ವಿಧಾನ ಮಂಡಲ ಕಾರ್ಯಕಲಾಪಕ್ಕೆ ಡಿಜಿಟಲ್ ಸ್ಪರ್ಶ

ಇ-ವಿಧಾನ ಅನುಷ್ಠಾನಕ್ಕೆ ಸಭಾಪತಿ ಸಲೀಂ ಅಹ್ಮದ್ ಮತ್ತೆ ಚಾಲನೆ, ಕಾರ್ಯದರ್ಶಿ ನೇತೃತ್ವದಲ್ಲಿ ಕಮಿಟಿ ರಚನೆ, ಸಿಎಂ ಜತೆಗೆ ಚರ್ಚೆಗೆ ಸಿದ್ಧತೆ
vidhana soudha
vidhana soudha
Published on: 

ಬೆಂಗಳೂರು: ರಾಜ್ಯ ವಿಧಾನ ಮಂಡಲದ (ವಿಧಾನಸಭೆ, ಪರಿಷತ್) ಕಾರ್ಯಕಲಾಪಗಳನ್ನು ಕಾಗದರಹಿತ ಮಾಡುವ ‘ಇ-ವಿಧಾನ’ ಯೋಜನೆ ಅನುಷ್ಠಾನಕ್ಕೆ ಮತ್ತೆ ಚಾಲನೆ ದೊರೆತಿದೆ.

ಮಹತ್ವಾಕಾಂಕ್ಷಿ ಡಿಜಿಟಲೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಷನ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅನುಷ್ಠಾನ ಮಾಡಲು ಒಡಂಬಡಿಕೆಯಾಗಿದೆ. ವಿಧಾನಸಭೆಯ ಹಿಂದಿನ ಸ್ಪೀಕರ್ ಯು.ಟಿ. ಖಾದರ್, ಸಭೆಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಆದರೆ, ಪರಿಷತ್‌ನಲ್ಲಿ ಯಾವುದೇ ಪ್ರಕ್ರಿಯೆ ಶುರುವಾಗಿರಲಿಲ್ಲ. ಇದೀಗ ಸಭಾಪತಿ ಸಲೀಂ ಅಹ್ಮದ್ ಹಾಗೂ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಮಿಟಿ ರಚನೆ ಮಾಡಿ ಮತ್ತೆ ಇ-ವಿಧಾನ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ.

ಈ ಹಿನ್ನೆಲೆ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿದ್ದು, ಸ್ಪೀಕರ್ ಜಿ.ಎಸ್. ಪಾಟೀಲ್ ಜತೆ ಸಭೆ ನಡೆಸಲಿದ್ದಾರೆ. ಇದಾದ ಮೇಲೆ ಸಭಾಪತಿ ಮತ್ತು ಸ್ಪೀಕರ್ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಸಭೆ ನಡೆಸಿ ಅನುಷ್ಠಾನ ಸಂಬಂಧ ಚರ್ಚೆ ನಡೆಸಲಿದ್ದಾರೆ. ಕೆಳಮನೆ ಮತ್ತು ಮೇಲ್ಮನೆಯಲ್ಲಿ ಇ-ವಿಧಾನ ಅನುಷ್ಠಾನ ಮಾಡಿದಾಗ ಅದರ ಸಾಧಕ- ಬಾಧಕಗಳ ಬಗ್ಗೆ ಕೂಲಂಕಶವಾಗಿ ವಿಷಯ ವಿನಿಮಯ ಮಾಡಲಿದ್ದಾರೆ. ಈಗಾಗಲೇ 20ಕ್ಕೂ ಅಧಿಕ ರಾಜ್ಯಗಳಲ್ಲಿ ಇ-ವಿಧಾನ ಯೋಜನೆ ಅನುಷ್ಠಾನವಾಗಿದೆ. ಕರ್ನಾಟಕದಲ್ಲಿ ಜಾರಿಗೆ ತಂದಾಗ ಏನೆಲ್ಲ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಪರಸ್ಪರ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ವಿಧಾನ ಪರಿಷತ್ ಕಮಿಟಿ ಮುಂದಾಗಿದೆ.

ಅಗತ್ಯ ತರಬೇತಿ ಕೊಟ್ಟು ಜಾರಿಗೆ ದಾಖಲೆಗಳು ಕಳೆದುಹೋಗುವ ಭಯ ಇರುವುದಿಲ್ಲ ಹಾಗೂ ಯಾವುದೇ ಮಾಹಿತಿ ಅಥವಾ ಪ್ರಶ್ನೆಗಳನ್ನು ಶಾಸಕರು ಇ-ಮೇಲ್ ಮೂಲಕವೇ ಕಳುಹಿಸಿ, ಸಚಿವಾಲಯದಿಂದ ಶೀಘ್ರ ಉತ್ತರ ಪಡೆಯಬಹುದು. ಆರಂಭದಲ್ಲಿ ಹಳೆಯ ಪದ್ಧತಿಯನ್ನು ಉಳಿಸಿಕೊಂಡು ಡಿಜಿಟಲ್ ಸೇವೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಶಾಸಕರಿಗೆ ಹೊಸ ವ್ಯವಸ್ಥೆಯನ್ನು ಬಳಸಲು ಪ್ರತ್ಯೇಕ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ನಿಧಾನವಾಗಿ ಭೌತಿಕ ದಾಖಲೆ ಕೊಡುವ ವ್ಯವಸ್ಥೆಯನ್ನು ಕೈಬಿಡುವುದರ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಸಲೀಂ ಅಹ್ಮದ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ಹಣ ಭರಿಸಲಿವೆ. ಬೆಂಗಳೂರು ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧ ಎರಡರಲ್ಲೂ ಇದನ್ನು ಅಳವಡಿಸಲಾಗುತ್ತಿದ್ದು, ವಿಧಾನಸಭೆಯ ಡಿಜಿಟಲೀಕರಣಕ್ಕೆ 78 ಕೋಟಿ ರೂ. ಹಾಗೂ ಪರಿಷತ್ತಿಗೆ 52 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. ಶಾಸನಸಭೆಯ ದಾಖಲೆಗಳ ಮುದ್ರಣಕ್ಕಾಗಿ ಪ್ರತಿವರ್ಷ ವ್ಯಯಿಸುತ್ತಿದ್ದ ಅಂದಾಜು 30 ಕೋಟಿ ರೂ. ವೆಚ್ಚ ಉಳಿತಾಯವಾಗಲಿದೆ. ಕಾಗದದ ಬಳಕೆ ಸಂಪೂರ್ಣ ನಿಲ್ಲುವುದರಿಂದ ಲಕ್ಷಾಂತರ ಟನ್ ಕಾಗದ ಉಳಿದು ಪರಿಸರ ಮಾಲಿನ್ಯ ಮತ್ತು ಕಾರ್ಬನ್ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯವಿಧಾನ ಮತ್ತು ಸೌಲಭ್ಯಗಳು

ಡಿಜಿಟಲ್ ಡಾಕ್ಯುಮೆಂಟ್ಸ್: ಅಧಿವೇಶನ ದಿನದ ಕಾರ್ಯಸೂಚಿ, ಚುಕ್ಕೆ ಗುರುತಿನ ಮತ್ತು ಚುಕ್ಕೆ ಗುರುತಿಲ್ಲದ ಪ್ರಶ್ನೋತ್ತರಗಳು ಹಾಗೂ ವಿವಿಧ ವಿಧೇಯಕಗಳನ್ನು ಶಾಸಕರು ಡಿಜಿಟಲ್ ರೂಪದಲ್ಲೇ ಪಡೆಯಲಿದ್ದಾರೆ.

ಐಪಾಡ್‌ಗಳ ಅಳವಡಿಕೆ: ಸದನದಲ್ಲಿ ಶಾಸಕರು ಹಾಗೂ ಸಚಿವರ ಮೇಜುಗಳಿಗೆ ಬಯೋಮೆಟ್ರಿಕ್ ಸೌಲಭ್ಯವುಳ್ಳ ಐಪಾಡ್‌ಗಳನ್ನು ಅಳವಡಿಸಲಾಗುತ್ತದೆ. ಅಧಿವೇಶನ ಮುಗಿದ ನಂತರ ಇವುಗಳನ್ನು ಸುರಕ್ಷಿತವಾಗಿ ತೆಗೆದಿರಿಸಲಾಗುತ್ತದೆ.

ಡಿಜಿಟಲ್ ಹಾಜರಾತಿ: ಸಾಂಪ್ರದಾಯಿಕ ರಿಜಿಸ್ಟರ್ ಸಹಿಯ ಬದಲಾಗಿ, ಫಿಂಗರ್‌ಪ್ರಿಂಟ್ ಅಥವಾ ಮೊಬೈಲ್/ ಐಪಾಡ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತರಲಾಗುತ್ತದೆ.

ಡಿಜಿಟಲ್ ಗ್ರಂಥಾಲಯ: ವಿಧಾನಸಭೆಯ ಲೈಬ್ರರಿಯಲ್ಲಿರುವ ಪುಸ್ತಕಗಳು ಮತ್ತು ದಾಖಲೆಗಳನ್ನು ಸಹ ಡಿಜಿಟಲ್ ರೂಪದಲ್ಲಿ ಒದಗಿಸಲಾಗುತ್ತದೆ.