ಆಲೂರು: ಆರ್ಥಿಕವಾಗಿ ಸದೃಢರಾದಾಗ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.
ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ 2023-24 ಹಾಗೂ 2024-25 ನೇ ಸಾಲಿನ ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಜಮೀನಿನಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಕಾರ್ಯವು ಕೃಷಿ ಭೂಮಿಗೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಯಲು, ಪಂಪ್‌ಸೆಟ್ ಅಳವಡಿಸಲು ಮತ್ತು ವಿಧ್ಯುದ್ದೀಕರಣಕ್ಕಾಗಿ ಸಂಪೂರ್ಣ ಸಹಾಯಧನವನ್ನು ಒದಗಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು. ಕ್ಷೇತ್ರದಲ್ಲಿ ಒಟ್ಟು 35 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ತಲಾ ಒಂದು ಕೊಳವೆ ಬಾವಿಗೆ 3.75 ಲಕ್ಷ ರೂಗಳಂತೆ ಸುಮಾರು 1.32 ಕೋಟಿ ರೂ. ವೆಚ್ಚದಲ್ಲಿ ಫಲಾನುಭವಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಿದ್ದೇನೆ. ಬಡ ಹಾಗೂ ಮಧ್ಯಮ ವರ್ಗದ ರೈತರ ಜಮೀನಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆಯು ಒಂದು ಉತ್ತಮ ಯೋಜನೆಯಾಗಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಕೊಳವೆ ಬಾವಿ ಕೊರೆಯುವ ವೇಳೆ ಸರ್ಕಾರ ನಿಗದಿಪಡಿಸಿದ ಅಡಿಗಳನ್ನು ಕೊರೆಯುವ ಸಂದರ್ಭದಲ್ಲಿ ನೀರಿನ ಮೂಲ ಸಿಗಲು ಕೆಲವು ಅಡಿಗಳು ಬಾಕಿ ಇದ್ದರೆ ಕೊರೆಯುವ ಕಾರ್ಯ ಮುಂದುವರೆಸಿ.. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸುವಂತೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಡಿ. ದೇವರಾಜ್ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಕೇಶ್, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಹುಣಸುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾವನೂರು ಮೋಹನ್, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಪ್ಪ, ಬಿಜೆಪಿ ಮುಖಂಡರಾದ ಕಿರಣ್ ನವೀನ್ ಇತರರು ಇದ್ದರು.