

ಬೆಂಗಳೂರು : ಪುಸ್ತಕವನ್ನು ಓದುವುದರಿಂದ ಮಾತ್ರ ಅದರ ಆಶಯ ಸಾಕಾರವಾಗುವುದಿಲ್ಲ; ಪುಸ್ತಕದಲ್ಲಿ ಪ್ರತಿಪಾದಿಸಿರುವ ವ್ಯಕ್ತಿಯ ಆದರ್ಶಗಳು ಬದುಕಿನಲ್ಲಿ ಅಳವಡಿಕೆಯಾದಾಗ ಆ ಪುಸ್ತಕ ಸಾರ್ಥಕವಾಗುತ್ತದೆ ಎಂದು ಉಡುಪಿ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ಪರಿಮಳ ಗೆಳೆಯರ ಬಳಗದ 51ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗುರುಗೋವಿಂದ ದರ್ಶನ ಕೃತಿ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.
ಹರಿದಾಸ ಪರಂಪರೆಯ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ತಮ್ಮ ಜೀವನದ ಸಂಪತ್ತನ್ನೇ ದಾಸ ಸಾಹಿತ್ಯ ಮತ್ತು ಭಕ್ತಿ ಪರಂಪರೆಗೆ ಧಾರೆ ಎರೆದ ಗುರುಗೋವಿಂದ ವಿಠಲದಾಸರ ಬದುಕು ಎಲ್ಲರಿಗೂ ಮಾದರಿಯಾದದ್ದು. ಕೆಲವರು ಜೀವನದಲ್ಲಿ ಸಂಪತ್ತು ಗಳಿಸುತ್ತಾರೆ. ಇನ್ನು ಕೆಲವರು ತಮ್ಮ ಬದುಕನ್ನೇ ಸಂಪತ್ತನ್ನಾಗಿ ಮಾಡಿಕೊಳ್ಳುತ್ತಾರೆ. ಗುರುಗೋವಿಂದ ವಿಠಲದಾಸರು ತಮ್ಮ ಬದುಕನ್ನೇ ಹರಿಭಕ್ತಿಯ ಪರಂಪರೆಗೆ ಸಮರ್ಪಿಸಿಕೊಂಡು, ನೂರಾರು ಶಿಷ್ಯರಿಗೆ ಅಂಕಿತ ಪ್ರದಾನ ಮಾಡಿ ಹರಿದಾಸ ಸಾಹಿತ್ಯದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು. ಹಾಗೆ ಅವರಿಂದ ಅಂಕಿತ ದೀಕ್ಷೆ ಪಡೆದು ಹರಿದಾಸ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿರುವವರಲ್ಲಿ ಪ್ರೊ.ಜಯಸಿಂಹ ಅವರು ಪ್ರಮುಖರು. ಜಯಸಿಂಹ ಅವರ ನೇತೃತ್ವದಲ್ಲಿ ಕಳೆದ 51 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪರಿಮಳ ಗೆಳೆಯರ ಬಳಗದ ಕಾರ್ಯ ಸ್ತುತ್ಯಾರ್ಹವಾದುದು. ರಾಯರ ಮತ್ತು ರಾಜರ ಅನುಗ್ರಹವೇ ಸಂಸ್ಥೆಯ ಸುದೀರ್ಘ ಪಯಣಕ್ಕೆ ಸಾಕ್ಷಿ ಎಂದು ಸ್ವಾಮೀಜಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಅಕ್ಷೋಭ್ಯ ಮಠದ ಶ್ರೀ ರಾಮಪ್ರಿಯತೀರ್ಥ ಶ್ರೀಪಾದರು ಹಾಗೂ ಗುರುಗೋವಿಂದ ವಿಠಲ ದಾಸರ ಪುತ್ರರಾದ ಮಾಧವರಾಯರು ಉಪಸ್ಥಿತರಿದ್ದರು.
16 ಸಾಧಕರಿಗೆ ಪರಿಮಳ ಪ್ರಶಸ್ತಿ ಪ್ರದಾನ
ವಿಶ್ರಾಂತ ನ್ಯಾಯಮೂರ್ತಿ ಉಮೇಶ ಅಡಿಗ, ಹಿರಿಯ ನಟ ಸುಂದರರಾಜ್, ರಂಗಕರ್ಮಿ ಕೆ.ಸುಚೇಂದ್ರ ಪ್ರಸಾದ್, ಹಿರಿಯ ಸುಗಮ ಸಂಗೀತ ಗಾಯಕ ಗರ್ತಿಕೆರೆ ರಾಘಣ್ಣ, ಆಧ್ಯಾತ್ಮ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿಜಯವಾಣಿ ಹಿರಿಯ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 16 ಸಾಧಕರನ್ನು ಗುರುತಿಸಿ ಅವರಿಗೆ ಪರಿಮಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.