ್ಮಾ ಎಂದು ಕಿರುಚುತ್ತಾರೆಯೇ ಹೊರತು, ಅಪ್ಪಾ ಎಂದು ಕೂಗುವುದೇ ಇಲ್ಲ. ಆಣೆ ಹಾಕುವಾಗಲೂ ಅಮ್ಮನ ಹೆಸರಲ್ಲೇ ಆಣೆ ಹಾಕುತ್ತಾರೆಯೇ ಹೊರತು, ಅಪ್ಪನ ಹೆಸರಲ್ಲಿ ಅಲ್ಲ! ಅಪ್ಪ ಅದಕ್ಕೂ ಯೋಗ್ಯನಲ್ಲವೇ! ಅಪ್ಪಬೇಕು ತಮ್ಮ ಹೆಸರಿನ ಜತೆ ಅವನ ಹೆಸರನ್ನು ಸೇರಿಸಿಕೊಳ್ಳಲು ಮಾತ್ರ! ಅಮ್ಮನ ಮೂಲಕ ರವಾನೆಯಾದ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮಾತ್ರ!

ಇದುತರವೇ? ನಮ್ಮನ್ನು ಈ ಪ್ರಪಂಚಕ್ಕೆ ತಂದವಳು ಅಮ್ಮನೇ ಆದರೂ, ಪ್ರಪಂಚವನ್ನು ಪರಿಚಯಿಸಿದವನು ಅಪ್ಪನಲ್ಲವೇ? ಅಮ್ಮ ಮಮತೆಯಾದರೂ, ಅಪ್ಪ ಭದ್ರತೆಯಲ್ಲವೇ? ನಮಗೆ ಜೀವವನ್ನು ಇತ್ತವಳು ಅಮ್ಮನೇ. ಆದರೆ, ಜೀವಿಸುವ ಬಗೆಯನ್ನು ಕಲಿಸಿದವನು ಅಪ್ಪನಲ್ಲವೇ? ಅಮ್ಮ ಕುಟುಂಬದ ಕಣ್ಣಾದರೂ, ಅಪ್ಪ ಆ ಕಣ್ಣನ್ನು ರಕ್ಷಿಸುವ ಕಣ್ಣರೆಪ್ಪೆ ಇದ್ದಂತಲ್ಲವೇ? ಆಟೋಟಗಳಲ್ಲಿ ಬೇಕು ಬೇಕೆಂದೇ ತಾನೇ ಸೋತು, ಮಗನ ಮುಖದಲ್ಲಿ ಗೆಲುವಿನ ಖುಷಿಯನ್ನು ಕಂಡು ಸಂತಸ ಪಡುವವನ ಹೆಸರೇ ಅಪ್ಪನೆಂದಲ್ಲವೇ? ಅಮ್ಮನ ಕಂಬನಿ ಕಂಡಷ್ಟು, ಅಪ್ಪನ ಬೆವರಿನ ಹನಿ, ಮಕ್ಕಳಿಗೆ ಕಾಣಿಸುವುದೇ ಇಲ್ಲ. ಅಮ್ಮ ಮಕ್ಕಳಿಗೆ ತುತ್ತು ನೀಡುತ್ತಾಳೆ; ಆದರೆ ಆ ತುತ್ತು ಅಪ್ಪನ ದುಡಿಮೆಯೇ ಫಲವೆಂಬುದನ್ನು ಕೆಲವು ಮಕ್ಕಳು ಮರೆತು ಬಿಡುತ್ತಾರೆ. ತನ್ನ ಪಂಚೆ ಹರಿದು ಹೋಗಿದ್ದರೂ ತನ್ನ ಬನಿಯನ್​ನಲ್ಲಿ ತೂತುಗಳಾಗಿದ್ದರೂ ಮಕ್ಕಳಿಗೆ ಹೊಸ ಬಟ್ಟೆಯನ್ನು

ಕೊಡಿಸಿ, ತೊಡಿಸಿ, ಖುಷಿಪಟ್ಟವ, ತನ್ನ ಹುಟ್ಟು ಹಬ್ಬವನ್ನು ಆಚರಿಸದೇ ಇದ್ದರೂ, ಮಕ್ಕಳ ಹುಟ್ಟುಹಬ್ಬವನ್ನು ತಪ್ಪದೇ ಆಚರಿಸಿದವ, ತನಗೆ ಹೆಚ್ಚು ಓದಲು ಸಾಧ್ಯವಾಗದಿದ್ದರೂ, ಕಷ್ಟಪಟ್ಟಾದರೂ ಸರಿ, ಸಾಲ ಮಾಡಿಯಾದರೂ ಸರಿ, ಮಕ್ಕಳಿಗೆ ಓದಿಸಿದವ, ನಾನು ಏರದ ಎತ್ತರವನ್ನು ನನ್ನ ಮಕ್ಕಳು ಏರಬೇಕು ಎಂದು ಮನಸಾರೆ ಆಶಿಸಿ, ಅದಕ್ಕಾಗಿ ಎಲ್ಲವನ್ನೂ ತ್ಯಾಗಮಾಡಲು ಸಿದ್ಧನಾಗಿರುವ ವ್ಯಕ್ತಿ ಯಾರಾದರೂ ಇದ್ದರೆ, ಆತ ಇನ್ಯಾರೂ ಆಗಿರಲು ಸಾಧ್ಯವಿಲ್ಲ! ನಮ್ಮ ಅಪ್ಪನೇ ಆಗಿರಬೇಕು! ತನ್ನ 10ನೇ ವಯಸ್ಸಿನಲ್ಲಿ ನಮ್ಮಪ್ಪನಿಗೆ ಎಷ್ಟೊಂದು ಗೊತ್ತು! ಎಂದು ಅಂದುಕೊಂಡಿದ್ದ ಮಗ, ತನ್ನ 20ನೇ ವಯಸ್ಸಿನಲ್ಲಿ ಅಪ್ಪನಿಗೆ ಗೊತ್ತಿರುವಷ್ಟು ನನಗೂ ಗೊತ್ತು ಎಂದು ತಿಳಿದುಕೊಳ್ಳಲಾರಂಭಿಸುತ್ತಾನೆ. 30ನೇ ವಯಸ್ಸಿನಲ್ಲಿ ಈ ಅಪ್ಪನಿಗೆ ಅಷ್ಟೇನೂ ಗೊತ್ತಿಲ್ಲವೆಂಬ ತೀರ್ವನಕ್ಕೆ ಬಂದ ಇವನಿಗೆ ತನ್ನ 40ನೇ ವಯಸ್ಸಿನಲ್ಲಿ ಅಪ್ಪನ ಬುದ್ಧಿವಾದಗಳು ಅಷ್ಟಾಗಿ ಹಿಡಿಸುವುದಿಲ್ಲ. ಆದರೆ ತನ್ನ 50ನೇ ವಯಸ್ಸಿನಲ್ಲಿ ಅಪ್ಪ ಹೇಳಿದ್ದರಲ್ಲೂ ಸ್ವಲ್ಪ ಸತ್ಯಾಂಶವಿತ್ತು ಎಂದೆನಿಸಲು ಆರಂಭಿಸಿ, 60ನೇ ವಯಸ್ಸಿನಲ್ಲಿ ಅಪ್ಪ ಹೇಳಿದ್ದೆಲ್ಲವೂ ಸತ್ಯವೆಂಬುದು ಖಾತ್ರಿಯಾಗುತ್ತದೆ. ಆದರೆ ಅಷ್ಟು ಹೊತ್ತಿಗೆ, ಅಪ್ಪನೇ ಇಲ್ಲವಾಗುತ್ತಾನೆ! ಅಪ್ಪನನ್ನು ಅರಿತುಕೊಳ್ಳಲು 60 ವರುಷಗಳೇ ಬೇಕಾಯಿತು ಈ ಮಗನಿಗೆ! ಹೀಗಾಗಲೇ ಬೇಕೇ? ಅಪ್ಪನನ್ನು ತೆಪ್ಪಗಾಗಿರಿಸದಿರೋಣ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net