ರೈತನಿಗೆ ಬರೆ ಗ್ರಾಹಕನಿಗೂ ಹೊರೆ

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಜಮೀನೊಂದರಲ್ಲಿ ಬೆಳೆದಿರುವ ಹೆಸರು ಸಂಪೂರ್ಣ ಒಣಗಿರುವುದು.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಜಮೀನೊಂದರಲ್ಲಿ ಬೆಳೆದಿರುವ ಹೆಸರು ಸಂಪೂರ್ಣ ಒಣಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೆಸರು, ಉದ್ದು, ಸೋಯಾಬೀನ್​, ಹತ್ತಿ ಢಮಾರ್
  • ಉತ್ಪಾದನೆ ಕೊರತೆಯಿಂದ ದರ ದುಪ್ಪಟ್ಟು ಸಾಧ್ಯತೆ
ಕಲಬುರಗಿ: ಮುಂಗಾರು ಮಳೆ ಅಭಾವದಿಂದಾಗಿ ಲಕ್ಷಾಂತರ ಹೆಕ್ಟೇರ್​ ಉದ್ದು, ಹೆಸರು, ಸೋಯಾ ಸೇರಿ ಪ್ರಮುಖ ವಾಣಿಜ್ಯ ಬೆಳೆಗಳು ಮಣ್ಣುಪಾಲಾಗಿದ್ದು, ರೈತನ ಬದುಕು ಬೀದಿಗೆ ಬಂದಿದೆ. ಇನ್ನೊಂದೆಡೆ ಈ ಉತ್ಪನ್ನ ಕೊರತೆಯುಂಟಾಗಿ ಮಾರುಕಟ್ಟೆಯಲ್ಲಿ ದರ ದುಪ್ಪಟ್ಟು ಕಂಡು ಸಾಮಾನ್ಯ ಗ್ರಾಹಕರ ಮೇಲೂ ಭಾರಿ ಹೊರೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲೆಯಲ್ಲಿ ಹೆಸರು 54 ಸಾವಿರ ಹೆಕ್ಟೇರ್​ ಗುರಿಗೆ 34753 ಹೆಕ್ಟೇರ್​ ಬಿತ್ತನೆ (ಶೇ.64)ಯಾಗಿದೆ. ಉದ್ದು ಗುರಿ 25 ಸಾವಿರ ಹೆಕ್ಟೇರ್​ನಲ್ಲಿ 12631 ಹೆಕ್ಟೇರ್​ ಬಿತ್ತನೆ (ಶೇ.51), ಸೋಯಾಬೀನ್​ 23 ಸಾವಿರ ಹೆಕ್ಟೇರ್​ ಗುರಿ ಪೈಕಿ 15040 ಹೆಕ್ಟೇರ್​ ಬಿತ್ತನೆ (ಶೇ.65), ಹತ್ತಿ ಒಂದು ಲಕ್ಷ ಹೆಕ್ಟೇರ್​ನಲ್ಲಿ 62792 ಹೆಕ್ಟೇರ್​(ಶೇ.63), ಸಜ್ಜೆ 600 ಹೆಕ್ಟೇರ್​ನಲ್ಲಿ ಕೇವಲ 80, ಕಬ್ಬು 45000 ಹೆಕ್ಟೇರ್​ನಲ್ಲಿ 35007 ಹೆಕ್ಟೇರ್​ (ಶೇ.78) ಬಿತ್ತನೆಯಾಗಿದೆ.
ಉದ್ದು, ಹೆಸರು ಮತ್ತು ಸೋಯಾ ರಾಶಿ ಹಂತಕ್ಕೆ ತಲುಪಬೇಕಿತ್ತು. ಉದ್ದು, ಹೆಸರು ಆಗಸ್ಟ್​ನಲ್ಲಿ, ಸೋಯಾ ಸೆಪ್ಟೆಂಬರ್​ನಲ್ಲಿ ರಾಶಿ ಮಾಡಲಾಗುತ್ತಿದೆ. ಆದರೆ ಜಮೀನಿನಲ್ಲಿ ಈ ಬೆಳೆ ಕಂಡು ರೈತ ಕಣ್ಣೀರಿಡುತ್ತಿದ್ದಾನೆ. ಜತೆಗೆ ಹತ್ತಿಯೂ ಸಂಪೂರ್ಣ ಮಣ್ಣು ಪಾಲಾಗಿದ್ದು, ಸಜ್ಜೆ ಬಿತ್ತಿದಷ್ಟೂ ಢಮಾರ್​ ಎಂದಿದೆ.
ಜಿಲ್ಲೆಯಲ್ಲಿ ಸಮೃದ್ಧಿ ಮಳೆಯಾಗಿದ್ದರೆ 3.5 ಲಕ್ಷ ಕ್ಟಿಂಟಾಲ್​ ಹೆಸರು, 1.50&2 ಲಕ್ಷ ಕ್ವಿಂ. ಉದ್ದು, ಸೋಯಾಬೀನ್​ ಸುಮಾರು 3.50 ಲಕ್ಷ ಕ್ಟಿಂ. ಹಾಗೂ ಹತ್ತಿ 8&10 ಲಕ್ಷ ಕ್ಟಿಂ. ಉತ್ಪಾದನೆ ಆಗಬಹುದಾಗಿತ್ತು. ಆದರೆ ಪ್ರಸಕ್ತ ಈ ಬೆಳೆಗಳು ಉತ್ಪಾದನೆ ಶೂನ್ಯ ಎಂಬಷ್ಟರ ಮಟ್ಟಿಗೆ ಒಣಗಿದ್ದು, ಮಳೆಯಾದರೂ ಮೇಲೇಳದಂಥ ಸ್ಥಿತಿಗೆ ತಲುಪಿವೆ.
ಮಾರುಕಟ್ಟೆಯಲ್ಲಿ ಹೆಸರು ಕ್ವಿಂಟಾಲ್​ಗೆ 6000&7700, ಉದ್ದು 6500&7200, ಸೋಯಾಬೀನ್​ 6900&7200 ರೂ. ದರದಲ್ಲಿ ಮಾರಾಟವಾಗುತ್ತಿದೆ. ಹಾಗೊಂದು ವೇಳೆ ಸಮೃದ್ಧವಾಗಿ ಬೆಳೆದಿದ್ದರೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿತ್ತು. ಮಣ್ಣು ಪಾಲಾಗಿದ್ದರಿಂದ ದರದಲ್ಲಿ ದಿಢೀರ್​ ಏರಿಕೆ ಕಾಣುವ ಲಕ್ಷಣ ಗೋಚರಿಸಿದ್ದು, ರೈತರ ಜತೆಗೆ ಗ್ರಾಹಕರ ಜೇಬಿಗೂ ದೊಡ್ಡ ಕತ್ತರಿ ಬೀಳಲಿದೆ.
2024&25 ಮತ್ತು 2025&26ಲ್ಲಿ ಕಲಬುರಗಿ ಎಪಿಎಂಸಿಗೆ ಹೆಸರು 74261 ಕ್ವಿಂ. ಬಂದರೆ, ದರ 6300 ರೂ. ಇತ್ತು. ಉದ್ದು 35774 ಕ್ವಿಂ. ದರ 5400, ಸೋಯಾಬೀನ್​ 11754 ಕ್ವಿಂ., ದರ 4200 ರೂ. ಇತ್ತು.
ಮಧ್ಯಂತರ ಪರಿಹಾರ ಶಿಫಾರಸು: ಉದ್ದು, ಹೆಸರು ಮತ್ತು ಸೋಯಾಬೀನ್​ ಬೆಳೆ ಹಾಳಾಗಿದೆ ಎಂಬ ಕಾರಣಕ್ಕೆ ಅಧ್ಯಯನ ನಡೆಸುತ್ತಿರುವ ಕೃಷಿ ಇಲಾಖೆ ಬೆಳೆವಿಮೆಯ ಮಧ್ಯಂತರ ಪರಿಹಾರಕ್ಕೆ ಕೇಂದ್ರ ಕಚೇರಿಗೆ ಶಿಫಾರಸು ಮಾಡಲು ಸಿದ್ಧತೆ ನಡೆಸಿದೆ. ಹೆಸರು 16924.5 ಹೆಕ್ಟೇರ್​ಗೆ 19774 ರೈತರು ನೋಂದಾಯಿಸಿದ್ದಾರೆ. ಉದ್ದು 4844.70 ಹೆಕ್ಟೇರ್​ಗೆ 7099 ರೈತರು, ಸೋಯಾಬೀನ್​ 4351.21 ಹೆಕ್ಟೇರ್​ಗೆ 7391 ರೈತರ ನೋಂದಣಿಯಾಗಿದೆ. ಕೃಷಿ ಅಧಿಕಾರಿ ಮತ್ತು ಸಿಬ್ಬಂದಿ ಈ ಬೆಳೆಯ ಜಮೀನುಗಳಿಗೆ ಭೇಟಿ ನೀಟಿ ವಾಸ್ತವಾಂಶ ಕಲೆ ಹಾಕುತ್ತಿದ್ದು, ಮಧ್ಯಂತರ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಇದೀಗ ಮಳೆಯಾದರೂ ದೀರ್ಘಾವಧಿ ತೊಗರಿಗೆ ಮಾತ್ರ ಅನುಕೂಲವಾಗಲಿದೆ. ಹಾನಿಗೊಳಗಾದ ಹೆಸರು, ಉದ್ದು, ಸೋಯಾಬೀನ್​ ರೈತರು ಮತ್ತೆ ತೊಗರಿ ಬಿತ್ತನೆ ಮಾಡಿ ಹಾನಿ ಕೊಂಚ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದೆಲ್ಲವೂ ಮಳೆರಾಯನ ಕೃಪೆ ಆಧರಿಸಿದೆ. ತೊಗರಿ 6.30 ಲಕ್ಷ ಹೆಕ್ಟೇರ್​ ಗುರಿ ಪೈಕಿ 2.08 ಲಕ್ಷ ಹೆಕ್ಟೇರ್​ ಬಿತ್ತನೆ(ಶೇ.33) ಮಾತ್ರ ಪೂರ್ಣಗೊಂಡಿದೆ.
ಬೆಳೆ ವಿಮೆ: ಜು.29ರವರೆಗೆ ಜಿಲ್ಲೆಯಲ್ಲಿ 4.51 ಲಕ್ಷ ಹೆಕ್ಟೇರ್​ ಬೆಳೆಗೆ 3.85 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿದ್ದಾರೆ. ಕಳೆದ ವರ್ಷ 3.61 ಲಕ್ಷ ಹೆಕ್ಟೇರ್​ಕ್ಕೆ 3.01 ಲಕ್ಷ ರೈತರು ವಿಮೆಗೆ ನೋಂದಾಯಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ನೋಂದಣಿಗೆ ಜು.31 ಕೊನೆಯ ದಿನ. ರೈತರು ಆದ್ಯತೆ ಮೇರೆಗೆ ಬೆಳೆವಿಮೆ ನೋಂದಣಿ ಮಾಡಿ ಆಗಿರುವ ಹಾನಿ ಕೊಂಚ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ವರುಣನ ಹಾವು-ಏಣಿ ಆಟ
ಜುಲೈನಲ್ಲಿ 133.8 ಮಿಮೀ ವಾಡಿಕೆ ಮಳೆಯಲ್ಲಿ 87.6 ಮಿಮೀ ಸುರಿದಿದೆ. ಜೂನ್​ನಲ್ಲಿ 107.3 ಮಿಮೀ ವಾಡಿಕೆಯಲ್ಲಿ 69.2 ಮಿಮೀ, ಕಳೆದ 24 ಗಂಟೆ ಅವಧಿಯಲ್ಲಿ 4.9 ಮಿಮೀ ವಾಡಿಕೆ ಪೈಕಿ 26.9 ಮಿಮೀ ಮಳೆಯಾಗಿದೆ. ಕಳೆದೊಂದು ವಾರದಲ್ಲಿ 38.2 ಮಿಮೀ ವಾಡಿಕೆಯಲ್ಲಿ 38.1 ಮಿಮೀ ಮಳೆ ಬಂದಿದೆ. ಜೂನ್​&ಜುಲೈ ಸೇರಿ 241.1 ಮಿಮೀನಲ್ಲಿ 156.8 ಮಿಮೀ ಮಳೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆ. ಇಳುವರಿ ಮತ್ತು ಉತ್ಪಾದನೆ ಕುಂಠಿತ, ಜನ&ಜಾನುವಾರುಗಳಿಗೆ ಕುಡಿಯುವ ನೀರು, ದನಕರುಗಳಿಗೆ ಮೇವು ಅಭಾವ ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ.
"

ಇನ್​ಪುಟ್​ ದರ ಹೆಚ್ಚಾಗಿದೆ. ವಲಸೆಯಿಂದಾಗಿ ದುಡಿಯುವ ಕಾರ್ಮಿಕರ ಸಂಖ್ಯೆ ಕ್ಷೀಣಿಸಿದೆ. ಕೂಲಿದರ ಬೇಕಾಬಿಟ್ಟಿ ಏರಿಕೆಯಾಗಿದೆ. ಹೀಗಾಗಿ ಸರ್ಕಾರ ರೈತರ ಆದಾಯ ಇಕ್ವಿಟೇಬಲ್​ ಆಗುವವರೆಗೆ ಕೈಹಿಡಿಯಬೇಕು.

— > ಬಸವರಾಜ ಇಂಗಿನ್​ ಅಧ್ಯಕ್ಷ, ರಾಜ್ಯ ತೊಗರಿ ಬೆಳೆಗಾರರ ಸಂಘ
"

ಮುಂಗಾರಿನಲ್ಲಿ ಮಳೆ ಕೊರತೆಯಂತೂ ಇದೆ. ಹಾನಿಗೊಳಗಾದ ಉದ್ದು, ಹೆಸರು, ಸೋಯಾಬೀನ್​ ರೈತರು ಆ ಜಮೀನಿನಲ್ಲಿ ತೊಗರಿ ಬಿತ್ತಲು ಸಲಹೆ ನೀಡಲಾಗಿದೆ. ವಿಮೆ ಮಧ್ಯಂತರ ಪರಿಹಾರಕ್ಕೆ ಸಿದ್ಧತೆ ನಡೆದಿದೆ. ಇಲಾಖೆ ಅಧಿಕಾರಿ, ಸಿಬ್ಬಂದಿ ಫೀಲ್ಡ್​ ವಿಸಿಟ್​ ಮಾಡಿ ಪರಿಶೀಲನೆ ನಡೆಸುತ್ತಿದ್ದು, ಶ್ರೀವೇ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.

— > ಸಮದ್​ ಪಟೇಲ್​ ಜಂಟಿ ಕೃಷಿ ನಿರ್ದೇಶಕ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net